ನಿಮ್ಮ ಗಂಡ ಮದ್ಯಪಾನ ಮಾಡುವುದನ್ನು ನಿಲ್ಲಿಸಬೇಕು ಎಂದು ನೀವು ಬಯಸಿದರೆ ಗಂಡನಿಗೆ ಮನೆಯಲ್ಲೆ ಕುಡಿಯಲು ಹೇಳಿ ಎಂದು ಮಧ್ಯಪ್ರದೇಶದ ಸಚಿವ, ಬಿಜೆಪಿ ನಾಯಕ ಮಹಿಳೆಯರಿಗೆ ಸಲಹೆ ನೀಡಿದ್ದಾರೆ.
ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಶುಕ್ರವಾರ ನಶಾ ಮುಕ್ತಿ (ವ್ಯಸನದಿಂದ ಮುಕ್ತಿ) ಅಭಿಯಾನದ ಕುರಿತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿ ಮಾತನಾಡಿದ ಸಾಮಾಜಿಕ ನ್ಯಾಯ ಸಚಿವ ನಾರಾಯಣ್ ಸಿಂಗ್ ಕುಶ್ವಾಹ್, “ಕುಟುಂಬಗಳ ಮಹಿಳಾ ಸದಸ್ಯರು ಈ ಅಭಿಯಾನದ ಯಶಸ್ಸಿನ ಕೀಲಿಯನ್ನು ಹೊಂದಿದ್ದಾರೆ” ಎಂದಿದ್ದಾರೆ.
“ಮಹಿಳೆಯರು ತಮ್ಮ ಗಂಡಂದಿರ ಬಳಿ ಹೊರಗೆ ಕುಡಿಯದಂತೆ ಮನೆಯಲ್ಲಿಯೆ ಮದ್ಯಪಾನ ಮಾಡಲು, ತಿನ್ನಲು ಹೇಳಬೇಕು. ಮಕ್ಕಳು ಮತ್ತು ಪತ್ನಿಯ ಎದುರು ಕುಡಿಯಲು ನಾಚಿಕೆಯಾಗುವ ಕಾರಣದಿಂದಾಗಿ ಕ್ರಮೇಣ ಮದ್ಯಪಾನ ಮಾಡುವುದು ಕಡಿಮೆಯಾಗುತ್ತದೆ” ಎಂದು ಅಭಿಪ್ರಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ಉಡುಪಿ | ಯಾವುದೇ ಚಟುವಟಿಕೆಯಿಲ್ಲದೆ ಮದ್ಯಪಾನಿಗಳ ತಾಣವಾದ ಗಾಂಧಿ ಭವನ
“ನಿಮ್ಮ ಕುಡಿತದ ಚಟ ಮಕ್ಕಳ ಮೇಲೂ ಅದೇ ಪರಿಣಾಮ ಬೀರುತ್ತದೆ ಎಂದು ನಿಮ್ಮ ಗಂಡಂದಿರಿಗೆ ಹೇಳಿ. ಗಂಡಸರಿಗೆ ಕುಟುಂಬದ ಎದುರು ಆಗುವ ಮುಜುಗರದಿಂದಾಗಿ ಅವರು ಕ್ರಮೇಣ ಕುಡಿಯುವ ಅಭ್ಯಾಸವನ್ನು ತೊರೆಯುತ್ತಾರೆ” ಎಂದು ಹೇಳಿದರು.
“ಪುರುಷರು ಮನೆಗೆ ಕುಡಿದು ಬಂದರೆ ಊಟ ನೀಡಬೇಡಿ. ಬದಲಿಗೆ ಲಟ್ಟಣಿಗೆ ತೋರಿಸಿ. ಮಹಿಳೆಯರು ಬಲವಾದ ಲಟ್ಟಣಿಗೆ ಗ್ಯಾಂಗ್ ಅನ್ನು ರಚಿಸಬೇಕು. ಇದು ಪುರುಷರಿಗೆ ಲಟ್ಟಣಿಗೆ ತೋರಿಸಿ ಕುಡಿತ ತೊರೆಯುವಂತೆ ಮಾಡುತ್ತದೆ” ಎಂದರು.
ಕುಶ್ವಾ ಅವರು ಗ್ವಾಲಿಯರ್ ಜಿಲ್ಲೆಯ ಗ್ವಾಲಿಯರ್ ದಕ್ಷಿಣ ಕ್ಷೇತ್ರದಿಂದ ಮೂರನೇ ಬಾರಿ ಬಿಜೆಪಿ ಶಾಸಕರಾಗಿದ್ದಾರೆ.