ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಂಗಳೂರಿನ ಅವಿರತ ಪ್ರತಿಷ್ಠಾನ ಉಚಿತ ನೋಟ್ ಬುಕ್ ವಿತರಿಸುವ ಸಮಾಜಮುಖಿ ಕಾರ್ಯ ಶ್ಲಾಘನೀಯವಾಗಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರೇಮಸಾಗರ ದಾಂಡೇಕರ್ ಹೇಳಿದರು.
ಬೀದರ್ ತಾಲೂಕಿನ ಬೆಳ್ಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅವಿರತ ಪ್ರತಿಷ್ಠಾನದಿಂದ ಶನಿವಾರ ಆಯೋಜಿಸಿದ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
“ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಿಜಕ್ಕೂ ಪ್ರತಿಭಾವಂತರು, ಅವರಿಗೆ ಗುಣಮಟ್ಟ ಶಿಕ್ಷಣ ದೊರೆತರೆ ಉತ್ತಮ ಪ್ರಜೆಗಳಾಗಿ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು. ಬೆಂಗಳೂರಿನ ಐಟಿಬಿಟಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಸ್ನೇಹಿತರೆಲ್ಲರೂ ಅವಿರತ ಪ್ರತಿಷ್ಠಾನದ ಮೂಲಕ ತಮ್ಮ ಬಿಡುವಿನ ವೇಳೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪಠ್ಯ ಸಾಮಾಗ್ರಿ ಉಚಿತವಾಗಿ ಹಂಚುವ ಯೋಜನೆ ಸಮಾಜಕ್ಕೆ ಮಾದರಿಯಾಗಿದೆʼ ಎಂದರು.
ಅವಿರತ ಪ್ರತಿಷ್ಠಾನ ಸದಸ್ಯ ಪ್ರವೀಣ ರತ್ನಾಕರ್ ಮಾತನಾಡಿ, ʼಸರ್ಕಾರಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ನಮ್ಮ ಟ್ರಸ್ಟ್‌ನಿಂದ ಗ್ರಾಮೀಣ ಪ್ರದೇಶದಲ್ಲಿ ಉಚಿತ ನೋಟ್ ಬುಕ್ ವಿತರಿಸುವ ಯೋಜನೆ ರೂಪಿಸಲಾಗಿದೆ. ವಿದ್ಯಾರ್ಥಿಗಳು ಓದಿನ ಹವ್ಯಾಸ ಬೆಳಿಸಿಕೊಳ್ಳಬೇಕುʼ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಸಾಂವಿಧಾನಿಕ 371(ಜೆ) ಕಲಂ ವಿರುದ್ಧ ಅಪಪ್ರಚಾರ; ಬೀದರ್‌ನಲ್ಲಿ ಸಿಡಿದ ಆಕ್ರೋಶ
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರು ನಾಗಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯ ಸಿದ್ದಾರೆಡ್ಡಿ, ಎಸ್‌ಡಿಎಮ್‌ಸಿ ಅಧ್ಯಕ್ಷ ಸ್ಯಾಮಸನ್, ಗ್ರಾಮಸ್ಥರಾದ ನಾಗಪ್ಪ ಹಾರೂರಗೆರಿಕರ್, ಸಂಜೀವ ರತ್ನಾಕರ್, ಅಡೆಪ್ಪಾ, ಶಶಿಧರ ಸೇರಿದಂತೆ ಶಾಲಾ ಶಿಕ್ಷಕ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.