ಕಳೆದ ವರ್ಷ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್ ಹಾಗೂ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ ಪೆಟ್ಟು ನೀಡಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು. ಈ ಹಿಂದಿನ ಎರಡು ಐಸಿಸಿ ಟೂರ್ನಿಗಳ ಫೈನಲ್ಗಳಲ್ಲಿ ಟೀಂ ಇಂಡಿಯಾಕ್ಕೆ ಮಾರಕವಾಗಿರುವ ಆಸೀಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ರೋಹಿತ್ ಪಡೆಗಿಂದು ಸುವರ್ಣಾವಕಾಶ ಲಭಿಸಿದೆ. ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8 ಹಂತದಲ್ಲಿ ಎರಡೂ ತಂಡಗಳಿಗೆ ಕೊನೆಯ ಪಂದ್ಯವಾಗಿದ್ದು, ಭಾರತ ಗೆದ್ದರೆ ಸೆಮಿಫೈನಲ್‌ಗೆ ತಲುಪಲಿದೆ. ಇನ್ನೊಂದೆಡೆ, ಆಸ್ಟ್ರೇಲಿಯಾ ಗೆದ್ದರೂ ಕೂಡ ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳ ನಡುವಿನ ಹಣಾಹಣಿಯ ಫಲಿತಾಂಶದ ಮೇಲೆ ಸೆಮಿಫೈನಲ್ ಹಾದಿ ನಿರ್ಧಾರವಾಗಲಿದೆ.
ಡರೆನ್ ಸಮಿ ರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಇಂದು ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಎದುರಾಗಲಿವೆ. ಭಾರತ ಈಗಾಗಲೇ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರೆಸಿದ್ದರೆ, ಆಸ್ಟ್ರೇಲಿಯಾ ಈ ಹಿಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಸೋತು, ಟೂರ್ನಿಯಿಂದ ಹೊರಬೀಳುವ ಭೀತಿಯಲ್ಲಿದೆ. ಒಂದು ವೇಳೆ ಮಳೆ ಬಂದು ಪಂದ್ಯಕ್ಕೆ ಅಡಚಣೆ ಉಂಟಾದರೆ ಕಾಂಗರೂ ಪಡೆಯು ಸಂಕಷ್ಟಕ್ಕೆ ಸಿಲುಕಲಿದೆ. ಮಳೆ ಬಾರದಿದ್ದರೆ, ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸಿ ಸೆಮಿಫೈನಲ್ ಹಂತಕ್ಕೇರುವ ಅವಕಾಶ ಅಫ್ಘಾನಿಸ್ತಾನಕ್ಕೆ ಸಿಗಲಿದೆ.
ಈ ಸುದ್ದಿ ಓದಿದ್ದೀರಾ? ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಕರ್ನಾಟಕದ ಆಟಗಾರ ಡೇವಿಡ್ ಜಾನ್ಸನ್ ನಿಧನ: ಆತ್ಮಹತ್ಯೆ ಶಂಕೆ?
ರೋಹಿತ್ ಪಡೆ ಆಸ್ಟ್ರೇಲಿಯಾವನ್ನು ಭಾರಿ ಅಂತರದಿಂದ ಸೋಲಿಸಿದರೆ, ಟೂರ್ನಿಯಿಂದ ಹೊರಗಟ್ಟಬಹುದು. ಇಂದಿನ ಪಂದ್ಯದಲ್ಲಿ ಭಾರತ ಸೋತರೆ, ರನ್ರೇಟ್ ಲೆಕ್ಕಾಚಾರ ಕೂಡ ಮುನ್ನೆಲೆಗೆ ಬರಲಿದೆ. +2.425 ರನ್ ರೇಟ್ ಹೊಂದಿರುವ ರೋಹಿತ್ ಪಡೆಯು ಸೆಮಿಫೈನಲ್ ಪ್ರವೇಶಿಸಲು ಹೆಚ್ಚಿನ ಅವಕಾಶ ಹೊಂದಿದೆ.
ಸೂಪರ್-8 ಗ್ರೂಪ್ 1ರಲ್ಲಿ ಭಾರತ ಎರಡೂ ಪಂದ್ಯಗಳಲ್ಲಿ ಜಯಗಳಿಸಿ, 4 ಅಂಕಗಳೊಂದಿಗೆ (+2.425) ಅಗ್ರಸ್ಥಾನದಲ್ಲಿದೆ. ಇನ್ನೊಂದೆಡೆ, ಆಸೀಸ್ ತಲಾ ಒಂದು ಗೆಲುವು ಹಾಗೂ ಸೋಲಿನೊಂದಿಗೆ ಎರಡು ಅಂಕಗಳೊಂದಿಗೆ (+0.223) 2ನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಎರಡರಲ್ಲಿ ಒಂದು ಪಂದ್ಯ ಗೆದ್ದಿರುವ ಅಫ್ಘಾನಿಸ್ತಾನ ಮೂರನೇ ಸ್ಥಾನ ಪಡೆದಿದೆ. ಆದರೆ, ಅವರ ರನ್ರೇಟ್ -0.650 ಇದ್ದು, ಬಾಂಗ್ಲಾದೇಶ (-2.489) ಎರಡೂ ಪಂದ್ಯಗಳನ್ನು ಸೋತು ಟೂರ್ನಿಯಿಂದ ಹೊರಬೀಳುವ ಸ್ಥಿತಿಯಲ್ಲಿದೆ.
ಒಂದು ವೇಳೆ ಇಂದು ಆಸೀಸ್ ಗೆದ್ದು, ಅತ್ತ ಅಫ್ಘಾನಿಸ್ತಾನ ಕೂಡ ಗೆಲುವು ಕಂಡರೆ, ಭಾರತ ಸೇರಿದಂತೆ ಈ ಮೂರು ತಂಡಗಳಲ್ಲಿ ರನ್ ಸರಾಸರಿಯಲ್ಲಿ ಅಗ್ರಸ್ಥಾನದಲ್ಲಿದ್ದವರು ಸೆಮಿಫೈನಲ್ ತಲುಪಲಿದ್ದಾರೆ. ಆಸ್ಟ್ರೇಲಿಯಾವನ್ನು ಭಾರತ ತಂಡ ಮಣಿಸಿದರೆ, ಅಫ್ಘಾನಿಸ್ತಾನಕ್ಕೆ ಹೆಚ್ಚಿನ ಅವಕಾಶ ಲಭಿಸುತ್ತದೆ.
ಇನ್ನೊಂದು ಸಾಧ್ಯತೆಯಲ್ಲಿ ಆಸ್ಟ್ರೇಲಿಯಾ ತಂಡ ಟೀಂ ಇಂಡಿಯಾ ತಂಡವನ್ನು ಕನಿಷ್ಠ 41 ರನ್‌ಗಳ ಅಂತರದಲ್ಲಿ ಮಣಿಸಿ, ಅತ್ತ ಅಫ್ಘಾನಿಸ್ತಾನ ತಂಡ ಬಾಂಗ್ಲಾದೇಶ ಎದುರು 81 ರನ್‌ಗಳ ಅಂತರದ ಬೃಹತ್ ಗೆಲುವು ದಾಖಲಿಸಿದರೆ ಆಗ ಆಸ್ಟ್ರೇಲಿಯಾ ಮತ್ತು ಅಫ್ಘಾನ್ ತಂಡಗಳು ಸೆಮಿಫೈನಲ್‌ಗೆ ಮುನ್ನಡೆದು ಟೀಮ್ ಇಂಡಿಯಾ ಸ್ಪರ್ಧೆಯಿಂದ ಹೊರಬೀಳುತ್ತದೆ. ಈ ಸಾಧ್ಯತೆ ತೀರಾ ಕಡಿಮೆ.
ಬಾಂಗ್ಲಾ ವಿರುದ್ಧ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ತಲುಪಬಹುದು. ಅಫ್ಘನ್ನರು ಸೋತರೆ ಕಾಂಗರೂ ಪಡೆಗೆ ಸೆಮಿಫೈನಲ್‌ಗೆ ಏರುವ ಅವಕಾಶ ಸಿಗಲಿದೆ.
ಮಳೆ ಭೀತಿ:
ಸ್ಥಳೀಯ ಹವಾಮಾನ ವರದಿಗಳ ಪ್ರಕಾರ, ಇಂದಿನ ಪ್ರಮುಖ ಪಂದ್ಯದ ವೇಳೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚಯಿದೆ. ಆದರೆ ಮಳೆಯ ಸಾಧ್ಯತೆಯು ಕೇವಲ ಶೇ.15 ರಷ್ಟು ಇದೆ. ಆಟದ ಸಮಯದಲ್ಲಿ ಗುಡುಗು ಸಹಿತ ಶೇ. 5ರಷ್ಟು ಲಘು ಮಳೆಯಾಗುವ ಸಾಧ್ಯತೆಗಳಿವೆ.
ಪಂದ್ಯದ ಆರಂಭ:
ಭಾರತೀಯ ಕಾಲಮಾನ 8 ಗಂಟೆಗೆ
ಸ್ಥಳ: ಡರೆನ್ ಸಮಿ ರಾಷ್ಟ್ರೀಯ ಕ್ರಿಕೆಟ್ ಮೈದಾನ, ಗ್ರಾಸ್ ಐಲೆಟ್, ಸೇಂಟ್ ಲೂಸಿಯಾ
ಭಾರತದ ಸಂಭಾವ್ಯ 11ರ ಬಳಗ:
ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್(ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ.
ಆಸ್ಟ್ರೇಲಿಯಾ ಸಂಭಾವ್ಯ ತಂಡ:
ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯ್ನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್, ಮಿಚೆಲ್ ಸ್ಟಾರ್ಕ್
