ಕಳೆದ ವರ್ಷ ಕಾರ್ಖಾನೆ ಬಂದ್ ಆಗಿರುವುದು ಎಲ್ಲರಿಗೂ ಬೇಜಾರಿನ ಸಂಗತಿ. ಕಾರ್ಮಿಕರು ಕಳೆದ ಒಂದು ವರ್ಷದಿಂದ ವೇತನವಿಲ್ಲದೆ ದುಡಿಯುತ್ತಿದ್ದಾರೆ. ಕಾರ್ಖಾನೆಯ ಲೀಜ಼್ ಪ್ರಕ್ರಿಯೆ ವಿಳಂಬಕ್ಕೆ ಕಾರಣಗಳೇನು? ಕಾರ್ಖಾನೆಯನ್ನು ಈ ವರ್ಷ ಹೇಗೆ ಪ್ರಾರಂಭ ಮಾಡುತ್ತಿರಿ ಎಂಬ ವಿಷಯದ ಬಗ್ಗೆ ನಮಗೆ ಗೊಂದಲವಿದೆ ಎಂದ ರೈತ ಮುಖಂಡ ಮುತ್ತಪ್ಪ ಕೋಮಾರ ಸಚಿವರ ಗಮನ ಸೆಳೆದರು.
ಬಾಗಲಕೋಟೆ ಜಿಲ್ಲೆಯ ಮುಧೋಳ್ ತಹಶೀಲ್ದಾರ್ ಕಚೇರಿ ಎದುರು ಹಮ್ಮಿಕೊಂಡಿದ್ದ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನರಾರಂಭದ ಕುರಿತು ಹಕ್ಕೊತ್ತಾಯ ಸಭೆ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪೂರ ಅವರೊಟ್ಟಿಗೆ ನಡೆದ ರೈತ ಮತ್ತು ಕಾರ್ಮಿಕರ ಮುಖಂಡರ ಸಭೆಯಲ್ಲಿ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪೂರ ಮಾತನಾಡಿ, “ನಾನು ಕಾರ್ಖಾನೆ ಪ್ರಾರಂಭಕ್ಕೆ ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ಹಲವಾರು ಕಾನೂನು ಅಡೆ-ತಡೆಗಳನ್ನು ಬಗೆಹರಿಸಿದ್ದೇನೆ. ಜುಲೈ 4ರಂದು ಸಚಿವ ಸಂಪುಟ ಸಭೆ ಇದೆ. ಈ ಸಚಿವ ಸಂಪುಟ ಸಭೆಯಲ್ಲಿ ಕಾರ್ಖಾನೆಯನ್ನು ಲೀಸ್ ಕೊಡುವುದು ಹಾಗೂ ಕಾರ್ಖಾನೆಯ ಪ್ರಾರಂಭಕ್ಕೆ 40 ಕೋಟಿ ರೂಪಾಯಿ ಬ್ಯಾಂಕ್ ಗ್ಯಾರಂಟಿ ನೀಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಈ ಸಚಿವ ಸಂಪುಟ ಸಭೆ ನಂತರ ಕಾರ್ಖಾನೆಯ ಪ್ರಾರಂಭದ ಬಗ್ಗೆ ಮತ್ತೆ ಎಲ್ಲ ಮುಖಂಡರು ಸಭೆ ಮಾಡಲಾಗುವುದು” ಎಂದು ಸಭೆಯಲ್ಲಿ ತಿಳಿಸಿದರು.
ಈ ಸಭೆಯಲ್ಲಿ ರೈತ ಮತ್ತು ಕಾರ್ಮಿಕರ ಮುಖಂಡರ ಜೊತೆಗೆ ಭಾಗವಹಿಸಿದ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರೂ ಕೂಡ ಕಾರ್ಖಾನೆಯ ಪ್ರಾರಂಭದ ಬಗ್ಗೆ ಸಚಿವರು ಗಟ್ಟಿ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಬಳಿಕ ಎಲ್ಲ ಮುಖಂಡರಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ʼಸಚಿವ ಸಂಪುಟ ಸಭೆಯ ನಂತರ ಎಲ್ಲರೂ ಸಭೆ ಸೇರೋಣʼ ಎಂದು ಹೇಳುವ ಮೂಲಕ ಸಭೆಯು ಮುಕ್ತಾಯವಾಯಿತು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಸರ್ಕಾರಿ ಕಾನೂನು ಮಹಾವಿದ್ಯಾಲಯ ನಿರ್ಮಿಸಿ, ಪ್ರಸಕ್ತ ವರ್ಷದಿಂದಲೇ ಪ್ರಾರಂಭಿಸಿ: ಎಸ್ಎಫ್ಐ ಆಗ್ರಹ
ಈ ಸಂದರ್ಭದಲ್ಲಿ ಮುತ್ತಪ್ಪ ಕೋಮಾರ, ಶುಭಾಷ ಶಿರುಬುರ, ಯುವ ವಕೀಲ ಡಾ. ಯಲ್ಲಪ್ಪ ಹೆಗಡೆ, ಈರಪ್ಪ ಹಂಚಿನಾಳ, ರಾಜು ಯಡಹಳ್ಳಿ, ಪ್ರಕಾಶ ಚಿತ್ತರಗಿ, ಗೋವಿಂದಪ್ಪ ಮೆಟಗುಡ್ಡ, ಬಸಪ್ಪ ಸಂಗನ್ನವರು ಸೇರಿದಂತೆ ಇತರರು ಇದ್ದರು.
