ತುಮಕೂರು ಜಿಲ್ಲೆಯ ಜೀವನಾಡಿ ಹೇಮಾವತಿ ನೀರನ್ನು ಬೇರೆ ಜಿಲ್ಲೆ ರಾಮನಗರದತ್ತ ಕೊಂಡೊಯ್ಯುವ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಅಕ್ರಮವಾಗಿದೆ. ಯೋಜನೆ ರದ್ದು ಪಡಿಸಲು ನಿರಂತರ ಹೋರಾಟ ನಡೆಸಿದ ಸಮಿತಿ ಕರೆ ನೀಡಿದ್ದ ತುಮಕೂರು ಜಿಲ್ಲೆ ಬಂದ್ ಹಿನ್ನಲೆ ಮಂಗಳವಾರ ಗುಬ್ಬಿ ತಾಲೂಕು ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ಗುಬ್ಬಿ ತಾಲೂಕಿನ ಎಲ್ಲ ಗ್ರಾಮಗಳಲ್ಲೂ ಬೆಳಿಗ್ಗೆ 7 ರಿಂದ ಅಂಗಡಿ ಮುಂಗಟ್ಟು ಮುಚ್ಚಿ ರೈತರು ಸ್ವಯಂ ಪ್ರೇರಿತರಾಗಿ ಬಂದ್‌ಗೆ ಬೆಂಬಲ ಸೂಚಿಸಿದರು. ನಂತರ ತಾಲೂಕು ಕೇಂದ್ರ ಗುಬ್ಬಿ ಪಟ್ಟಣದಲ್ಲಿ ಶಾಲಾ ಕಾಲೇಜು, ಸಣ್ಣ ಕೈಗಾರಿಕೆಗಳು, ದಿನಸಿ ಅಂಗಡಿಗಳು, ಹೋಟೆಲ್‌ಗಳು, ಎಲ್ಲ ವರ್ತಕರು ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಲಿಂಕ್ ಕೆನಾಲ್ ಯೋಜನೆ ಕೈ ಬಿಡುವಂತೆ ಆಗ್ರಹಿಸಿದರು.
ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆ ನಡೆಸಿದ ಬಳಿಕ ರೈತ ಸಂಘದ ಸದಸ್ಯರು ಅರೆ ಬೆತ್ತಲೆಯಲ್ಲಿ ಉರುಳು ಸೇವೆ ನಡೆಸಿದರು. ಇವರಿಗೆ ಸಾಥ್ ನೀಡಿದ ಎಲ್ಲ ಪಕ್ಷದ ಮುಖಂಡರೂ ಕೂಡಾ ರಸ್ತೆಯಲ್ಲಿ ಮಲಗಿ ವಿನೂತನವಾಗಿ ಪ್ರತಿಭಟಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಜೆಡಿಎಸ್ ಮುಖಂಡ ಬಿ ಎಸ್ ನಾಗರಾಜು ಮಾತನಾಡಿ, “ಗ್ರಾಮ ಪಂಚಾಯಿತಿ ಹಾಗೂ ಹೋಬಳಿ ಮಟ್ಟದಲ್ಲಿ ಬಂದ್ ಯಶಸ್ವಿ ಮಾಡಿದ ರೈತರ ಸಹಕಾರ ಮುಂದಿನ ತೀವ್ರ ಹೋರಾಟಕ್ಕೂ ಬೇಕಿದೆ. ಬಂದ್‌ಗೆ ಬೆಂಬಲ ಇದೆ ಎಂದ ಶಾಸಕರು ಮನೆಯಲ್ಲಿ ಕುಳಿತರೆ ಹೇಗೆ ರೈತರ ಪರ ಆಗುತ್ತದೆ. ಬೀದಿಗಿಳಿದು ನಮ್ಮ ಹೋರಾಟದಲ್ಲಿ ಧುಮುಕಿ ನೀರಿಗಾಗಿ ಸರ್ಕಾರಕ್ಕೆ ರಾಜೀನಾಮೆ ನೀಡುವ ಎಚ್ಚರಿಕೆ ನೀಡಬೇಕಿತ್ತು. ಇಲ್ಲಿ ರಾಜಕೀಯ ಬೇಳೆ ಬೇಯಿಸುವ ಉದ್ದೇಶವಿಲ್ಲ. ಚುನಾವಣೆ ಬಂದಾಗ ನಡೆಯುವ ತಂತ್ರ ಇಲ್ಲಿಲ್ಲ. ನೀರಿಗಾಗಿ ನಡೆದ ರೈತರ ಹೋರಾಟ ಪಕ್ಷಾತೀತ ನಿಲುವು, ಜನಪರ ನಿಲ್ಲಬೇಕಿದೆ ಎಂದ ಅವರು ಈ ಬಂದ್ ಎಚ್ಚರಿಕೆಗೆ ಸರ್ಕಾರ ಎಚ್ಚೆತ್ತು ಕೊಳ್ಳದಿದ್ದರೆ ತೀವ್ರ ಹೋರಾಟ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್ ಮಾತನಾಡಿ, “ಸರ್ಕಾರಕ್ಕೆ ನೀಡಿದ ಎಚ್ಚರಿಕೆ ಗಂಟೆಗೆ ಜಗ್ಗದಿದ್ದರೆ ಚಾನಲ್ ಮುಚ್ಚುವ ಹೋರಾಟ ತಾಲೂಕಿನ 50 ಸಾವಿರ ರೈತರೊಂದಿಗೆ ನಡೆಸುತ್ತೇವೆ. ನೂರಾರು ಜೆಸಿಬಿ, ಹಿಟಾಚಿ ಯಂತ್ರ ತಂದು ಕಾಮಗಾರಿ ಸ್ಥಗಿತ ಮಾಡುತ್ತೇವೆ. ಈ ನೀರಾವರಿ ಹೋರಾಟಕ್ಕೆ ಶಾಸಕರು ರಾಜೀನಾಮೆ ನೀಡಿ ಬೆಂಬಲ ಸೂಚಿಸಬೇಕು. ಮಾಧ್ಯಮದಲ್ಲಿ ಹೇಳಿಕೆ ನೀಡಿ ಮನೆಯಲ್ಲಿದ್ದರೆ ಅದು ಸಹಕಾರ ಅಲ್ಲ. ಅವರಿಗೆ ಬಂದ 60 ಸಾವಿರ ಮತದಲ್ಲಿ ಬಹುತೇಕರು ರೈತ ವರ್ಗ ಎಂಬುದನ್ನು ಶಾಸಕರು ಮರೆಯಬಾರದು” ಎಂದು ಕುಟುಕಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿ ಎಂಪಾಳ್ಯ ಲೋಕೇಶ್ ಮಾತನಾಡಿ, “ರೈತರ ಹೋರಾಟಕ್ಕೆ ಎಲ್ಲ ಸಂಘ ಸಂಸ್ಥೆಗಳು ಸಾಥ್ ನೀಡಿವೆ. ಈ ಅವೈಜ್ಞಾನಿಕ ಕಾಮಗಾರಿ ರದ್ದು ಮಾಡದಿದ್ದರೆ ಕೆನಾಲ್ ನಮ್ಮ ಜಿಲ್ಲೆಗೆ ಮರಣ ಶಾಸನವಾಗಲಿದೆ. ಬಂದ್ ಶಾಂತಿಯ ಹೋರಾಟವಾಗಿದೆ. ಯೋಜನೆ ಕೈ ಬಿಡದಿದ್ದರೆ ತೀವ್ರ ಹೋರಾಟ, ಕೆನಾಲ್ ಮುಚ್ಚುವ ಕಾರ್ಯ ನಿರಂತರ ನಡೆಯಲಿದೆ. ಚಾನಲ್ ಬಳಿಯ ಹೋರಾಟ ಎಷ್ಟೇ ಕೇಸು ದಾಖಲಿಸಿದರೂ ಸಾವಿರಾರು ಜನ ಬರಲಿದ್ದಾರೆ” ಎಂದು ಎಚ್ಚರಿಕೆ ನೀಡಿದರು.
ಜಿಪಂ ಮಾಜಿ ಸದಸ್ಯ ಪಿ ಬಿ ಚಂದ್ರಶೇಖರಬಾಬು ಮಾತನಾಡಿ, “ಕಳೆದ 30 ವರ್ಷದ ಹಿಂದೆ ಹೇಮಾವತಿ ಜಿಲ್ಲೆಗೆ ನೀರು ಹರಿಸಲು ನಡೆಸಿದ ತೀವ್ರ ಹೋರಾಟ ಮತ್ತೊಮ್ಮೆ ಹೇಮಾವತಿ ಉಳಿಸಿಕೊಳ್ಳಲು ಮಾಡಬೇಕಿದೆ. ತಾಲೂಕು ಬಂದ್ ಯಶಸ್ವಿಗೆ ಬೆಂಬಲ ನೀಡಿದ ಎಲ್ಲ ಜನರು ಮತ್ತೆ ನೀರು ನಮ್ಮ ಹಕ್ಕು ಎಂದು ಪ್ರತಿಪಾದಿಸಲು ನಿರಂತರ ಹೋರಾಟಕ್ಕೆ ಬರಬೇಕು” ಎಂದು ಕರೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ಬಿ ಆರತಿ ಅವರಿಗೆ ಮನವಿಪತ್ರ ಸಲ್ಲಿಸಿ ರಾಜ್ಯಪಾಲರಿಗೆ ತಲುಪಿಸಲು ಮನವಿ ಮಾಡಿದರು. ನಂತರ ಸಾವಿರಾರು ರೈತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಂಜೆಯವರೆಗೆ ಅಂಗಡಿ ಮುಂಗಟ್ಟು ಮುಚ್ಚಲು ಮತ್ತೊಮ್ಮೆ ಪ್ರಚಾರ ಮಾಡಿ ಪ್ರತಿಭಟನಾ ಸಭೆ ಅಂತ್ಯ ಮಾಡಿದರು.
ಈ ಸುದ್ದಿ ಓದಿದ್ದೀರಾ? ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ವಿರೋಧ; ತುಮಕೂರು ಜಿಲ್ಲಾ ಬಂದ್ ಯಶಸ್ವಿ
ಪ್ರತಿಭಟನೆಯಲ್ಲಿ ಮುಖಂಡರಾದ ಹೊನ್ನಗಿರಿಗೌಡ, ಜಿ ಎನ್ ಬೆಟ್ಟಸ್ವಾಮಿ, ಎನ್ ಸಿ ಪ್ರಕಾಶ್, ಯೋಗಾನಂದಕುಮಾರ್, ಸಾಗರನಹಳ್ಳಿ ವಿಜಯ್ ಕುಮಾರ್, ಎಚ್ ಟಿ ಭೈರಪ್ಪ, ಜಿ ಡಿ ಸುರೇಶ್ ಗೌಡ, ಸಿದ್ದಗಂಗಮ್ಮ, ಪಂಚಾಕ್ಷರಿ, ನಂಜೇಗೌಡ, ಪಪಂ ಸದಸ್ಯರಾದ ಜಿ ಆರ್ ಶಿವಕುಮಾರ್, ಜಿ ಎನ್ ಅಣ್ಣಪ್ಪಸ್ವಾಮಿ, ಜಿ ಸಿ ಕೃಷ್ಣಮೂರ್ತಿ, ಶಶಿಕುಮಾರ್, ಸಿ ಆರ್ ಶಂಕರ್ ಕುಮಾರ್, ರೈತ ಸಂಘದ ವೆಂಕಟೇಗೌಡ, ಸಿ ಜಿ ಲೋಕೇಶ್, ಜಿ ಚಂದ್ರಶೇಖರ್ ಸೇರಿದಂತೆ ರೈತಸಂಘದ ಸದಸ್ಯರು, ವರ್ತಕರ ಸಂಘ, ಧಾನ್ಯ ಮಾರಾಟಗಾರರ ಸಂಘ, ಮಾಜಿ ಸೈನಿಕರ ಸಂಘ, ಸ್ತ್ರೀ ಶಕ್ತಿ ಒಕ್ಕೂಟ, ಕನ್ನಡ ಪರ ಸಂಘಟನೆಗಳು, ದಲಿತ ಪರ ಸಂಘಟನೆಗಳು ಬೆಂಬಲ ನೀಡಿದ್ದವು.
