ಗೂಗಲ್ ಮ್ಯಾಪ್ (Google Map) ನೋಡಿಕೊಂಡು ಚಲಿಸುತ್ತಿದ್ದ ಕಾರೊಂದು ಕಾಡಿನಲ್ಲಿನ ಒಳರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನದಿಗೆ ಬಿದ್ದು ನೀರಿನಲ್ಲಿ ಕೊಚ್ಚಿಹೋದ ಘಟನೆ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ.
ಘಟನೆಯಲ್ಲಿ ಕಾರಿನೊಳಗಿದ್ದ ಚಾಲಕ ಹಾಗೂ ಸಹ ಪ್ರಯಾಣಿಕ ಇಬ್ಬರೂ ಕೂಡ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ಕುಟ್ಟಿಕೋಲ್‌ನಿಂದ ಪಾಂಡಿಗೆ ಅರಣ್ಯದ ಮೂಲಕ ಹಾದು ಹೋಗುವ ರಸ್ತೆಯಲ್ಲಿ ಪಳಂಚಿ ಎಂಬಲ್ಲಿನ ಹಳೆ ಸೇತುವೆಯಲ್ಲಿ ಈ ಅವಘಡ ಸಂಭವಿಸಿದೆ. ಅಪಘಾತದಲ್ಲಿ ತೇಲಿದ ಕಾರಿನಲ್ಲಿದ್ದವರು ಕಾಞಂಗಾಡ್ ಅಂಬಲತ್ತರ ಮೂಲದವರಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದರು ಎಂದು ವರದಿಯಾಗಿದೆ.
ಗೂಗಲ್ ಮ್ಯಾಪ್ (Google Map) ನೋಡಿಕೊಂಡು ಚಲಿಸುತ್ತಿದ್ದ ಕಾರೊಂದು ಕಾಡಿನಲ್ಲಿನ ಒಳರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನದಿಗೆ ಬಿದ್ದು ನೀರಿನಲ್ಲಿ ಕೊಚ್ಚಿಹೋದ ಘಟನೆ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಕಾರಿನೊಳಗಿದ್ದ ಚಾಲಕ ಹಾಗೂ ಸಹ ಪ್ರಯಾಣಿಕ ಇಬ್ಬರೂ ಕೂಡ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. pic.twitter.com/wfVmAj3Uh2
— eedina.com ಈ ದಿನ.ಕಾಮ್ (@eedinanews) June 27, 2024
ಕಾರಿನಲ್ಲಿದ್ದ ಪುಲ್ಲೂರಿನ ಅಂಚಿಲತ್ ಹೌಸ್‌ನ ನಿವಾಸಿ ತಸ್ರೀಫ್ (36) ಹಾಗೂ ಮುನಂಬಮ್ ಹೌಸ್‌ನ ನಿವಾಸಿ ಅಬ್ದುಲ್ ರಶೀದ್ (35) ಎಂಬುವವರು ಉಪ್ಪಿನಂಗಡಿಗೆ ತಲುಪಲು ಗೂಗಲ್ ಮ್ಯಾಪ್ ಹಾಕಿಕೊಂಡು ಪ್ರಯಾಣಿಸುತ್ತಿದ್ದರು. ಆದರೆ, ಕಾರು ಕಾಡಿನೊಳಗಿನ ಒಳರಸ್ತೆಯಲ್ಲಿರುವ ಹಳೆಯ ಸೇತುವೆಯ ಮೇಲೆ ಅಪಘಾತವಾಗಿದೆ.
ಅವಘಡಗೊಂಡ ಪ್ರದೇಶದಲ್ಲಿ ಬುಧವಾರ ತಡರಾತ್ರಿ ವಿಪರೀತ ಮಳೆಯಾಗಿತ್ತು. ಪ್ರಯಾಣಿಕರು ತಡೆಗೋಡೆ ಇಲ್ಲದೇ ಇದ್ದ ಸೇತುವೆ ಮೇಲೆ ಬಂದಾಗ ನೀರು ಉಕ್ಕಿ ಹರಿಯುತ್ತಿರುವುದು ಇವರಿಗೆ ತಿಳಿಯಲಿಲ್ಲ. ಹೀಗಾಗಿ, ಕಾರು ಮುಂದೆ ಚಲಾಯಿಸಿದ್ದಾರೆ. ಈ ವೇಳೆ ಕಾರು ನದಿಗೆ ಬಿದ್ದು ಸಂಪೂರ್ಣ ಮುಳುಗಡೆಯಾಗಿದೆ.
ಇದನ್ನು ಓದಿದ್ದೀರಾ? ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನೂತನ ಅಧ್ಯಕ್ಷರಾಗಿ ಜಿ ಎಸ್ ಸಂಗ್ರೇಶಿ
ಈ ನಡುವೆ ಕಾರಿನೊಳಗಿನಿಂದ ಪವಾಡಸದೃಶ ರೀತಿಯಲ್ಲಿ ಹೊರಬಂದ ತಸ್ರೀಫ್ ಮತ್ತು ಅಬ್ದುಲ್ ರಶೀದ್ ನದಿಯಲ್ಲಿದ್ದ ಮರವೊಂದನ್ನು ಆಸರೆಯಾಗಿ ಹಿಡಿದುಕೊಂಡು, ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾರೆ. ವಿಷಯ ತಿಳಿದ ನಂತರ ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ಹಾಗೂ ಆದೂರು ಪೊಲೀಸರು ಸ್ಥಳಕ್ಕೆ ಆಗಮಿಸಿ, ಇಬ್ಬರನ್ನೂ ಹಗ್ಗದ ನೆರವಿನಿಂದ ರಕ್ಷಣೆ ಮಾಡಿರುವುದಾಗಿ ತಿಳಿದುಬಂದಿದೆ.
