ಕೊಲೆಯಾದ ಚಿತ್ರದುರ್ಗದ ರೇಣುಕಸ್ವಾಮಿ ಅವರ ತಂದೆ, ತಾಯಿ ಮಂಗಳವಾರ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡರು.
“ತಪ್ಪು ಮಾಡಿದ್ದರೆ ಕರೆದು ಬುದ್ಧಿ ಹೇಳಬಹುದಿತ್ತು ಅಥವಾ ಪೊಲೀಸರಿಗೆ ದೂರು ಕೊಡಬಹುದಿತ್ತು. ಆದರೆ ಬರ್ಬರವಾಗಿ ಕೊಂದುಬಿಡುವುದು ಯಾವ ನ್ಯಾಯ?” ಎಂದು ಸಿದ್ದರಾಮಯ್ಯ ಮುಂದೆ ನೋವು ತುಂಬಿಕೊಂಡು ಹೇಳಿದರು.
ಸಿಎಂ ಸಿದ್ದರಾಮಯ್ಯ ಅವರು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, “ಪೊಲೀಸ್ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.
ರೇಣುಕಸ್ವಾಮಿ ಪತ್ನಿಗೆ ಉದ್ಯೋಗದ ಬೇಡಿಕೆ
“ಕುಟುಂಬಕ್ಕೆ, ಹೆಂಡತಿ ಮೊಮ್ಮಗುವಿಗೆ ಮುಂದೆ ಯಾರು ಗತಿ? ತಮ್ಮ ಸೊಸೆ, ಅಂದರೆ ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ಉದ್ಯೋಗ ಕೊಡಿ” ಎಂದು ಮನವಿ ಮಾಡಿದ್ದಾರೆ. ಸಿಎಂ ಸಿದ್ಧರಾಮಯ್ಯ ಇವರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದುಬಂದಿದೆ.
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 17 ಮಂದಿ ಆರೋಪಿಗಳು ಜೈಲುವಶವಾಗಿದ್ದಾರೆ.
