ಶಿವಮೊಗ್ಗ ನಗರದ ಎನ್ ಟಿ ರಸ್ತೆ, ನ್ಯೂ ಮಂಡಲಿ ವೃತ್ತದ ಸುತ್ತಮುತ್ತಲಿನಲ್ಲಿ ಬೃಹದಾಕಾರದ ಗುಂಡಿಗಳನ್ನು ಕಾಣಬಹುದು. ಈ ರಸ್ತೆಯಲ್ಲಿ ಅತಿ ಹೆಚ್ಚು ವಾಹನ ಸಂಚಾರ ಇದ್ದು, ಕಿರಿದಾದ ರಸ್ತೆ ಕೂಡ ಆಗಿದೆ. ಇಲ್ಲಿ ರಸ್ತೆಯಲ್ಲಿದೆಯೆಂದು ಹುಡುಕಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
“ನಿತ್ಯವೂ ಈ ಗುಂಡಿಯಿಂದ ಒಬ್ಬರಲ್ಲ ಒಬ್ಬರು ಬಿದ್ದು ಪೆಟ್ಟಾಗಿ ಗಾಯ ಮಾಡಿಕೊಳ್ಳುತ್ತಿದ್ದಾರೆ. ರಾತ್ರಿ ವೇಳೆಯಲ್ಲಂತೂ ಈ ಗುಂಡಿಗಳಿಂದ ಬಹಳಷ್ಟು ತೊಂದರೆಯಾಗುತ್ತಿದೆ. ಯಾವತ್ತು ಏನು ಅನಾಹುತ ಆಗುವ ಸಂಭವವಿದೆಯೋ ಗೊತ್ತಿಲ್ಲ. ಸತತ 6 ತಿಂಗಳಿಂದ ಈ ರೀತಿ ಗುಂಡಿ ಆಗಿದ್ದರು ಇದರ ಕುರಿತು ಯಾವುದೇ ಅಧಿಕಾರಿಗಳೂ ಕೂಡ ಇದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ” ಎಂಬುದು ವಾಹನ ಸವಾರಾರು ಹಾಗೂ ಸ್ಥಳೀಯರ ಆರೋಪವಾಗಿದೆ.
ಸ್ಥಳೀಯರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಿತ್ಯ ಓಡಾಡುವ ವಾಹನ ಸವಾರರಿಗೆ ಒಂದು ಕಡೆ ವಾಹನ ಹಾಳಾಗುವ ಪರಿಸ್ಥಿತಿ ಮತ್ತೊಂದು ಕಡೆ ಹಿಂದೆ ಮುಂದೆ ಬರುವ ವಾಹನಗಳು ಯಾವಾಗ ಯಾರಿಗೆ ಢಿಕ್ಕಿ ಹೊಡೆಯುತ್ತಾರೋ ಎನ್ನುವ ಆತಂಕದಲ್ಲಿ ವಾಹನ ಸವಾರರು ವಾಹನ ಚಲಾಯಿಸುತ್ತಿದ್ದಾರೆ. ವಾಹನ ಸವಾರರೇ ಗುಂಡಿ ತಪ್ಪಿಸಲು ಹೋಗಿ ಹಲವು ಬಾರಿ ಆಯತಪ್ಪಿ ಬಿದ್ದು ಗಾಯಗೊಂಡಿರುವ ಹಲವು ಘಟನೆಗಳೂ ನಡೆದಿವೆ” ಎಂದು ತಿಳಿಸಿದ್ದಾರೆ.
“ಶಿವಮೊಗ್ಗದಿಂದ ತೀರ್ಥಹಳ್ಳಿ, ಬೈಪಾಸ್ ಮತ್ತು ನ್ಯೂ ಮಂಡಲಿ ತಲುಪುವ ತ್ರಿಕೋನ ರಸ್ತೆ ಇದಾಗಿದ್ದು, ಇಲ್ಲಿ ಶಿವಮೊಗ್ಗದಿಂದ ತೀರ್ಥಹಳ್ಳಿ, ಮಣಿಪಾಲ, ಉಡುಪಿ, ಮಂಗಳೂರು ರಸ್ತಗೆ ಹೋಗುವ ಮಾರ್ಗ ಮಧ್ಯೆ ನಾರಾಯಣ ಹೃದಯಾಲಯ ಆಸ್ಪತ್ರೆ ಹಾಗೂ ಶಂಕರ್ ಕಣ್ಣಿನ ಆಸ್ಪತ್ರೆಗಳೂ ಇವೆ. ಹಾಗಾಗಿ ತುರ್ತು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಹೋಗುವ ರೋಗಿಗಳನ್ನು ಆಂಬುಲೆನ್ಸ್ ಮುಖಾಂತರ ಇದೇ ರಸ್ತೆಯಲ್ಲಿ ಕರೆದೊಯ್ಯಲಾಗುತ್ತದೆ. ಅಂತೆಯೇ ತೀರ್ಥಹಳ್ಳಿಯಿಂದ ಶಿವಮೊಗ್ಗ ನಗರಕ್ಕೆ ಬರುವಾಗ ಮ್ಯಾಕ್ಸ್ ಆಸ್ಪತ್ರೆ ಮತ್ತು ಶಿವಮೊಗ್ಗ ಜಿಲ್ಲಾಸ್ಪತ್ರೆ ಮೆಗ್ಗಾನ್ ಆಸ್ಪತ್ರೆಯಿದೆ. ಹಾಗಾಗಿ ನಿತ್ಯವೂ ಅತಿ ಹೆಚ್ಚು ಆಂಬುಲೆಲ್ಸ್‌ಗಳು ಇದೇ ರಸ್ತೆಯಲ್ಲಿ ಓಡಾಡುತ್ತವೆ. ಇದರಿಂದ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ಎದುರಾಗಿದೆ. ಮಳೆಗಾಲ ಆರಂಭವಾಗಿರುವ ಕಾರಣ ರಸ್ತೆ ಗುಂಡಿಯಿಂದ ತಪ್ಪಿಸಲು ಹೋಗಿ ಗಾಡಿ ಸ್ಕಿಡ್ ಆಗಿ ಬೀಳುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ವಾಹನ ಸವಾರರಿಗೆ ತೊಂದರೆಯಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಪರಿಹಾರ ಒದಗಿಸಿ ರಸ್ತೆ ಸರಿಪಡಿಸಿಕೊಡಬೇಕು” ಎಂದು ಸ್ಥಳೀಯರು ಮತ್ತು ವಾಹನ ಸವರಾರು ಅಗ್ರಹಿಸಿದರು.
ರಾಷ್ಟ್ರೀಯ ಹೆದ್ದಾರಿ ವಿಭಾಗದ ಎಇಇ ಸುರೇಶ್ ಆರ್ ಅವರನ್ನು ಈ ದಿನ.ಕಾಮ್ ಸಂಪರ್ಕಿಸಿದಾಗ ಪ್ರತಿಕ್ರಿಯಿಸಿದ್ದು, “ನಾವು ಒಮ್ಮೆ ಗುಂಡಿಗಳನ್ನು ಮುಚ್ಚಿದ್ದೆವು. ಪ್ರಸ್ತುತ ಹೊಸ ಕೆಲಸ ಆಗುತ್ತಿದೆ. ಆದರೆ ತ್ವರಿತಗತವಾಗಿ ಕೆಲಸ ಆಗುತ್ತಿಲ್ಲ. ಇದು ಹೊಸ ಕಾಮಗಾರಿಯಾಗಿರುವ ಕಾರಣ ಇನ್ನೂ ಪ್ರಗತಿಯಲ್ಲಿದೆ” ಎಂದರು.
ಇದನ್ನೂ ಓದಿದ್ದೀರಾ? ತುಮಕೂರು | ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ಕರೆ; ರಸ್ತೆಗಿಳಿದ ರೈತರಿಂದ ಅರೆ ಬೆತ್ತಲೆ ಉರುಳು ಸೇವೆ
ಅಸಿಸ್ಟೆಂಟ್ ಎಂಜಿನಿಯರ್(ಸೆಕ್ಷನ್ ಆಫೀಸರ್ ) ಸದಾನಂದ ಮಾತನಾಡಿ, “ನಾನು ಮತ್ತು ಪವನ್ ಅವರು ಈ ಭಾಗ ನೋಡಿಕೊಳ್ಳುತ್ತಿದ್ದೇವೆ. ಹಾಗಾಗಿ ನಾನು ಸಂಬಂಧಪಟ್ಟ ಸಿಬ್ಬಂದಿಗಳಿಗೆ ಈ ಕುರಿತು ಮಾಹಿತಿ ನೀಡಿ ಸರಿಪಡಿಸಿಕೊಡುತ್ತೇನೆ” ಎಂದು ಭರವಸೆ ನೀಡಿದ್ದಾರೆ.
