ಜಾನಪದ ಹಳ್ಳಿಗಾಡಿನಲ್ಲಿ ಇನ್ನೂ ಜೀವಂತವಾಗಿದೆ. ಜಾನಪದದಲ್ಲಿ ಸಮಾಜದ ಭಾಗವಾಗಿರುವ ಲಿಂಗತ್ವ ಅಲ್ಪಸಂಖ್ಯಾತರಿಗೂ ಗೌರವದ ಬದುಕು ಕಟ್ಟಿಕೊಡುವ ಜವಾಬ್ದಾರಿ ಸಮಾಜದ ಮೇಲಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಬಿ ಮಂಜಮ್ಮ ಜೋಗತಿ ಹೇಳಿದರು.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಎಂಜಿವಿಸಿ ಕಲಾ, ವಾಣಿಜ್ಯ ಮತ್ತು ವಿಜ್ಞಾನದ ಸಹಯೋಗದೊಂದಿಗೆ ಶುಕ್ರವಾರ ಏರ್ಪಡಿಸಿದ್ದ ಜಾನಪದ ಪರಂಪರೆ ಮತ್ತು ಪ್ರಯೋಗ-ತಾತ್ವಿಕ ಚಿಂತನೆ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಲಿಂಗತ್ವ ಅಲ್ಪಸಂಖ್ಯಾತರಿಗೆ ಜನಿಸಿದ ಮಕ್ಕಳಿಗೆ ಇಂದು ಶೈಕ್ಷಣಿಕ, ಸಾಮಾಜಿಕ ಹಕ್ಕುಗಳನ್ನು ಕೊಡುವುದಕ್ಕೆ ಯೋಚಿಸುವ ಸಮಯದಲ್ಲಿ ಎಷ್ಟು ಮಂದಿ ಹೃದಯವಂತರು ಅಸಹಾಯಕರಿಗೆ ಆಸರೆ ಒದಗಿಸುತ್ತಿದ್ದಾರೆ. ಸಮಾಜ ಆಸರೆ ಒದಗಿಸಿದರೆ ಲೈಂಗಿಕ ಅಲ್ಪಸಂಖ್ಯಾತರೂ ಕೂಡ ರೈಲು, ಬಸ್, ರೈಲ್ವೆ ಸ್ಟೇಷನ್, ಹೈವೇಗಳಲ್ಲಿ ನಿಂತು ಜನರಿಗೆ ಭಾರವಾಗುವ ಕೆಲಸ ಮಾಡಲಾರರು” ಎಂದರು.
ಬೆಳಗಾವಿ ಆರ್‌ಪಿಡಿ ಕಾಲೇಜಿನ ಕನ್ನಡ ವಿಭಾಗದ ಎಚ್ ಬಿ ಕೋಲ್ಕಾರ್ ಮಾತನಾಡಿ, “ಜನಪದದ ನೆಲೆಯಿಂದ ಮನುಷ್ಯನ ಬದುಕು ಹುಡುಕಬೇಕಾಗಿದೆ. ಮಂಜಮ್ಮ ಜೋಗತಿ ಅವರ ಜೀವನ ಸಾಧನೆಯ ಬಗ್ಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಓದುವ ಸಲುವಾಗಿ ಪಠ್ಯದಲ್ಲಿ ಪಾಠ ಸೇರಿಸಲು ಶ್ರಮಿಸುತ್ತೇನೆ. ಜನಪದ ಮೌಖಿಕ ಸಂಪ್ರದಾಯದ್ದು. ಅದನ್ನು ದಾಖಲಿಸುವ ಕಾರ್ಯ ಮಾಡಬೇಕು. ಆತ್ಮಕ್ಕಿಂತ, ಅರಿವಿಗಿಂತ ದೊಡ್ಡ ದೇವರಿಲ್ಲ. ಜೀವನದ ಮೌಲ್ಯಗಳನ್ನು ತಿಳಿಸಿಕೊಡುವ ಕಾರ್ಯ ಜನಪದ ಮಾಡುತ್ತಿದೆ. ಜಾನಪದ ಸಾಹಿತ್ಯಕ್ಕೆ ಚೌಕಟ್ಟು ಇಲ್ಲ. ವೈವಿಧ್ಯಮಯ ಸಾಹಿತ್ಯವಾಗಿದೆ” ಎಂದರು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಶೋಕ ತಡಸದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಕಡುಬಡತನದಲ್ಲಿ ಬೆಳೆದು ಬಂದಿರುವ ಮಂಜಮ್ಮ ಜೋಗತಿ ಅವರ ಸಾಧನೆ ನಮ್ಮೆಲ್ಲ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದೆ. ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಬೌದ್ಧಿಕ ಆಸ್ತಿ ಹಕ್ಕುಗಳ ಜಾಗೃತಿ ಕಾರ್ಯಕ್ರಮ
ಆಡಳಿತಾಧಿಕಾರಿ ಎ ಬಿ ಕುಲಕರ್ಣಿ, ಪ್ರಾಚಾರ್ಯ ಎಸ್ ಎನ್ ಪೊಲೇಶಿ, ಐಕ್ಯೂಎಸಿ ಸಂಯೋಜಕ ಎಂ ಐ ಬಿರಾದಾರ ಸೇರಿದಂತೆ ಇತರರು ಇದ್ದರು.
