ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಶನಿವಾರ ನಡೆದಿದ್ದು, ಕೇಂದ್ರ ಸರ್ಕಾರದ ಎದುರು ಬಿಹಾರಕ್ಕೆ ‘ವಿಶೇಷ ವರ್ಗ’ದ ಸ್ಥಾನಮಾನ ಅಥವಾ ವಿಶೇಷ ಪ್ಯಾಕೇಜ್ ನೀಡಬೇಕೆಂದು ಬೇಡಿಕೆ ಇಡಲು ನಿರ್ಣಯ ಅಂಗೀಕರಿಸಿದೆ ಎಂದು ವರದಿಯಾಗಿದೆ.
ಎನ್‌ಡಿಎ ಮೈತ್ರಿಯಲ್ಲಿಯೇ ಮುಂದುವರೆಯಲು ಪಕ್ಷವು ನಿರ್ಧರಿಸಿದೆ. ಅಲ್ಲದೆ, ಜೆಡಿಯುಗೆ ಹೊಸ ಕಾರ್ಯಾಧ್ಯಕ್ಷರನ್ನಾಗಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಝಾ ಅವರನ್ನು ನೇಮಿಸಿದೆ.
ಝಾ ಅವರು ಬಿಜೆಪಿ ನಾಯಕತ್ವದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸುವ ನಿರ್ಧಾರ ಮಹತ್ವದ್ದಾಗಿದೆ. ಬಿಜೆಪಿ ಜೊತೆ ಉತ್ತಮ ಒಪ್ಪಂದಗಳನ್ನು ಮಾಡಿಕೊಳ್ಳಲು, ಕೇಂದ್ರದಿಂದ ಹೆಚ್ಚು ಸವಲತ್ತುಗಳನ್ನು ರಾಜ್ಯಕ್ಕೆ ತರಲು ಝಾ ಸೂಕ್ತ ನಾಯಕನೆಂದು ಪಕ್ಷವು ಭಾವಿಸಿದೆ.
ಕಾರ್ಯಾಧ್ಯಕ್ಷರಾಗಿ ನೇಮಕವಾದ ನಂತರ ಮಾತನಾಡಿರುವ ಝಾ, “ಪ್ರಧಾನಿ ನರೇಂದ್ರ ಮೋದಿ ಯಾವಾಗಲೂ ಬಿಹಾರದತ್ತ ಹೆಚ್ಚು ಗಮನ ಹರಿಸುತ್ತಾರೆ. ರಾಜ್ಯಕ್ಕೆ ವಿಶೇಷ ವರ್ಗದ ಸ್ಥಾನಮಾನ ಅಥವಾ ಪ್ಯಾಕೇಜ್‌ಗಾಗಿ ಪಕ್ಷದ ಬೇಡಿಕೆಯನ್ನು ಈಡೇರಿಸುತ್ತಾರೆ ಎಂಬ ಭರವಸೆ ಇದೆ” ಎಂದು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಬಿಹಾರಕ್ಕೆ ‘ವಿಶೇಷ ವರ್ಗ’ ಸ್ಥಾನಮಾನ ಬೇಕೆಂಬುದು ನಿತೀಶ್ ಕುಮಾರ್ ಅವರ ಪಕ್ಷದ ಬಹುವರ್ಷಗಳ ಬೇಡಿಕೆಯಾಗಿದೆ. ಈಗ ಎನ್‌ಡಿಎ ಸರ್ಕಾರಕ್ಕೆ ನಿತೀಶ್ ಬೆಂಬಲ ಸೂಚಿಸಿದ ಬಳಿಕ, ಈ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ.
ಬಿಹಾರದಲ್ಲಿ ಎರಡು ಪ್ರಮುಖ ಮೀಸಲಾತಿ ಕಾಯಿದೆಗಳನ್ನು ಅಮಾನ್ಯಗೊಳಿಸಿರುವ ಪಾಟ್ನಾ ಹೈಕೋರ್ಟ್ ನೀಡಿರುವ ಇತ್ತೀಚಿನ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಪಕ್ಷವು ಮುಂದಾಗಿದೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.
ಅಂದಹಾಗೆ, 2019ರ ಲೋಕಸಭಾ ಚುನಾವಣೆಯಲ್ಲಿ 303 ಸ್ಥಾನಗಳೊಂದಿಗೆ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದ ಬಿಜೆಪಿ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ‘370ನೇ ವಿಧಿ’ಯನ್ನು ರದ್ದುಗೊಳಿಸಿತು. ಆ ರಾಜ್ಯವನ್ನು ವಿಭಜಿಸಿ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿತು. ಆದರೆ, ಈಗ ಬಿಜೆಪಿ ಸ್ವಂತ ಬಹುಮತ ಹೊಂದಿಲ್ಲ. ಈಗ ಬಿಜೆಪಿ ಎನ್‌ಡಿಎ ಮಿತ್ರಪಕ್ಷಗಳ ಮರ್ಜಿನಲ್ಲಿದೆ. ಎನ್‌ಡಿಎಯಲ್ಲಿ ಜೆಡಿಯು ಮತ್ತು ಟಿಡಿಪಿ ಕಿಂಗ್‌ಮೇಕರ್‌ಗಳಾಗಿದ್ದಾರೆ. ಜೆಡಿಯು ಬಿಹಾರಕ್ಕೆ ವಿಶೇಷ ವರ್ಗ ಸ್ಥಾನಮಾನಕ್ಕೆ ಬೇಡಿಕೆ ಇಟ್ಟಿದ್ದರೆ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬುದು ಟಿಡಿಪಿಯ ಬಹುಕಾಲದ ಬೇಡಿಕೆಯಾಗಿದೆ. ಹೀಗಾಗಿ, ಈ ಎರಡು ಪಕ್ಷಗಳನ್ನು ಬಿಜೆಪಿ ಹೇಗೆ ನಿಭಾಯಿಸುತ್ತದೆ ಮತ್ತು ಈ ಎರಡೂ ಪಕ್ಷಗಳು ತಮ್ಮ ರಾಜ್ಯಕ್ಕೆ ಕೇಂದ್ರದಿಂದ ಏನೆಲ್ಲ ತರುತ್ತವೆ ಎಂಬುದು ಕುತೂಹಲಕಾರಿಯಾಗಿಯೇ ಇದೆ.