ಮುಂದಿನ ಸಚಿವ ಸಂಪುಟ ಉಪ ಸಮಿತಿಯಲ್ಲಿ 371(ಜೆ) ಪರಿಣಾಮಕಾರಿ ಅನುಷ್ಠಾನಕ್ಕಾಗಿ ಹಲವು ವಿಷಯಗಳ ಕುರಿತು ಪರಾಮರ್ಶೆ ನಡೆಸಿ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಕೆಪಿಸಿಸಿ ಮಾಧ್ಯಮ ವಿಭಾಗದ ರಾಜ್ಯ ವಕ್ತಾರ ಡಾ ರಝಾಕ್ ಉಸ್ತಾದ್ ಅವರು 371(ಜೆ) ಅನುಷ್ಠಾನ ಸಚಿವ ಸಂಪುಟ ಉಪಸಮಿತಿ ಅಧ್ಯಕ್ಷ ಪ್ರಿಯಾಂಕ ಖರ್ಗೆ ಅವರಿಗೆ ಮನವಿ ಸಲ್ಲಿಸಿದರು.
“ರಾಜ್ಯದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 2013ರಲ್ಲಿ ಭಾರತ ಸರ್ಕಾರ ಸಂವಿಧಾನದ ಅನುಚ್ಛೇದ 371(ಜೆ) ತಿದ್ದುಪಡಿ ಮೂಲಕ ವಿಶೇಷ ಸ್ಥಾನಮಾನ ಒದಗಿಸಿದೆ. ಸರ್ಕಾರ 371(ಜೆ) ಅನ್ವಯ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಕಲ್ಯಾಣ ಕರ್ನಾಟಕಕ್ಕೆ ಮೀಸಲಾತಿ ನೀಡಿದೆ. ಇದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಮತ್ತು ಯುವಜನರಿಗೆ ರಾಜ್ಯ ಸರ್ಕಾರದಲ್ಲಿ ಉದ್ಯೋಗಾವಕಾಶ ಹಾಗೂ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅವಕಾಶ ಒದಗಿಸಿ ನಿಯಮಗಳನ್ನು ರಚಿಸಿ ಜಾರಿಗೊಳಿಸಲಾಗಿದೆ. ಆದರೂ ಸಮರ್ಪಕ ಅನುಷ್ಠಾನದ ಕೊರತೆಯಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಜನರಲ್ಲಿ ಆತಂಕವಿದ್ದು, ಕಲ್ಯಾಣ ಕರ್ನಾಟಕಕ್ಕೆ ಸಂವಿಧಾನದ ಅನುಚ್ಛೇದ 371(ಜೆ) ಅನ್ವಯ ಜಾರಿಯಲ್ಲಿರುವ ಮೀಸಲಾತಿ ನಿಯಮಗಳನ್ನು ಸಮರ್ಪಕ ಅನುಷ್ಠಾನ ಮಾಡಲು ಮುಂದಿನ ಸಚಿವ ಸಂಪುಟ ಉಪಸಮಿತಿಯಲ್ಲಿ ಚರ್ಚಿಸಬೇಕು” ಎಂದು ಮನವಿ ಮಾಡಿದ್ದಾರೆ.
“ಸಂವಿಧಾನದ ಅನುಚ್ಛೇದ 371(ಜೆ) ಅನುಷ್ಠಾನಕ್ಕಾಗಿ ಸ್ವತಂತ್ರವಾಗಿ ಡಾ .ಡಿ ಎಂ ನಂಜುಂಡಪ್ಪ ಅವರ ವರದಿ ಅನುಷ್ಠಾನ ಸಮಿತಿ ಮಾದರಿಯಲ್ಲಿ “ಕಲ್ಯಾಣ ಕರ್ನಾಟಕಕ್ಕೆ 371(ಜೆ) ಅನುಷ್ಠಾನ ಪ್ರಾಧಿಕಾರ” ರಚಿಸಿ, ಸೂಕ್ತ ಅಧಿಕಾರ ನೀಡಬೇಕು. ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳು 371(ಜೆ) ಮೀಸಲಾತಿ ಕೋರಿದ್ದು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಲ್ಲಿ ಮೊದಲಿಗೆ ಮೆರಿಟ್ ಆಧಾರದಲ್ಲಿ ಮಿಕ್ಕುಳಿದ ವೃಂದದಲ್ಲಿ ಪರಿಗಣಿಸಬೇಕು. ಇನ್ನುಳಿದ ಅಭ್ಯರ್ಥಿಗಳನ್ನು ಸ್ಥಳೀಯ ವೃಂದದಲ್ಲಿ ಪರಿಗಣಿಸಬೇಕೆಂದು ಹಿಂದಿನ ಸಭೆಯಲ್ಲಿ ಕೈಗೊಂಡ ನಿರ್ಣಯದ ಸುತ್ತೋಲೆಯನ್ನು ಹೊರಡಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಮನವಿ ಮಾಡಿದ್ದಾರೆ.
ಕೇಂದ್ರ ಉಕ್ಕು, ಬೃಹತ್ ಕೈಗಾರಿಕೆ ಸಚಿವ ಭೂಪತಿರಾಜು ಅವರ ಭೇಟಿ
ರಾಯಚೂರು ಲೋಕಸಭಾ ಸಂಸದ ಜಿ ಕುಮಾರ್ ನಾಯಕ ಅವರು ದೆಹಲಿಯ ಉದ್ಯೋಗ ಭವನದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮಾ ಅವರನ್ನು ಭೇಟಿ ಮಾಡಿ ರಾಯಚೂರಿನಲ್ಲಿ ಕೈಗಾರಿಕೋದ್ಯಮ ಸ್ಥಾಪನೆ ಕುರಿತು ಮಾತನಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಬಾಲಕರ ವಸತಿನಿಲಯದಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಊಟದಲ್ಲಿ ಹುಳುಗಳು ಪತ್ತೆ
“ರಾಯಚೂರು ಜಿಲ್ಲೆಯನ್ನು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಿಲ್ಲೆಯಾಗಿ ಆಯ್ಕೆ ಮಾಡಲಾಗಿದೆ. ಈ ಭಾಗದ ಆರ್ಥಿಕ ಬಲವರ್ಧನೆಗಾಗಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಈ ಭಾಗದ ನಿರುದ್ಯೋಗ ಯುವಜನರಿಗೆ ಉದ್ಯೋಗ ಸೃಷ್ಟಿಸಬೇಕಾಗಿದೆ. ರಾಯಚೂರು ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆಗಾಗಿ ವಿಶಾಲವಾದ ಭೂಮಿ, ನೀರು, ಸಾರಿಗೆ ಹಾಗೂ ರೈಲ್ವೆ ಸಂಪರ್ಕವಿದೆ. ಅಲ್ಲದೆ ಈಗಾಗಲೆ ಅನುಮೋದಿಸಲಾಗಿರುವ ವಿಮಾನ ನಿಲ್ದಾಣ ಕಾಮಗಾರಿ ಪ್ರಾರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಯಲ್ಲಿ ರಾಯಚೂರು ಜಿಲ್ಲೆಯನ್ನು ಪರಿಗಣಿಸಬೇಕು” ಎಂದು ಸಚಿವರಲ್ಲಿ ಮನವಿ ಮಾಡಿದ್ದಾರೆ.
ವರದಿ : ಹಫೀಜುಲ್ಲ
