ಹೊಸ ಮೂರು ಕ್ರಿಮಿನಲ್ ಅಪರಾಧ ಕಾನೂನುಗಳು ಇಂದಿನಿಂದ (ಜುಲೈ 1) ಜಾರಿಗೆ ಬರುತ್ತಿದ್ದಂತೆ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಮೊದಲ ಪ್ರಕರಣ ದಾಖಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಕಮಲಾ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಬೀದಿ ಬದಿ ವ್ಯಾಪಾರಿ ವಿರುದ್ಧವಾಗಿ ಮೊದಲ ಎಫ್‌ಐಆರ್ ದಾಖಲಿಸಲಾಗಿದೆ.
ದೆಹಲಿಯ ರೈಲು ನಿಲ್ದಾಣದ ಫುಟ್ ಓವರ್ ಬ್ರಿಡ್ಜ್ ಅಡಿ ಬೀದಿ ಬದಿ ವ್ಯಾಪಾರ ಮಾಡಿದ್ದಕ್ಕಾಗಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 285ರ ಅಡಿಯಲ್ಲಿ ಬೀದಿ ಬದಿ ವ್ಯಾಪಾರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎಫ್‌ಐಆರ್ ಪ್ರಕಾರ ಆರೋಪಿಯನ್ನು ಬಿಹಾರದ ಬರ್ಹ್ ನಿವಾಸಿ ಪಂಕಜ್ ಕುಮಾರ್ ಎಂದು ಗುರುತಿಸಲಾಗಿದೆ.
ಬೀದಿ ಬದಿ ವ್ಯಾಪಾರಿಯು ಮುಖ್ಯರಸ್ತೆಯ ಬಳಿ ತಳ್ಳುಗಾಡಿಯಲ್ಲಿ ತಂಬಾಕು ಮತ್ತು ನೀರನ್ನು ಮಾರಾಟ ಮಾಡುತ್ತಿದ್ದ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ಪೊಲೀಸರು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ. ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ವ್ಯಾಪಾರಿ ಬಳಿ ತನ್ನ ಗಾಡಿ ತೆಗೆಯುವಂತೆ ಹೇಳಿದಾಗ ಆತ ಅಧಿಕಾರಿಗಳನ್ನು ಕಡೆಗಣಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಇನ್ನು ಬಡ ಬೀದಿ ಬದಿ ವ್ಯಾಪಾರಿ ಮೇಲೆ ದೂರು ದಾಖಲಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದು ನಿಮ್ಮ ನೂತನ ಕಾನೂನಿನ ಸಾಧನೆಯೇ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ನಿಮಗೆ ಬೀದಿ ಬದಿ ವ್ಯಾಪಾರಿಯೇ ಮೊದಲು ಸಿಕ್ಕಿದ್ದೆ ಎಂದು ಕೇಳಿದ್ದಾರೆ.
ಮೂರು ಹೊಸ ಕ್ರಿಮಿನಲ್ ಕಾನೂನುಗಳ ಮಾಹಿತಿ
ಈ ಹಿಂದಿನ ಕ್ರಿಮಿನಲ್ ಕಾನೂನುಗಳಾದ ಭಾರತೀಯ ದಂಡ ಸಂಹಿತೆ (ಐಪಿಸಿ), ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ), ಮತ್ತು ಭಾರತೀಯ ಸಾಕ್ಷ್ಯ ಕಾಯಿದೆಯ ಬದಲಿಗೆ ಭಾರತೀಯ ನ್ಯಾಯ ಸಂಹಿತೆ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ 2023 ಎಂಬ ಹೊಸ ಕಾನೂನುಗಳನ್ನು ಜಾರಿ ಮಾಡಲಾಗಿದೆ.
ಇದನ್ನು ಓದಿದ್ದೀರಾ? ಇಂದಿನಿಂದ ಮೂರು ಹೊಸ ಅಪರಾಧ ಕಾನೂನುಗಳು ಜಾರಿಗೆ
ಈ ಹಿಂದಿನ ಇಂಡಿಯನ್ ಪೀನಲ್ ಕೋಡ್ (ಐಪಿಸಿ) 511 ಸೆಕ್ಷನ್‌ಗಳನ್ನು ಹೊಂದಿದೆ. ಆದರೆ ನೂತನ ಕಾನೂನು ಭಾರತೀಯ ನ್ಯಾಯ ಸಂಹಿತೆಯು 358 ಸೆಕ್ಷನ್‌ಗಳನ್ನು ಹೊಂದಿದೆ. ಸಂಹಿತೆಯಲ್ಲಿ ಒಟ್ಟು 20 ಹೊಸ ಅಪರಾಧಗಳು ಸೇರ್ಪಡೆಯಾಗಿದ್ದು, 33 ಅಪರಾಧಗಳಿಗೆ ಜೈಲು ಶಿಕ್ಷೆಯನ್ನು ಹೆಚ್ಚಿಸಲಾಗಿದೆ.
83 ಅಪರಾಧಗಳಲ್ಲಿ ದಂಡದ ಮೊತ್ತವನ್ನು ಹೆಚ್ಚಿಸಲಾಗಿದೆ. 23 ಅಪರಾಧಗಳಲ್ಲಿ ಕಡ್ಡಾಯ ಕನಿಷ್ಠ ಶಿಕ್ಷೆಯನ್ನು ಪರಿಚಯಿಸಲಾಗಿದೆ. ಆರು ಅಪರಾಧಗಳಲ್ಲಿ ಸಮುದಾಯ ಸೇವೆಯ ದಂಡವನ್ನು ಪರಿಚಯಿಸಲಾಗಿದೆ. ಕಾಯಿದೆಯಲ್ಲಿ 19 ವಿಭಾಗಗಳನ್ನು ರದ್ದುಗೊಳಿಸಲಾಗಿದೆ ಅಥವಾ ತೆಗೆದುಹಾಕಲಾಗಿದೆ.
ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ) 484 ಸೆಕ್ಷನ್‌ಗಳನ್ನು ಹೊಂದಿದೆ. ಆದರೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 531 ಸೆಕ್ಷನ್‌ಗಳನ್ನು ಹೊಂದಿದೆ. ಸಂಹಿತೆಯಲ್ಲಿ ಒಟ್ಟು 177 ನಿಬಂಧನೆಗಳನ್ನು ಬದಲಾಯಿಸಲಾಗಿದೆ. ಒಂಬತ್ತು ಹೊಸ ಸೆಕ್ಷನ್‌ಗಳು ಮತ್ತು 39 ಹೊಸ ಸಬ್ ಸೆಕ್ಷನ್‌ಗಳನ್ನು ಸೇರಿಸಲಾಗಿದೆ.
Delhi: First case under new penal code Bharatiya Nyaya Sanhita lodged against street vendor
Read @ANI Story | https://t.co/vBfTIHPfht#NewCriminalLaw #BharatiyaNyayaSanhita #StreetVendor pic.twitter.com/zE6wjpjnKb
— ANI Digital (@ani_digital) July 1, 2024
44 ಹೊಸ ನಿಬಂಧನೆಗಳು ಮತ್ತು ಸ್ಪಷ್ಟೀಕರಣಗಳನ್ನು ಸೇರಿಸಲಾಗಿದೆ. 35 ಸೆಕ್ಷನ್‌ಗಳಿಗೆ ಟೈಮ್‌ಲೈನ್‌ಗಳನ್ನು ಸೇರಿಸಲಾಗಿದೆ. ಸಂಹಿತೆಯಲ್ಲಿ ಒಟ್ಟು 14 ವಿಭಾಗಗಳನ್ನು ರದ್ದುಪಡಿಸಲಾಗಿದೆ ಮತ್ತು ತೆಗೆದುಹಾಕಲಾಗಿದೆ.
ಭಾರತೀಯ ಸಾಕ್ಷ್ಯ ಕಾಯಿದೆಯಲ್ಲಿ 167 ನಿಬಂಧನೆಗಳು ಇರುತ್ತದೆ. ಅದರ ಬದಲಾಗಿ ಭಾರತೀಯ ಸಾಕ್ಷ್ಯ ಅಧಿನಿಯಮ 170 ನಿಬಂಧನೆಗಳನ್ನು ಹೊಂದಿರುತ್ತದೆ. ಒಟ್ಟು 24 ನಿಬಂಧನೆಗಳನ್ನು ಬದಲಾಯಿಸಲಾಗಿದೆ. ಎರಡು ಹೊಸ ನಿಬಂಧನೆಗಳು ಮತ್ತು ಆರು ಉಪ-ನಿಬಂಧನೆಗಳನ್ನು ಸೇರಿಸಲಾಗಿದೆ. ಆರು ನಿಬಂಧನೆಗಳನ್ನು ಅಧಿನಿಯಮದಲ್ಲಿ ರದ್ದುಗೊಳಿಸಲಾಗಿದೆ ಅಥವಾ ಅಳಿಸಲಾಗಿದೆ.