ಸರ್ಕಾರಿ ಆಸ್ಪತ್ರೆಯ ವೈದ್ಯರು ಒಂಬತ್ತು ವರ್ಷದ ಬಾಲಕನ ಗಾಯಗೊಂಡಿದ್ದ ಕಾಲಿಗೆ ಬದಲಾಗಿ ಆತನ ಖಾಸಗಿ ಅಂಗಕ್ಕೆ ತಪ್ಪಾಗಿ ಸುನ್ನತಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂಬ ಆರೋಪ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಶಹಾಪುರದಲ್ಲಿ ಕೇಳಿಬಂದಿದೆ. ಬಾಲಕನ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಪೋಷಕರ ದೂರಿನ ಬಳಿಕ, ಘಟನೆ ಬಗ್ಗೆ ತನಿಖೆ ನಡೆಸುವದಾಗಿ ಆರೋಗ್ಯಾಧಿಕಾರಿ ಭರವಸೆ ನೀಡಿದ್ದಾರೆ. ಪೊಲೀಸರು ಕೂಡ ತನಿಖೆ ನಡೆಸುತ್ತಿದ್ದಾರೆ.
ಅಪ್ರಾಪ್ತ ಬಾಲಕನ ಪೋಷಕರು ದಾಖಲಿಸಿರುವ ದೂರಿನಲ್ಲಿ, “ಕಳೆದ ತಿಂಗಳು ತನ್ನ ಸ್ನೇಹಿತರೊಂದಿಗೆ ಬಾಲಕ ಆಟವಾಡುತ್ತಿದ್ಧಾಗ, ಆತನ ಕಾಲಿಗೆ ಗಾಯವಾಗಿತ್ತು. ಜು.15ರಂದು ಆತನನ್ನು ಶಹಾಪುರದ ಉಪಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದೆವು. ಆದರೆ, ಗಾಯಗೊಂಡ ಕಾಲಿಗೆ ಬದಲಾಗಿ ಆತನ ಖಾಸಗಿ ಅಂಗಕ್ಕೆ ವೈದ್ಯರು ಸುನ್ನತಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ” ಎಂದು ಆರೋಪಿಸಿದ್ದಾರೆ.
“ನಂತರ, ವೈದ್ಯರು ತಮ್ಮ ಮೂರ್ಖತನವನ್ನು ಅರಿತುಕೊಂಡು, ಶೀಘ್ರದಲ್ಲೇ ಬಾಲಕನ ಗಾಯಗೊಂಡ ಕಾಲಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ,” ಎಂದು ಹೇಳಿದ್ದಾರೆ.

ಪೋಷಕರು ಶಹಾಪುರ ಪೊಲೀಸರಿಗೂ ದೂರು ನೀಡಿದ್ದಾರೆ. ಆರೋಪ ಸಂಬಂಧ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲವಾದರೂ, ದೂರಿನ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪದ ಬಗ್ಗೆ ಆರೋಗ್ಯ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ ಎಂದು ಜಿಲ್ಲಾ ಸಿವಿಲ್ ಸರ್ಜನ್ ಡಾ.ಕೈಲಾಸ್ ಪವಾರ್ ಹೇಳಿದ್ದಾರೆ.
ಆಸ್ಪತ್ರೆಯ ವೈದ್ಯಾಧಿಕಾರಿ ಗಜೇಂದ್ರ ಪವಾರ್ ಸುದ್ದಿಗಾರರೊಂದಿಗೆ ಮಾತನಾಡಿ, “ಬಾಲಕನಿಗೆ ಕಾಲಿನ ಗಾಯದ ಜೊತೆಗೆ ಫಿಮೊಸಿಸ್ (ಬಿಗಿಯಾದ ಮುಂದೊಗಲು) ಸಮಸ್ಯೆಯೂ ಇತ್ತು. ನಾವು ಎರಡು ಶಸ್ತ್ರಚಿಕಿತ್ಸೆಗಳನ್ನು ಮಾಡಬೇಕಿತ್ತು. ಎರಡನೇ ಆಪರೇಷನ್ ಬಗ್ಗೆ ಪೋಷಕರಿಗೆ ತಿಳಿಸುವುದನ್ನು ವೈದ್ಯರು ಮರೆತಿರಬಹುದು ಅಥವಾ ಅವರು ರೋಗಿಯ ಇತರ ಸಂಬಂಧಿಕರಿಗೆ ಹೇಳಿರಬಹುದು” ಎಂದಿದ್ದಾರೆ.
ವೈದ್ಯರು ಮಾಡಿದ್ದು ಸರಿ ಇದೆ. ಅದರಲ್ಲಿ ತಪ್ಪೇನೂ ಇಲ್ಲ ಎಂದು ಅವರು ಹೇಳಿದ್ದಾರೆ. ಆದರೆ, ಅವರ ವಿವರಣೆಯನ್ನು ಪೋಷಕರು ತಳ್ಳಿಹಾಕಿದ್ದಾರೆ.