ಡೆಂಘೀ ಜ್ವರ ವ್ಯಾಪಾಕವಾಗಿ ಹರಡುತ್ತಿರುವ ಕಾರಣ, ಡೆಂಘೀ ಜ್ವರ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ ಹಾಗೂ ಪ್ರತಿ ಶುಕ್ರವಾರ ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳ ನಾಶ ಮಾಡುವ ದಿನವೆಂದು ನಿರ್ಮೂಲನೆ ಪೋಸ್ಟರ್ ಬಿಡುಗಡೆ ಮಾಡಿ, ನಂತರ ಗಪ್ಪಿಮೀನು ಸಾಕುವ ಮೂಲಕ ನಮ್ಮ ನಿಮ್ಮೆಲ್ಲರ ಮನೆಯ ತೊಟ್ಟಿಯಲ್ಲಿ ಗಪ್ಪಿಮೀನು ಬಿಟ್ಟರೆ ಡೆಂಘೀ ಸೊಳ್ಳೆ ಉತ್ಪತ್ತಿಯಾಗುವುದು ನಿಲ್ಲುತ್ತದೆ. ಇದರಿಂದ ಡೆಂಘೀ ಹರಡುವಿಕೆ ಕಡಿಮೆಯಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಗಪ್ಪಿಮೀನು ನೀಡುವ ಮೂಲಕ ತಿಳಿಸಿದರು.
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಸಾರ್ವಜನಿಕರ ಕುಂದುಕೊರತೆ ಸಮಸ್ಯೆಗಳ ಅಹವಾಲು ಸ್ವೀಕರಿಸಲು ಜರುಗಿದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಮೌಲಾನ ಅಬ್ದುಲ್ ಕಲಾಂ ಅಲ್ಪಸಂಖ್ಯಾತ ಶಾಲೆಯಲ್ಲಿ ಒಂದು ವರ್ಷದಿಂದ ಬಿಸಿಯೂಟ, ಹಾಲು, ಮೊಟ್ಟೆ ಇತ್ಯಾದಿ ಯಾವುದನ್ನೂ ನೀಡುತ್ತಿಲ್ಲ” ಎಂದು ಮಕ್ಕಳು ಸಚಿವರಿಗೆ ಮನವಿ ನೀಡಿದ್ದು ವಿಶೇಷವಾಗಿತ್ತು. ಇದಕ್ಕೆ ಸ್ಪಂದಿಸಿದ ಮಧು ಬಂಗಾರಪ್ಪ ಅವರು ಬರುವ ಸೋಮವಾರದಿಂದ ಊಟ ಇತ್ಯಾದಿ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಯಿಂದ ಮಾತನಾಡಿ, “ದಲಿತರ ಭೂಮಿಯನ್ನು ಭದ್ರಾವತಿ ಎಂಪಿಎಂನವರು ಅಕ್ರಮಿಸಿಕೊಂಡಿದ್ದು, ಜಂಟಿ ಸರ್ವೇ ಮಾಡಿಸಿ ಹದ್ದುಬಸ್ತು ಸರ್ವೇ ಮಾಡಿಸುವಂತೆ ಒತ್ತಾಯಿಸಿ ಅನಿರ್ದಿಷ್ಟವಧಿ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಹಾಗಾಗಿ ತಾವು ಈ ಭೂಮಿಯನ್ನು ನಮಗೆ ದೊರಕಿಸಿಕೊಡಬೇಕು” ಎಂದು ಮನವಿ ಮಾಡಿದರು
ಕೆಪಿಎಸ್ ಶಾಲೆಯ ಸಮಸ್ಯೆ, ಶಿವಮೊಗ್ಗ ನಗರದ ಬಸ್ ನಿಲ್ದಾಣದಲ್ಲಿ ನಂದಿನಿ ಮಿಲ್ಕ್ ಪಾರ್ಲರ್ ಯೂನಿಟ್ ತೆರೆಯಲು ಅವಕಾಶ ನೀಡುವಂತೆ ಕೋರಿ ಅರ್ಜಿ, ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಫಾರ್ಮಸಿಸ್ಟ್ ಕೆಲಸಕ್ಕೆ ಮನವಿ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಹೇಳಿಕೊಂಡು ಸರಿಸುಮಾರು 375ಕ್ಕೂ ಅಧಿಕ ಕುಂದುಕೊರತೆಗಳ ಅಹವಾಲು ಸ್ವೀಕರಿಸಿದ ಸಚಿವರು ಸಮಸ್ಯಗೆ ಪರಿಹಾರ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯಿಂದ ಬಂದಂತ ಸಾರ್ವಜನಿಕರಲ್ಲಿ ಕೆಲವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಸಚಿವರು ನಮ್ಮ ಸಮಸ್ಯೆಯನ್ನು ಬಗೆಹರಿಸಿಕೊಡುವ ಭರವಸೆಯನ್ನು ನೀಡಿದ್ದಾರೆ. ಅಂತೆಯೇ ನಮ್ಮ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ತ್ವರಿತಗತಿಯಲ್ಲಿ ಬಗೆಹರಿಸಬೇಕು” ಎಂದು ಒತ್ತಾಯಿಸಿದರು. ಜತೆಗೆ ಸಚಿವರ ಸರಳ ಸಜ್ಜನಿಕೆಯನ್ನು ವ್ಯಾಪಕವಾಗಿ ಶ್ಲಾಘಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಲಂ 371(ಜೆ) ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಲಿ: ಡಾ.ರಝಾಕ್ ಉಸ್ತಾದ್
ಈ ವೇಳೆ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಇದ್ದರು.
