ಜನರ ಬದುಕು ಹಾಗೂ ಹಕ್ಕುಗಳಿಗೆ ತೊಂದರೆಯಾದರೆ ಯಾವ ಪರಿಸ್ಥಿತಿ ಬಂದೊದಗುತ್ತದೆ ಎಂಬುದನ್ನು ಈ ಬಾರಿಯ ಚುನಾವಣೆಯಲ್ಲಿ ಜನರು ಮಹತ್ವದ ಸಂದೇಶ ನೀಡಿದ್ದಾರೆ. ಸರ್ವಾಧಿಕಾರಿ ಆಡಳಿತಕ್ಕೆ ಪಾಠ ಕಲಿಸಿದ್ದಾರೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ ತಿಳಿಸಿದರು.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಭೀಮ ಬಳಗ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ 133ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಈ ಬಾರಿಯ ಫಲಿತಾಂಶವು ಪ್ರಧಾನಿ ಅವರು ಕೂಡ ಪಾರ್ಲಿಮೆಂಟಿನಲ್ಲಿ ಸಂವಿಧಾನಕ್ಕೆ ತಲೆಬಾಗಿ ನಮಸ್ಕರಿಸುವಂತೆ ಮಾಡಿದೆ” ಎಂದು ಹೇಳಿದರು.
“ಸಂವಿಧಾನ ಜಾರಿಗೆ ಬಂದು ಎಪ್ಪತೈದು ವರ್ಷವಾದರೂ ದೇಶದಾದ್ಯಂತ ಸಂವಿಧಾನದ ವಿಷಯದಲ್ಲಿ ಈ ಮಟ್ಟದ ಜಾಗೃತಿ ಇರಲಿಲ್ಲ. ವಿರೋಧ ಪಕ್ಷ ಕುಸಿಬಾರದು ಹಾಗೆಯೇ ಆಡಳಿತ ಪಕ್ಷ ಮೆರೆಯಲೂಬಾರದು ಎಂಬಂತೆ ಪ್ರಜಾಪ್ರಭುತ್ವ ವಿರೋಧಿಸುವವರಿಗೆ ಅತ್ಯಂತ ಬದ್ಧತೆಯಿಂದ ಕೂಡಿರುವ ತೀರ್ಮಾನವನ್ನು ದೇಶದ ಜನರು ಕೈಗೊಂಡಿದ್ದಾರೆ” ಎಂದರು.
“ಸಂವಿಧಾನ ಜಾಗೃತಿ ಜಾಥವು ಹೊಸ ಸಂಚಲನ ಮೂಡಿಸಿದೆ. ಭಾರತ ದೇಶದ ಇತಿಹಾಸಲ್ಲಿ ಸರ್ಕಾರವೊಂದು ಅಂಬೇಡ್ಕರ್ ಅವರ ವಿಚಾರಧಾರೆಗಳು ಹಾಗೂ ಸಂವಿಧಾನದ ಕುರಿತು ಅರಿವು ಮೂಡಿಸಿದ ಏಕೈಕ ಸರ್ಕಾರ ನಮ್ಮದಾಗಿದೆ. ಈ ಬಗ್ಗೆ ವಿದೇಶದ ಚಿಂತಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಬಾಬ ಸಾಹೇಬರ ವಿಚಾರಗಳನ್ನು ವಿರೋಧಿಸಿದವರು ಕೂಡ ಸಂವಿಧಾನ ದೇಶದ ಜನರ ಹಕ್ಕನ್ನು ರಕ್ಷಣೆ ಮಾಡುತ್ತದೆ ಎಂಬುದನ್ನು ಮನಗಂಡಿದ್ದಾರೆ” ಎಂದು ತಿಳಿಸಿದರು.
“ಅಸಮಾನತೆಯನ್ನು ತೊಡೆದು ಸಮಸಮಾಜದ ನಿರ್ಮಾಣ ಮಾಡಿ, ಸ್ಥಿರ ಅಭಿವೃದ್ಧಿಯ ಗುರಿ ಕಡೆಗೆ ಹೆಜ್ಜೆ ಇಡುವಂತಹ ಸಂವಿಧಾನದ ಮಹತ್ತರವಾದ ಉದ್ದೇಶದ ಆಲೋಚನೆಯನ್ನು ಜನರಲ್ಲಿ ಮೂಡಿಸಲಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಸಂವಿಧಾನದ ಆಶಯಕ್ಕೆ ಅನುಗುಣವಾಗಿ ನಡೆದುಕೊಳ್ಳುವಂತೆ ಒತ್ತಡವನ್ನು ಹೇರಲಾಗಿದೆ” ಎಂದು ವಿವರಿಸಿದರು.
“ಸಂವಿಧಾನದಲ್ಲಿ ದೇಶದ ಅಭಿವೃದ್ಧಿ ಹಾಗೂ ಎಲ್ಲರ ಹಕ್ಕುಗಳ ರಕ್ಷಣೆ ಪ್ರಮುಖವಾಗಿದೆ. ಎಲ್ಲಾ ವರ್ಗದ ಜನರು ಸೇರಿ ಸಾಮಾಜಿಕ ನ್ಯಾಯದ ರಥವನ್ನು ಎಳೆಯಲು ಪ್ರಾರಂಭಿಸಿದ್ದೇವೆ. ಇದು ಸಮೃದ್ಧ ಭಾರತದ ಕುರುಹಾಗಿದೆ. ಸಂವಿಧಾನದ ಆಶಯ ಜಾರಿ ಮಾಡುವ ಸ್ಥಾನದಲ್ಲಿ ಸಂವಿಧಾನ ಗೌರವಿಸುವವರನ್ನು ಕೂರಿಸಬೇಕಿದೆ” ಎಂದು ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, “ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿದು ಶೋಷಿತರು ಸಮಾನತೆಯಿಂದ ಬದುಕಲು ಡಾ.ಬಿ.ಆರ್.ಅಂಬೇಡ್ಕರ್ ಅವರು ಕಾರಣ. ಬಹುಸಂಖ್ಯಾತ ಜನರಿಗೆ ಸ್ವಾಭಿಮಾನ ಬದುಕನ್ನು ಅವರು ಕಲ್ಪಿಸಿಕೊಟ್ಟಿದ್ದಾರೆ” ಎಂದರು.
“ಹಿಂದುಳಿದ ವರ್ಗದವರಿಗೂ ಮೀಸಲಾತಿ ನೀಡಬೇಕು ಎಂದು ಪ್ರತಿಪಾದಿಸಿದ ಅವರು, ಮಹಿಳೆಯರಿಗೆ ಸಮಾನ ಹಕ್ಕು ದೊರಕಿಸಿ ಕೊಡುವ ಸಲುವಾಗಿ ಕಾನೂನು ಮಂತ್ರಿಗೆ ರಾಜೀನಾಮೆ ನೀಡಿದ ಮಹಾನ್ ನಾಯಕರು. ಅವರ ಆಶಯದಂತೆ ಪ್ರತಿಯೊಬ್ಬರೂ ಶಿಕ್ಷಣ ಪಡೆದು ಜಾಗೃತರಾಗಿ ನಮ್ಮ ಹಕ್ಕು ಪಡೆಯಲು ಹೋರಾಟ ಮಾಡಬೇಕಿದೆ” ಎಂದು ಸಲಹೆ ನೀಡಿದರು.
“ಸಂವಿಧಾನ ವಿರೋಧಿಗಳು ಹಾಗೂ ಅಂಬೇಡ್ಕರ್ ಅವರ ಆಶಯವನ್ನು ವಿರೋಧಿಸುವವರು ಇಂದು ಅಧಿಕಾರದಲ್ಲಿರುವುದು ದುರದೃಷ್ಟಕರ. ಕಾಂಗ್ರೆಸ್ ಪಕ್ಷವು ಸಂವಿಧಾನದ ಆಶಯಕ್ಕೆ ಗೌರವ ನೀಡುತ್ತಾ ಬಂದಿದೆ. ದಲಿತರು ಹಾಗೂ ಹಿಂದುಳಿದವರ ಏಳಿಗೆಗೆ ಸರ್ಕಾರವು ಬದ್ಧವಾಗಿದೆ” ಎಂದು ಹೇಳಿದರು.
ಶಾಸಕರಾದ ದರ್ಶನ್ ಧ್ರುವನಾರಾಯಣ ಮಾತನಾಡಿ, “ಕಿರಿಯ ವಯಸ್ಸಿನ ನಾನು ಶಾಸಕನಾಗಿರುವುದು ಹಾಗೂ ಬಡ ರೈತಾಪಿ ಕುಟುಂಬದಿಂದ ಬಂದ ತಂದೆಯವರಾದ ಧ್ರುವನಾರಾಯಣ ಅವರು ಒಂದು ಮತದಿಂದ ಗೆದ್ದು ರಾಜಕೀಯ ಪ್ರವೇಶಿಸಲು ಬಾಬಸಾಹೇಬರು ನೀಡಿದ ಸಂವಿಧಾನವೇ ಕಾರಣ” ಎಂದು ಹೇಳಿದರು.
“ನಮ್ಮ ಸರ್ಕಾರದ ಪಂಚ ಗ್ಯಾರಂಟಿಯು ನಾಡಿನ ಬಡವರು, ಮಹಿಳೆಯರು, ಶೋಷಿತರ ಜೀವನ ಸುಧಾರಣೆಗೆ ತರುವ ಮಹತ್ವದ ಯೋಜನೆಯಾಗಿದೆ. ಈ ಮೂಲಕ ಸಂವಿಧಾನದ ಮೂಲ ಆಶಯ ಪಾಲಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಹರ್ಷವರ್ಧನ್, ಹಿರಿಯ ಪತ್ರಕರ್ತರಾದ ಕೆ.ದೀಪಕ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಮ್ಮ ಹುಚ್ಚಯ್ಯ, ಉಪಾಧ್ಯಕ್ಷ ಲೋಕೇಶ್, ಮಾಜಿ ಮೇಯರ್ ಪುರುಷೋತ್ತಮ್, ವಕೀಲರಾದ ಉಮೇಶ, ಕಾಂಗ್ರೆಸ್ ಪಕ್ಷದ ಮುಖಂಡರಾದ ಇಂಧನ್ ಬಾಬು, ನಾಗೇಶ್, ರಾಜು ಕುರಿಹುಂಡಿ, ಮಹದೇವಯ್ಯ, ನಿಂಗಣ್ಣ, ಮರಯ್ಯ, ನಂಜುಂಡಸ್ವಾಮಿ ಸೇರಿದಂತೆ ಭೀಮ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.