ಹೆದ್ದಾರಿಯಲ್ಲಿ ರಸ್ತೆ ಅಂಚಿನಲ್ಲಿ ನಿಂತಿದ್ದ ಲಾರಿಗೆ ಟಿಟಿ ವಾಹನ ಢಿಕ್ಕಿ ಹೊಡೆದಿದ್ದು, 13 ಮಂದಿ ಮೃತಪಟ್ಟಿರುವ ದುರ್ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ನಡೆದಿದೆ.
ಗುಂಡೇನಹಳ್ಳಿ ಬಳಿ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಬದಿ ಸಕರು ಸಾಗಿಸುವ ಲಾರಿ ನಿಂತಿತ್ತು. ಲಾರಿಗೆ ಹಿಂದಿನಿಂದ ವೇಗವಾಗಿ ಬಂದ ಟಿಟಿ ವಾಹನ ಢಿಕ್ಕಿಯಾಗಿದೆ. ಘಟನೆಯಲ್ಲಿ ಟಿಟಿಯಲ್ಲಿದ್ದ 7 ಮಂದಿ ಮಹಿಳೆಯರು ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ. ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದ ಪರಶುರಾಮ್ (45), ನಾಗೇಶ (50), ಚಾಲಕ ಆದರ್ಶ್ (23), ಭಾಗ್ಯ (40), ವಿಶಾಲಾಕ್ಷಿ (40), ಅರ್ಪಿತಾ (18), ಸುಭದ್ರಾ ಬಾಯಿ (65), ಪುಣ್ಯ (50), ಮಂಜುಳಾಬಾಯಿ (45), ಮಾನಸ (24), ರೂಪಾ (40) ಹಾಗೂ ಮಂಜುಳಾ (50) ಎಂದು ಗುರುತಿಸಲಾಗಿದೆ. ಎಲ್ಲರೂ ಒಂದೇ ಕುಟುಂಬದವರಾಗಿದ್ದಾರೆ.
ಇತ್ತೀಚೆಗೆ, ಆದರ್ಶ್ ಹೊಸ ಟಿಟಿ ವಾಹನ ಖರೀದಿಸಿದ್ದರು. ವಾಹನಕ್ಕೆ ಪೂಜೆ ಮಾಡಿಸಲು ಮಹಾರಾಷ್ಟ್ರ ತಿವಾರಿ ಲಕ್ಷ್ಮೀ ದೇವಾಲಯಕ್ಕೆ ತೆರಳಿದ್ದರು. ಬಳಿಕ, ಹಲವಾರು ದೇವಾಲಯಗಳಿಗೆ ಭೇಟಿ ನೀಡಿ, ಬೆಳಗಾವಿ ಜಿಲ್ಲೆ ಸವದತ್ತಿಗೆ ತೆರಳಿ, ಅಲ್ಲಿಂದ ತಮ್ಮೂರಿಗೆ ಮರಳುತ್ತಿದ್ದರು. ಈ ವೇಳೆ, ದುರ್ಘಟನೆ ನಡೆಸಿದೆ ಎಂದು ವರದಿಯಾಗಿದೆ.