‘ಸನಾತನ ಧರ್ಮ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಅದನ್ನು ಬುಡಸಮೇತ ಕಿತ್ತು ಹಾಕಬೇಕು’ ಎಂಬ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಆಕ್ಷೇಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಉದಯನಿಧಿ ಅವರಿಗೆ ಷರತ್ತು ಬದ್ಧ ಜಾಮೀನು ನೀಡಿದೆ.
ಈ ಸಂಬಂಧ ನೋಟಿಸ್ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಸಚಿವ ಉದಯನಿಧಿ ಸ್ಟಾಲಿನ್ ಅವರು ಮಂಗಳವಾರ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ ಎನ್ ಶಿವಕುಮಾರ್ ಮುಂದೆ ಖುದ್ದು ಹಾಜರಾದರು.
ಹಾಜರಾತಿಯನ್ನು ದಾಖಲಿಸಿಕೊಂಡ ನ್ಯಾಯಾಧೀಶರು, 5 ಸಾವಿರ ರೂ. ನಗದು ಹಾಗೂ 50 ಸಾವಿರ ರೂ. ಮೊತ್ತದ ಆರೋಪಿಯ ವೈಯಕ್ತಿಕ ಬಾಂಡ್ ಮೇರೆಗೆ ಜಾಮೀನು ನೀಡಿದರು. ವಿಚಾರಣೆಯನ್ನು ಆಗಸ್ಟ್ 8ಕ್ಕೆ ಮುಂದೂಡಲಾಗಿದೆ. ಉದಯನಿಧಿ ಪರ ಹೈಕೋರ್ಟ್ ವಕೀಲರಾದ ಬಾಲಾಜಿ ಸಿಂಗ್, ಚೆನ್ನೈನ ವಿಲ್ಸನ್ ಹಾಗೂ ದೂರುದಾರರ ಪರ ಕರ್ನಾಟಕ ಹೈಕೋರ್ಟ್ ವಕೀಲ ಧರ್ಮಪಾಲ್ ಹಾಜರಿದ್ದರು.
ಇದೇ ಪ್ರಕರಣದ ಇನ್ನುಳಿದ ಮೂವರು ಆರೋಪಿಗಳ ವಿರುದ್ಧದ ವಿಚಾರಣಾ ಕೋರ್ಟ್ನ ಮುಂದಿನ ನ್ಯಾಯಿಕ ಪ್ರಕ್ರಿಯೆಗಳಿಗೆ ಹೈಕೋರ್ಟ್ ಈಗಾಗಲೇ ತಡೆ ನೀಡಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಿದ್ದರಾಮಯ್ಯ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳು ಹೊರೆಯಾಗಿವೆಯೇ?
‘ಚೆನ್ನೈನ ತೆಯನಂಪೇಟೆಯಲ್ಲಿ 2023ರ ಸೆಪ್ಟೆಂಬರ್ 3ರಂದು ನಡೆದಿದ್ದ, ‘ಸನಾತನ ಧರ್ಮ ನಿರ್ಮೂಲನಾ ಸಮಾವೇಶ’ದಲ್ಲಿ ಸಚಿವ ಉದಯನಿಧಿ ಸ್ಟಾಲಿನ್ ಮಾತನಾಡಿದ್ದರು. ‘ಸನಾತನ ಧರ್ಮ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಅದನ್ನು ಬುಡಸಮೇತ ಕಿತ್ತು ಹಾಕಬೇಕು’ ಎಂದು ಹೇಳಿದ್ದರು.
ಈ ಕಾರ್ಯಕ್ರಮವನ್ನು ತಮಿಳುನಾಡು ಪ್ರಗತಿಪರ ಲೇಖಕರು ಮತ್ತು ಕಲಾವಿದರ ಸಂಘ ಆಯೋಜಿಸಿತ್ತು. ಸಚಿವರ ಹೇಳಿಕೆಯನ್ನು ಆಕ್ಷೇಪಿಸಿದ್ದ ನಗರದ ಬೆಳತ್ತೂರು ಕಾಲೋನಿಯ ವಿ. ಪರಮೇಶ್, ‘ಈ ಹೇಳಿಕೆಯು ಸಮಾಜದಲ್ಲಿ ಅಶಾಂತಿ, ದಂಗೆ ಎಬ್ಬಿಸಲು ಪ್ರಚೋದನೆ ನೀಡುವಂತಿದೆ. ಇದರಿಂದ ನನ್ನ ಧಾರ್ಮಿಕ ಭಾವನೆಗೆ ದಕ್ಕೆಯುಂಟಾಗಿದೆ’ ಎಂದು ಆರೋಪಿಸಿ ಖಾಸಗಿ ದೂರು ಸಲ್ಲಿಸಿದ್ದರು.
ದೂರಿನ ಅನುಸಾರ ಭಾರತೀಯ ದಂಡ ಸಂಹಿತೆ–1860ರ ಕಲಂ 153, 298 ಮತ್ತು 500ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ವಿಚಾರಣಾ ನ್ಯಾಯಾಲಯ ಸಚಿವ ಉದಯನಿಧಿ ಸ್ಟಾಲಿನ್ ಹಾಗೂ ಅರ್ಜಿದಾರರಿಗೆ ಸಮನ್ಸ್ ಜಾರಿಗೊಳಿಸಿತ್ತು.
