ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಆಸ್ತಿಗಳಿಗೆ ಡಬಲ್ ತೆರಿಗೆಯನ್ನು ವಿಧಿಸುವುದಲ್ಲದೆ, ಪಾರಂ 3ನ್ನು ಅನಧಿಕೃತವೆಂದು ನಮೂದಿಸಿ ಕೊಡಲಾಗುತ್ತಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಪಂಚಾಯಿತಿ ಸದಸ್ಯರೊಬ್ಬರು ಹೇಳಿದರು.
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.
“ನಾವು ಒಂದು ತಿಂಗಳ ಮುಂಚೆಯೇ ಇದರ ಕುರಿತು ಮನವಿ ಸಲ್ಲಿಸಿದ್ದರೂ ಈಗ ಮತ್ತೊಮ್ಮೆ ಜನಸ್ಪಂದನ ಸಭೆಯಲ್ಲಿ ಅಹವಾಲು ನೀಡಿದ್ದೇವೆ. ಈಗಲೂ ಅದರ ಬಗ್ಗೆ ಕ್ರಮ ತೆಗೆದುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ” ಎಂಬ ಎಚ್ಚರಿಕೆ ನೀಡಿದರು.
ತಾಲೂಕಿನ ಬಾಚಿಗೊಂಡನಹಳ್ಳಿಯಿಂದ ಬಂದಂತಹ ವ್ಯಕ್ತಿಯೊಬ್ಬರು ಮಾತನಾಡಿ, “ಇಡೀ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಮನರೇಗಾ ಕೆಲಸದ ಅಡಿ ಕೂಲಿ ಮಾಡುವ ಕಾರ್ಮಿಕರಿಗೆ ಅನೇಕ ರೀತಿಯಲ್ಲಿ ತಾರತಮ್ಯ ಎಸಗುತ್ತಿದ್ದು, ಮನೆಯಲ್ಲಿದ್ದವರಿಗೆ ಹೆಚ್ಚಿನ ಕೂಲಿಯನ್ನು ಕೊಟ್ಟು ನಿಜವಾದ ಫಲಾನುಭವಿಗಳಿಗೆ ಕಡಿಮೆ ಕೂಲಿಯನ್ನು ಕೊಡುತ್ತಿದ್ದಾರೆ. ಇದಕ್ಕೆ ತಕ್ಕ ಪುರಾವೆಗಳು ನನ್ನ ಬಳಿ ಇವೆ” ಎಂದು ಸವಾಲೆಸೆದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಆಗ್ರಹ; ಉಸ್ತುವಾರಿ ಸಚಿವರೊಂದಿಗೆ ಹಕ್ಕೊತ್ತಾಯ ಸಭೆ
ಈ ಕಾರ್ಯಕ್ರಮಕ್ಕೆ ತಾಲೂಕಿನ ಎಲ್ಲ ಗ್ರಾಮಗಳಿಂದ ಮಹಿಳೆಯರು, ವೃದ್ಧರು ಹಾಗೂ ಅಂಗವಿಕಲರೂ ಕೂಡಾ ತಮ್ಮ ಅಹವಾಲುಗಳನ್ನು ಸಲ್ಲಿಸಲು ಬಂದಿದ್ದರು. ಜತೆಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಅಹವಾಲುಗಳನ್ನು ಕೊಡಲು ಬಂದಿದ್ದ ಸಾರ್ವಜನಿಕರಿಗೆ ಸರಿಯಾದ ವ್ಯವಸ್ಥೆ ಮಾಡದೆ ಜನರು ನೂಕು ನುಗ್ಗುಲಿನಲ್ಲಿ ತೆರಳಿ ಕೊಡಬೇಕಾಯಿತು. ಕೆಲವರಂತೂ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂದಿರುಗಿದರು.
ವರದಿ : ಮಧು ಕೊಟ್ಟೂರ
