ರಾಜಕಾರಣಿಗಳು ಕಲ್ಯಾಣ ಸಿದ್ಧಾಂತವನ್ನು, ಸರ್ಕಾರಗಳು ಕಲ್ಯಾಣ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುವುದು ಒಳ್ಳೆಯದು. ಆದರೆ ಆ ಗ್ಯಾರಂಟಿಗಳಿಗೆ ಸಂಪನ್ಮೂಲ ಸಂಗ್ರಹಿಸುವ ದೆಸೆಯಲ್ಲಿ, ಯಾರಿಂದ ಕಿತ್ತು ಯಾರಿಗೆ ಕೊಡಬೇಕು ಎನ್ನುವ ಅರಿವು ಇರಬೇಕಾದ್ದು ಇನ್ನೂ ಒಳ್ಳೆಯದು.
ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ, ಅದು ಕಾಂಗ್ರೆಸ್ ಪಕ್ಷಕ್ಕೆ ಕೊಂಚ ಹಿನ್ನಡೆಯಂತೆ ಕಾಣುತ್ತಿದ್ದಂತೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕರು, ಸಚಿವರು ಗ್ಯಾರಂಟಿ ಯೋಜನೆಗಳ ಕುರಿತು ಭಿನ್ನ ರಾಗ ಎಳೆಯತೊಡಗಿದರು. ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ಗ್ಯಾರಂಟಿ ಕೊಟ್ಟೂ ಸೋಲುವುದೆಂದರೆ, ನಿಲ್ಲಿಸಿಬಿಡಿ’ ಎಂದರು.
ಶಾಸಕರು ಮತ್ತು ಸಚಿವರ ಭಿನ್ನ ರಾಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಸ್ವರ ಸೇರಿಸಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿದರು. ಮಾಡಿದ್ದೂ ಅಲ್ಲದೆ, ‘ರಾಜ್ಯ ಸರ್ಕಾರದ ಮೌಲ್ಯವರ್ಧಿತ ತೆರಿಗೆಯಲ್ಲಾದ ಬದಲಾವಣೆಯಿಂದ ಸಂಗ್ರಹವಾಗುವ ಹಣವು ನಾಡಿನ ಜನರ ಮೂಲಭೂತ ಸೇವೆಗಳು ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಬಳಸಲ್ಪಡುತ್ತದೆ. ನಾವು ಸರ್ವರ ಹಿತಕಾಯಲು ಮತ್ತು ಜವಾಬ್ದಾರಿಯುತ ಸರ್ಕಾರವಾಗಿ ಮುನ್ನಡೆಯಲು ಬದ್ಧರಿದ್ದೇವೆ’ ಎಂದು ಸಮರ್ಥನೆಗೂ ಇಳಿದರು.
ಬೆಲೆ ಏರಿಕೆಯನ್ನೇ ಕಾಯುತ್ತಿದ್ದ ವಿರೋಧ ಪಕ್ಷಗಳು ಸರ್ಕಾರದ ಮೇಲೆ ಮುಗಿಬಿದ್ದವು. ಕೇಂದ್ರದ ಮೋದಿಯವರ ಸರ್ಕಾರ ಹತ್ತು ವರ್ಷಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಯನ್ನು ಹತ್ತು ಸಲ ಏರಿಸಿ ನೂರರ ಗಡಿ ದಾಟಿಸಿದರೂ ಕೇಳಲು ಧೈರ್ಯವಿಲ್ಲದ ಬಿಜೆಪಿಗರು, ರಾಜ್ಯ ಸರ್ಕಾರದ ಮೂರು ರೂಪಾಯಿಗಳ ಏರಿಕೆಯಲ್ಲಿ ಚಿಲ್ಲರೆ ರಾಜಕಾರಣ ಮಾಡತೊಡಗಿದರು. ಸಾಲದು ಎಂದು, ಮೊದಲಿನಿಂದಲೂ ಗ್ಯಾರಂಟಿ ಯೋಜನೆಗಳ ಕುರಿತು ಕಿಡಿ ಕಾರುತ್ತಿದ್ದ ಬಿಜೆಪಿ ಮತ್ತು ಗೋದಿ ಮೀಡಿಯಾ, ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯನ್ನು ಸ್ವಹಿತಾಸಕ್ತಿಗೆ ಬಳಸಿಕೊಂಡರು. ಬಿಜೆಪಿಗರ ಪ್ರತಿಭಟನೆ ಮತ್ತು ಗೋದಿ ಮೀಡಿಯಾಗಳಿಂದ ಅದಕ್ಕೆ ಸಿಕ್ಕ ವ್ಯಾಪಕ ಪ್ರಚಾರದಿಂದ ಒಂದೇ ದಿನದಲ್ಲಿ ರಾಜ್ಯ ಸರ್ಕಾರ ಜನವಿರೋಧಿ ಸರ್ಕಾರವಾಗಿ ಬದಲಾಗಿಹೋಯಿತು.
ಅಷ್ಟೇ ಅಲ್ಲ, ‘ರಾಜ್ಯದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿಲ್ಲ. ಸುಳ್ಳು ಹೇಳುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಸಕ್ತ ವರ್ಷ 1.5 ಲಕ್ಷ ಕೋಟಿ ರೂ.ಗಳ ಸಾಲ ಮಾಡಿದ್ದು, 25 ಸಾವಿರ ಎಕರೆ ಸರ್ಕಾರಿ ಭೂಮಿಯನ್ನು ಮಾರಾಟಕ್ಕಿಟ್ಟಿದ್ದಾರೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಒಬ್ಬರ ಜೇಬಿನಿಂದ ಕದ್ದು, ಇನ್ನೊಬ್ಬರ ಜೇಬಿಗೆ ಹಣ ಹಾಕುತ್ತಿರುವುದೇ ಕಾಂಗ್ರೆಸ್ ಸರ್ಕಾರದ ಸಾಧನೆ’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಲೇವಡಿ ಮಾಡಿದರು.
ಅಷ್ಟಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಐದು ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸಕ್ಕೆ ಯಾವ ತೊಂದರೆಯೂ ಇಲ್ಲ ಎಂದು ಹೇಳಿದ್ದಾರೆ. ಅವರ ಲೆಕ್ಕಾಚಾರದಂತೆ ಆ ಗ್ಯಾರಂಟಿಗಳಿಗೆ ವರ್ಷಕ್ಕೆ 50ರಿಂದ 60 ಸಾವಿರ ಕೋಟಿ ಬೇಕಾಗಿದೆ. 2023-24ರಲ್ಲಿ ಐದು ಗ್ಯಾರಂಟಿಗಳಿಗೆ 36 ಸಾವಿರ ಕೋಟಿ ವೆಚ್ಚವಾಗಿದೆ. ಪ್ರಸಕ್ತ ವರ್ಷಕ್ಕೆ ಅದು 52,009 ಕೋಟಿ ರೂ.ಗಳಾಗಬಹುದೆಂದು ಅಂದಾಜಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೇಳಿದಂತೆ, ರಾಜ್ಯದ 5.10 ಕೋಟಿ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳಿಂದ ಅನುಕೂಲವಾಗುತ್ತಿದೆ. ಜನರಲ್ಲಿ ಬರ-ನೆರೆ-ಗುಳೆಯನ್ನು ನಿಭಾಯಿಸುವ ಶಕ್ತಿ ತುಂಬಿದೆ. ಅದರಲ್ಲೂ ಶಕ್ತಿ ಯೋಜನೆಯಿಂದ ರಸ್ತೆ ಸಾರಿಗೆ ನಿಗಮಗಳು ಆದಾಯದತ್ತ ಹೊರಳಿವೆ. 2022-23 ರಲ್ಲಿ 3,349 ಕೋಟಿ ಗಳಿಸಿದರೆ, 2023-24 ರಲ್ಲಿ 3,930 ಕೋಟಿ ರೂ. ಸಂಗ್ರಹವಾಗಿ ದಾಖಲೆ ಬರೆದಿದೆ. ಅರ್ಥಶಾಸ್ತ್ರಜ್ಞರು ಉಚಿತ ಸಾರ್ವಜನಿಕ ಸಾರಿಗೆಯಿಂದ ಪರಿಸರ ಮತ್ತು ಸಾಮಾಜಿಕ ಪ್ರಯೋಜನಗಳಿಗೆ ಕಾರಣವಾಗಿದೆ ಎಂದಿದ್ದಾರೆ. ಹಾಗೂ ಆರ್ಥಿಕ ಚಲನಶೀಲತೆಗೆ ಅನುಕೂಲವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಇದಲ್ಲದೆ, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲು, ತನ್ನದೇ ಆದ ಆದಾಯದ ಮೂಲಗಳಾದ ಮುದ್ರಾಂಕ ಶುಲ್ಕ ಹಾಗೂ ಮದ್ಯ ಮಾರಾಟ ತೆರಿಗೆ ಹೆಚ್ಚಳವನ್ನು ಮಾಡಲಾಗಿದೆ. ಈ ಎರಡು ಮೂಲಗಳ ಹೆಚ್ಚಳದಿಂದ ಜನರಿಗೆ ಅಂತಹ ತೊಂದರೆಯಾಗಿಲ್ಲ. ಆ ಮೂಲಗಳಿಂದ ಬಂದ ಹಣವೂ ಸರ್ಕಾರಕ್ಕೆ ಸಾಕಾಗಿಲ್ಲ. ಹಾಗೆಯೇ ಪೆಟ್ರೋಲ್ ಮತ್ತು ಡೀಸೆಲ್ ಏರಿಕೆಯಿಂದ, ಅಬ್ಬಬ್ಬಾ ಎಂದರೆ ವರ್ಷಕ್ಕೆ ಆರು ಸಾವಿರ ಕೋಟಿ ಸಿಗಬಹುದು. ಅದರಿಂದ ಅಂತಹ ವ್ಯತ್ಯಾಸವೇನೂ ಆಗುವುದಿಲ್ಲ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸಾಹಿತಿಗಳ ಸ್ವಾಭಿಮಾನ, ಸ್ವಾಯತ್ತತೆ ಮತ್ತು ಸಂಸ್ಕೃತಿ ಸಚಿವರ ತಿಪ್ಪೆ ಸಾರಿಸುವಿಕೆ
ಆದರೆ, ತೈಲ ಬೆಲೆ ಏರಿಕೆಯಿಂದ ಸರಕು-ಸಾಗಾಟದ ಮೇಲೆ ನೇರ ಪರಿಣಾಮ ಬೀರುತ್ತದೆ. ಅದು ಅಗತ್ಯ ವಸ್ತುಗಳ ಬೆಲೆ ಏರಿಸುತ್ತದೆ. ಅದು ಬಡವರು ಮತ್ತು ಮಧ್ಯಮವರ್ಗದವರ ಜೇಬಿಗೆ ಕತ್ತರಿ ಹಾಕುತ್ತದೆ. ಅದರ ಪ್ರಮಾಣ ಎಷ್ಟು ಎನ್ನುವುದು ಅಂದಾಜಿಗೂ ಸಿಗುವುದಿಲ್ಲ. ಹಾಗಾಗಿ ಇದು ಸರ್ಕಾರದ ಸರಿಯಾದ ನಡೆಯಲ್ಲ.
ಅಷ್ಟಕ್ಕೂ ಮುಖ್ಯಮಂತ್ರಿಗಳು ಹೇಳುತ್ತಿರುವ ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಎನ್ನುವ ಕಾರಣವೂ ಸರಿಯಲ್ಲ. ಸಂಪನ್ಮೂಲ ಕ್ರೋಡೀಕರಣ ಮಾಡಬೇಕಿರುವುದು ಸಂಪನ್ಮೂಲ ಇರುವ ಶ್ರೀಮಂತರಿಂದಲೇ ಹೊರತು ಬಡ ಮತ್ತು ಮಧ್ಯಮವರ್ಗದವರಿಂದಲ್ಲ. 15 ಬಜೆಟ್ ಮಂಡಿಸಿ ಖ್ಯಾತಿ ಗಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಾಜ್ಯದ ಆರ್ಥಿಕ ಸ್ಥಿತಿ ಕುರಿತು ಪಾಠ ಮಾಡುವ ಅಗತ್ಯವಿಲ್ಲ.
ಆದರೂ ವೆಚ್ಚ ಕಡಿತಗೊಳಿಸುವ, ಸಂಪನ್ಮೂಲ ಕ್ರೋಡೀಕರಿಸುವ ಇರಾದೆ ರಾಜ್ಯ ಸರ್ಕಾರಕ್ಕಿದ್ದರೆ, ಸಚಿವ ಸಂಪುಟ ಸ್ಥಾನಮಾನದಂತಹ ದುಬಾರಿ ನೇಮಕಾತಿಗಳಿಗೆ ಮೊದಲು ಕಡಿವಾಣ ಹಾಕಬೇಕು. ವರ್ಗಾವಣೆಯನ್ನು ‘ದಂಧೆ’ಯಿಂದ ಮುಕ್ತಗೊಳಿಸಬೇಕು. ಆಡಳಿತ ಯಂತ್ರಾಂಗಕ್ಕೆ ಚುರುಕು ಮುಟ್ಟಿಸಬೇಕು. ಸಚಿವರು ಜಡತ್ವ ಕೊಡವಿಕೊಂಡು ಜನರತ್ತ ಧಾವಿಸಿ ಸರ್ಕಾರ ಜೀವಂತವಿರುವ ಬಗ್ಗೆ ಸಾಬೀತುಪಡಿಸಬೇಕು. ಹಾಗೆಯೇ ಮೋದಿ ಪರ ತುತ್ತೂರಿ ಊದುತ್ತಿರುವ ಮಾಧ್ಯಮಗಳಿಗೆ ನೀಡುವ ಅನಗತ್ಯ ಜಾಹೀರಾತುಗಳ ಬಗ್ಗೆಯೂ ಗಂಭೀರವಾಗಿ ಯೋಚಿಸಬೇಕು.
ರಾಜಕಾರಣಿಗಳು ಕಲ್ಯಾಣ ಸಿದ್ಧಾಂತವನ್ನು, ಸರ್ಕಾರಗಳು ಕಲ್ಯಾಣ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುವುದು ಒಳ್ಳೆಯದು. ಆದರೆ ಆ ಗ್ಯಾರಂಟಿಗಳಿಗೆ ಸಂಪನ್ಮೂಲ ಸಂಗ್ರಹಿಸುವ ದೆಸೆಯಲ್ಲಿ, ಯಾರಿಂದ ಕಿತ್ತು ಯಾರಿಗೆ ಕೊಡಬೇಕು ಎನ್ನುವ ಅರಿವು ಇರಬೇಕಾದ್ದು ಇನ್ನೂ ಒಳ್ಳೆಯದು.
