ಪ್ರತಿಭಟನಾ ಸ್ಥಳದಲ್ಲಿ ಧರಣಿಯ ಶಾಮಿಯಾನ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್, ಭಗತ್ ಸಿಂಗ್ ಅವರ ಫೋಟೋವನ್ನು ಪೊಲೀಸರು ಕಿತ್ತೆಸೆದು ಅವಮಾನ ಮಾಡಿದ್ದಾರೆಂದು ಆರೋಪಿಸಿ ರಾಯಚೂರು ಜಿಲ್ಲೆಯ ಎಸ್‌ಎಫ್‌ಐ ಸಂಘಟನೆ, ಎಸ್‌ಡಿಎಂಸಿ, ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಯಲಗಟ್ಟ ಗ್ರಾಮದ ಸರ್ಕಾರಿ ಫ್ರೌಢಶಾಲೆಯ ಮುಖ್ಯೋಪಾಧ್ಯಾಯ ನಾಗನಗೌಡ ಅವರು ನಿರಂತರವಾಗಿ ಅನಧಿಕೃತ ಗೈರು ಹಾಜರಾಗಿರುವ ಕುರಿತು ಕಠಿಣ ಕ್ರಮ ವಿಧಿಸಿ ಅಮಾನತು ಮಾಡಬೇಕೆಂದು ನಡೆಯುತ್ತಿರುವ 07 ನೇ ದಿನದಂದು ನಡೆದ ಪೊಲೀಸರ ದೌರ್ಜನ್ಯದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರು ಹಾಗೂ ವಿಧ್ಯಾರ್ಥಿಗಳ ನೇತೃತ್ವದಲ್ಲಿ ತರಗತಿ ಬಹಿಷ್ಕರಿಸಿ ಧರಣಿ ನಡೆಸುತ್ತಿದ್ದು, “ಗ್ರಾಮದ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಧ್ಯಾಯ ನಾಗನಗೌಡ ಅವರು 4 ವರ್ಷಗಳಿಂದ ಶಾಲೆಗೆ ನಿರಂತರವಾಗಿ ಅನಧಿಕೃತ ಗೈರಾಗುತ್ತಿದ್ದು, ಅಧಿಕಾರಗಳು ಕ್ರಮ ಜರುಗಿಸದೆ ಹಿಂದೇಟು ಹಾಕುತ್ತಿರುವುದು ಖಂಡನೀಯ” ಎಂದು ಗ್ರಾಮದಲ್ಲಿ ಬೈಕ್ ಜಾಥಾ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ರಮೇಶ್ ವೀರಾಪುರ ಮಾತನಾಡಿ, “ಕಳೆದ 2 ದಿನಗಳಿಂದ ಪೊಲೀಸರು ಧರಣಿ ಹತ್ತಿಕ್ಕಲು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಸಂಘಟಕರಿಗೆ ಧಮ್ಕಿ ಹಾಕುವ ರೀತಿಯಲ್ಲಿ ಮಾತನಾಡಿದ್ದಾರೆ. ತಾಲೂಕಿನಲ್ಲಿ ಸಾಕಷ್ಟು ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಇದರಲ್ಲಿ ಇಲಾಖೆ ಸಂಪೂರ್ಣ ಕೈ ಜೋಡಿಸಿ ಹಫ್ತಾ ವಸೂಲಿಗೆ ಶಾಮೀಲಾಗಿದ್ದಾರೆ. ಇದರ ಪರಿಣಾಮ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಈ ಬಗ್ಗೆ ಚಕಾರ ಎತ್ತದ ಪೊಲೀಸರು ಜನರ ಬದುಕಿನ ಪ್ರಶ್ನೆ, ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಹೋರಾಟಗಾರರ ಮೇಲೆ ಗೂಂಡಾಪ್ರವೃತ್ತಿ ಮೆರೆಯುತ್ತಿದ್ದಾರೆ” ಎಂದು ಆರೋಪಿಸಿದರು.
“ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ನಾಗನಗೌಡನ ವಿರುದ್ಧ ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ” ಎಂದು ಪ್ರಶ್ನಿಸಿದ ಅವರು, “ನಾಳೆ ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಸೇರಿ ತರಗತಿಗೆ ಬಹಿಷ್ಕಾರ ಹಾಕಿ ಪಂಚಾಯತ್ ಎದುರು ಪ್ರತಿಭಟನೆ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಪರಿಸರ ಸಂರಕ್ಷಣೆ ಕುರಿತು ಪ್ರಜ್ಞಾವಂತ ಯುವಜನರು ಧ್ವನಿ ಎತ್ತಬೇಕಿದೆ: ನ್ಯಾ. ದಿನೇಶ್ ಬಿ ಜಿ
ಯಲಗಟ್ಟ ಗ್ರಾಪಂ ಸದಸ್ಯ ಸಿದ್ದಪ್ಪ ಗಾಣದಾಳ, ಎಸ್‌ಡಿಎಂಸಿ ಅಧ್ಯಕ್ಷ ನಿಂಗಪ್ಪ ಸಾಹುಕಾರ್, ಸದಸ್ಯ ನಾಗಪ್ಪ ಕಮಲದಿನ್ನಿ, ತಾಲೂಕು ಕಾರ್ಯದರ್ಶಿ ಪವನ್ ಕಮದಾಳ, ತಾಲೂಕು ಮುಖಂಡರಾದ ವಿನಯ್ ಕುಮಾರ್, ಪಿಆರ್‌ಎಸ್ ತಾಲೂಕು ಮುಖಂಡ ನಿಂಗಪ್ಪ ಎಂ, ಗ್ರಾಮದ ಹಿರಿಯರಾದ ಲಕ್ಷ್ಮಣ್, ಗುಂಡಪ್ಪ ದಿನ್ನಿ, ಸಿದ್ದಪ್ಪ ವಡಿಗೀರಿ, ಶೇಖರಪ್ಪ ಗಂಗಾವತಿ, ವಿವಿಧ ಸಂಘಟನೆಗಳ ಶಿವಶಂಕರ, ವಡಿಕೆಪ್ಪ, ಯಲ್ಲಪ್ಪ ಪ್ಯಟಿಗೌಡ, ರಾಜು ನಾಯಕ, ಶಿವು ಪಿ ಜಿ, ಕೆಆರ್‌ಎಸ್ ಮುಖಂಡರಾದ ಸದ್ದಾಂ ಹುಸೇನ್, ಹಂಪಯ್ಯ ಮಹ್ಮದ್ ರಫಿ, ನಾಗನಗೌಡ, ಸಿದ್ರಾಮಯ್ಯ ಸೇರಿದಂತೆ ಅನೇಕರು ಇದ್ದರು.
