18 ಲಕ್ಷ ರೈತರ ಜೀವನೋಪಾಯಕ್ಕೆ ತಲಾ ₹3 ಸಾವಿರ ಮುಂದಿನ ವಾರದಲ್ಲಿ ಜಮೆ: ಸಚಿವ ಕೃಷ್ಣ ಬೈರೇಗೌಡ

Date:

Advertisements

ರಾಜ್ಯದಲ್ಲಿ ಕಳೆದ ವರ್ಷ ಬರಗಾಲ ಕಾರಣ ಸಣ್ಣ-ಅತೀ ಸಣ್ಣ ರೈತರು ವಾರ್ಷಿಕ ಬೆಳೆ ನಷ್ಟದಿಂದ ತುಂಬಾ ಕಂಗಾಲಿದ್ದು, ಅವರ ಜೀವನೋಪಾಯ ನಷ್ಟ ಭರಿಸಲು ಸುಮಾರು 18 ಲಕ್ಷ ರೈತರಿಗೆ ತಲಾ 3,000 ರೂ.ಗಳಂತೆ 500 ಕೋಟಿ ರೂ. ಪರಿಹಾರ ವಿತರಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಮುಂದಿನ ಒಂದು ವಾರದಲ್ಲಿ ರೈತರ ಖಾತೆಗೆ ಈ ಹಣ ಜಮೆಯಾಗಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಕಲಬುರಗಿ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಕಲಬುರಗಿ ವಿಭಾಗದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, “ಬರಗಾಲ ಕಾರಣ ಕೇಂದ್ರ ಸರ್ಕಾರ ಕಾಲಮಿತಿಯಲ್ಲಿ ರೈತರಿಂದ ಅರ್ಜಿ ಕಾಯದೆ ಪರಿಹಾರ ನೀಡದ ಕಾರಣ ಸುಮಾರು 40 ಲಕ್ಷ ರೈತರಿಗೆ ರಾಜ್ಯ ಸರ್ಕಾರವೆ ಈವರೆಗೆ ಎಸ್.ಡಿ.ಆರ್.ಎಫ್. ನಿಧಿಯಡಿ 2,451 ಕೋಟಿ ರೂ. ಬರಗಾಲ ಪರಿಹಾರ ನೀಡಿದೆ. ಇಷ್ಟೊಂದು ಸಂಖ್ಯೆಯಲ್ಲಿ ಬರ ಪರಿಹಾರ ನೀಡಿರುವುದು ಐತಿಹಾಸಿಕ ಕ್ರಮ” ಎಂದು ಅಭಿಪ್ರಾಯಪಟ್ಟರು.

“ಕೇಂದ್ರ ಸರ್ಕಾರ ಎನ್.ಡಿ.ಆರ್.ಎಫ್. ಹಣ ಬಿಡುಗಡೆಯಲ್ಲಿ‌ ವಿಳಂಬ‌ ಧೋರಣೆ ಅನುಸರಿಸಿದ ಕಾರಣ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಕದ ತಟ್ಟಿದ ಕಾರಣ ಕೇಂದ್ರ ಹಣ ಬಿಡುಗಡೆ ಮಾಡಿತು. ಅದು ಹಣ ಸಹ ರೈತರಿಗೆ ನೀಡಲಾಗಿದೆ. ಇನ್ನು ಬೆಳೆ ವಿಮೆನಡಿ 1,756 ಕೋಟಿ ರೂ. ಪರಿಹಾರ ರೈತರ ಖಾತೆಗೆ ಹಣ ನೀಡಲಾಗಿದೆ. ಒಟ್ಟಾರೆ ಬರಗಾಲ ಕಾರಣ ಎಸ್.ಡಿ.ಆರ್.ಎಫ್-ಎನ್.ಡಿ.ಆರ್.ಎಫ್ ಹಣ, ಬೆಳೆ ವಿಮೆ, ಪ್ರಕೃತಿ ವಿಕೋಪ ಪರಿಹಾರ ಹೀಗೆ ಸುಮಾರು 6,000 ಕೋಟಿ ರೂ. ಪರಿಹಾರ ಅನ್ನದಾತರಿಗೆ ಡಿ.ಬಿ.ಟಿ. ಮೂಲಕ ನೀಡಲಾಗಿದೆ” ಎಂದರು.

Advertisements

“ಈ ವರ್ಷದ ಮಾನ್ಸೂನ್‌ನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದ್ದು, ಕೆಲವು ತಾಲೂಕುಗಳಲ್ಲಿ ಅವಘಡಗಳು ಸಂಭವಿಸುವ ಸಾಧ್ಯತೆಗಳಿವೆ. ಪ್ರತಿಯೊಂದು ಜೀವವೂ ಮುಖ್ಯವಾಗಿದ್ದು, ಪಂಚಾಯತ್‌ ಮಟ್ಟದಿಂದಲೂ ಎಲ್ಲಾ ಅಧಿಕಾರಿಗಳೂ ಮುಂಜಾಗ್ರತಾ ಕ್ರಮವಹಿಸಬೇಕು. ಯಾರ ಮೇಲೂ ಬೊಟ್ಟು ತೋರಿಸದೆ ವ್ಯಯಕ್ತಿಕ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕು” ಎಂದು ಸಚಿವರು ಸೂಚಿಸಿದರು.

“ಬೀದರ್‌ ಹಾಗೂ ವಿಜಯನಗರ ಜಿಲ್ಲೆಗಳ ಕೆಲ ಪ್ರದೇಶ ಮಳೆಗಾಲದಲ್ಲಿ ಮಾತ್ರ ಹಳ್ಳಗಳಲ್ಲಿ ದಿಢೀರ್‌ ಪ್ರವಾಹ ಕಂಡು ಬರುವ ಸಾಧ್ಯತೆ ಇದೆ. ಇಂತಹ ಪ್ರವಾಹಗಳೂ ದೊಡ್ಡ ಮಟ್ಟದ ಅನಾಹುತಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ. ಹೀಗಾಗಿ ಎಲ್ಲಾ ಅಧಿಕಾರಿಗಳೂ ಪಂಚಾಯತ್‌ ಮಟ್ಟದಲ್ಲಿ ಕೆಲಸ ಮಾಡಬೇಕು. ಪ್ರವಾಹ ಸಾಧ್ಯತೆಗಳಿರುವ ಪ್ರದೇಶಗಳಿಗೆ ನೋಡಲ್‌ ಅಧಿಕಾರಿಗಳನ್ನು ನೇಮಿಸಬೇಕು” ಎಂದರು.

ಆರ್‌ಟಿಸಿಗೆ-ಆಧಾರ್‌ ಜೋಡಿಸಿ ಭೂ ವಂಚನೆ ತಪ್ಪಿಸಿ

“ಕಲಬುರಗಿ ವಿಭಾಗದಲ್ಲಿ ಆರ್‌ಟಿಸಿಗೆ-ಆಧಾರ್‌ ಜೋಡಿಸಿ ಭೂ ವಂಚನೆ ತಪ್ಪಿಸಿ ಅಲ್ಲದೆ, ಬರ-ನೆರೆ ಪರಿಹಾರ ರೈತರಿಗೆ ಶೀಘ್ರ ತಲುಪಲು ನೆರವಾಗಿ. ರಾಜ್ಯದಾದ್ಯಂತ 4 ಕೋಟಿಗೂ ಅಧಿಕ ಆರ್‌ಟಿಸಿ ಮಾಲೀಕರಿದ್ದಾರೆ. ಈ ಪೈಕಿ 1.75 ಕೋಟಿ ಆರ್‌ಟಿಸಿಗಳನ್ನು ಆಧಾರ್‌ ಜೊತೆಗೆ ಜೋಡಿಸಲಾಗಿದೆ. ಅಲ್ಲದೆ, 1.20 ಕೋಟಿ ಆರ್‌ಟಿಸಿಗಳ್ನು ಒಟಿಪಿ (One Time Password) ಮೂಲಕ ಇಕೆವೈಸಿ ಮಾಡಲಾಗಿದೆ. ಇನ್ನೂ ಕಲಬುರಗಿ ವಿಭಾಗದಲ್ಲಿ 45 ಲಕ್ಷ ಆರ್‌ಟಿಸಿ ಮಾಲೀಕರಿದ್ದು ಈ ಪೈಕಿ 18 ಲಕ್ಷ ಆರ್‌ಟಿಸಿಗಳನ್ನು ಮಾತ್ರ ಆಧಾರ್‌ ಜೊತೆಗೆ ಜೋಡಿಸಲಾಗಿದೆ. ಅಂದರೆ ಶೇ. 40 ರಷ್ಟು ಕೆಲಸ ಮಾತ್ರ ಆಗಿದ್ದು, ಇದು ಸಾಲದು. ಮುಂದಿನ ಜುಲೈ ತಿಂಗಳ ಒಳಗಾಗಿ ಆಧಾರ್‌ ಸೀಡಿಂಗ್‌ ವಿಚಾರದಲ್ಲಿ ಶೇ. 90 ರಷ್ಟು ಪ್ರಗತಿ ಸಾಧಿಸಬೇಕು” ಎಂದು ತಾಕೀತು ಮಾಡಿದರು.

2025 ಅಂತ್ಯಕ್ಕೆ ಕಂದಾಯ ಇಲಾಖೆ ದಾಖಲೆಗಳ ಡಿಜಿಟಲೀಕರಣ

“ಕಂದಾಯ ಇಲಾಖೆಯು ಎಲ್ಲಾ ಆಯಾಮದಿಂದ ಡಿಜಿಟಲಿಕರಣಕ್ಕೆ ಮುಂದಾಗಿದೆ. ಈಗಾಗಲೆ ಇ-ಕಚೇರಿ ಅನುಷ್ಠಾನದಲ್ಲಿ ಶೇ.80ರಷ್ಟು ಪ್ರಗತಿ ಸಾಧಿಸಿದೆ. ಭೂಸುರಕ್ಷಾ ಯೋಜನೆಯಡಿ ಕಳೆದ ಫೆಬ್ರವರಿಯಲ್ಲಿ ರಾಜ್ಯದ 31 ತಾಲೂಕಾ ಕಚೇರಿಯಲ್ಲಿ ಪ್ರಾಯೋಗಿಕವಾಗಿ ರೆಕಾರ್ಡ್ ರೂಂ ದಾಖಲೀಕರಣ ಕಾರ್ಯ ಪ್ರಾರಂಭಿಸಿದ್ದು, ಇದೂವರೆಗೆ 3 ಕೋಟಿ ದಾಖಲೆ ಸ್ಕ್ಯಾನಿಂಗ್ ಮಾಡಲಾಗಿದೆ. ಮುಂದಿನ ಒಂದು ತಿಂಗಳಿನಲ್ಲಿ ರಾಜ್ಯದ ಉಳಿದ ತಾಲೂಕಿನಲ್ಲೂ ಇದಕ್ಕೆ ಚಾಲನೆ ನೀಡಲಾಗುವುದು” ಎಂದು ಸಚಿವರು ಸಭೆಗೆ ಮಾಹಿತಿ ನೀಡಿದರು.

“ಸರ್ಕಾರಿ ಜಮೀನುಗಳನ್ನು ಉಳಿಸಬೇಕು ಹಾಗೂ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಖಡಕ್‌ ಸೂಚನೆ ನೀಡಿದ್ದಾರೆ. ಇದೇ ಕಾರಣಕ್ಕೆ “ಬೀಟ್‌ ಸಿಸ್ಟಂ ಆ್ಯಪ್”ಅನ್ನು ಅಭಿವೃದ್ಧಿಪಡಿಸಲಾಯಿತು. ಈ ಆ್ಯಪ್ ಮೂಲಕ ಈಗಾಗಲೇ ಶೇ.90 ರಷ್ಟು ಸರ್ಕಾರಿ ಜಮೀನನ್ನು ಗುರುತಿಸಲಾಗಿದೆ. ಶೀಘ್ರ ಶೇ.100 ರಷ್ಟು ಜಮೀನನ್ನೂ ಗುರುತಿಸಬೇಕು. ತಹಶೀಲ್ದಾರರೇ ಮುಂದೆ ನಿಂತು ಒತ್ತುವರಿಯನ್ನು ತೆರವುಗೊಳಿಸುವ ಕೆಲಸ ಶುರು ಮಾಡಬೇಕು” ಎಂದರು.

ಬಗರ್‌ ಹುಕುಂ ಅರ್ಜಿ ವಿಲೇಗೆ ಮೂರು ತಿಂಗಳ ಗಡುವು!

“ಕಲಬುರಗಿ ವಿಭಾಗದ ಏಳು ಜಿಲ್ಲೆಗಳಲ್ಲಿ ಒಟ್ಟು 1.32 ಲಕ್ಷ ಬಗರ್‌ ಹುಕುಂ ಅರ್ಜಿಗಳು ಸಲ್ಲಿಕೆಯಾಗಿದ್ದು, ಮುಂದಿನ ಮೂರು ತಿಂಗಳೊಳಗಾಗಿ ಎಲ್ಲಾ ಅರ್ಜಿಗಳನ್ನೂ ವಿಲೇವಾರಿ ಮಾಡಿ. ಅರ್ಹ ರೈತರಿಗೆ ಜಮೀನು ಮಂಜೂರು ಮಾಡಿ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು.

“ಬಡವರಿಗೆ, ಭೂ ರಹಿತರಿಗೆ ಹಾಗೂ ಅರ್ಹ ರೈತರಿಗೆ ಭೂಮಂಜೂರು ಮಾಡುವುದು ಸರ್ಕಾರದ ಕರ್ತವ್ಯ. ಆದರೆ, ವರ್ಷವಾದರೂ ಈ ಅರ್ಜಿಗಳ ವಿಲೇ ಆಗಿಲ್ಲ. ಹೀಗಾಗಿ ಮುಂದಿನ ಒಂದು ತಿಂಗಳಲ್ಲಿ ಅರ್ಹರಿಗೆ ಭೂ ಮಂಜೂರು ಮಾಡಬೇಕು. ಈಗ ಸಲ್ಲಿಕೆಯಾಗಿರುವ ಅರ್ಜಿಗಳ ಪೈಕಿ ಅರ್ಹ ಅರ್ಜಿಗಳನ್ನು ಮಾತ್ರ ಶೀಘ್ರದಲ್ಲಿ ಶಾಸಕರ ನೇತೃತ್ವದ ಬಗರ್‌ ಹುಕುಂ ಸಭೆಯ ಮುಂದಿಡಿ. ಯಾರಿಗೆ ಜಮೀನು ನೀಡಬೇಕು? ಯಾರಿಗೂ ಜಮೀನು ನೀಡಬಾರದು? ಎಂಬ ವಿಚಾರವನ್ನು ಸಭೆ ನಿರ್ಧರಿಸಲಿ. ಒಟ್ಟಾರೆ ಮುಂದಿನ ಮೂರು ತಿಂಗಳಲ್ಲಿ ಈ ಎಲ್ಲಾ ಅರ್ಜಿಗಳನ್ನೂ ವಿಲೇವಾರಿ ಮಾಡಿ” ಎಂದು ತಿಳಿಸಿದರು.

1,000 ವಿ.ಎ.,750 ಸರ್ವೇಯರ್ ಭರ್ತಿ

“ರಾಜ್ಯದಲ್ಲಿ 1,000 ಗ್ರಾಮ ಆಡಳಿತಾಧಿಕಾರಿಗಳು, 750 ಸರ್ಕಾರಿ ಸರ್ವೇಯರ್ ಭರ್ತಿ ಪ್ರಕಿಯೆ ನಡೆದಿದೆ. ಇದರ ಜೊತೆಗೆ 34 ಎ.ಡಿ.ಎಲ್.ಆರ್ ನೇಮಕಾತಿ ಸಹ ನಡೆದಿದೆ. ಇದರಿಂದ ಸರ್ವೇಯರ್ ಇಲಾಖೆಗೆ ಬಲ ಬರಲಿದೆ. ಇದನ್ನು‌ ಬಳಸಿಕೊಂಡು ಪ್ರಸ್ತುತ ಇರುವ 22 ಲಕ್ಷ ಮಲ್ಟಿ ಹೋಲ್ಡರ್ ಆರ್.ಟಿ.ಸಿ. ಗಳನ್ನು ಅವರವರಿಗೆ ಪ್ರತ್ಯೇಕವಾಗಿ ಪೋಡಿ ಮಾಡಿ ಆರ್.ಟಿ.ಸಿ. ಮಾಡಿಸಿ ಕೊಡಬೇಕಾಗಿದೆ. ಇದಕ್ಕಾಗಿ ರೋಡ್ ಮ್ಯಾಪ್ ಸಿದ್ಧಗೊಳಿಸಲಾಗುತ್ತಿದೆ” ಎಂದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಧರ್ಮಸ್ಥಳ ಪ್ರಕರಣಗಳ ಸಮಗ್ರ ತನಿಖೆಗೆ ಎಡಪಕ್ಷಗಳ ಒತ್ತಾಯ

ಧರ್ಮಸ್ಥಳದಲ್ಲಿ ನಡೆದಿರುವ ವೇದವಲ್ಲಿ, ಪದ್ಮಲತಾ, ನಾರಾಯಣ, ಯಮುನಾ ಮತ್ತು ಸೌಜನ್ಯ, ಮುಂತಾದ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

Download Eedina App Android / iOS

X