ಜರ್ಮನ್ ತತ್ವಜ್ಞಾನಿಯ ಹೆಗೆಲ್ “Times makes us but history shapes us- ಕಾಲ ನಮ್ಮನ್ನು ಸೃಷ್ಟಿಸುತ್ತದೆ ಆದರೆ ಇತಿಹಾಸ ನಮ್ಮನ್ನು ರೂಪಿಸುತ್ತದೆ” ಎಂಬ ಮಾತುಗಳಿಗೆ ಸ್ಪಷ್ಟ ನಿದರ್ಶನ ಮತ್ತು ಉದಾಹರಣೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ. ಅವರು ಚೋಕರ್ಸ್ ಎಂಬ ಪಟ್ಟ ಕಳಚಿಹಾಕಲು, ತಾತ್ಕಾಲಿಕವಾಗಿಯಾದರೂ ಇತಿಹಾಸವನ್ನ ಮರೆಯಬೇಕಿದೆ. ಆದರೆ ಕರಾಳ ಇತಿಹಾಸ ಮರೆಯುವುದು, ಮಂಡೇಲಾ ಉದಾತ್ತತೆ ಅರಗಿಸಿಕೊಳ್ಳುವುದು ಅಷ್ಟು ಸುಲಭವೇ?
1991. ನನಗಾಗ ಹತ್ತು ವರ್ಷ. ಕ್ರಿಕೆಟಿನ ಅತಿಯಾದ ಹುಚ್ಚು. ಕ್ರಿಕೆಟ್ ಆಡುವುದು, ಕ್ರಿಕೆಟ್ ನೋಡುವುದಷ್ಟೇ ಜೀವನದ ಪರಮ ಗುರಿಯಾಗಿದ್ದ ದಿನಗಳವು. ಭಾರತ ಪಾಕಿಸ್ತಾನ ನಡುವಿನ ಸೆಣಸಾಟವಂತೂ ಜೀವ ಒತ್ತೆಯಿಟ್ಟಾದರು ನೋಡಬೇಕಿತ್ತು. ಮನೆಯಲ್ಲಿನ ಕಪ್ಪು ಬಿಳುಪಿನ ಟಿವಿಯಲ್ಲಿ ಕ್ರಿಕೆಟ್ ನೋಡಲು ಹಿಂಸೆಯಾಗುತ್ತಿತ್ತು. ಆಗಾಗ ಆ ಹಳೆಯ ಟಿವಿಯ ಪರದೆ ಮೇಲೆ ಅಲೆಗಳು ಮೂಡುತ್ತಿದ್ದವು ಅಥವಾ ಸೊಳ್ಳೆಗಳ ಸಮೂಹ ಏಕಾಏಕಿ ದಾಳಿಯಿಡುವಂತೆ ಲಕ್ಷಾಂತರ ಚುಕ್ಕೆಗಳು ಕಾಣಿಸಿಕೊಳ್ಳುತ್ತಿದ್ದವು. ಕಲರ್ ಟಿವಿಗಾಗಿ ದಂಬಾಲು ಬಿದ್ದರು ಇನ್ನತ್ತು ವರುಷ ನಮ್ಮ ಮನೆಗೆ ಕಲರ್ ಟಿವಿ ಬರಲಿಲ್ಲ. ಈ ಅಲೆಗಳು/ಸೊಳ್ಳೆಗಳಂತಹ ಚುಕ್ಕೆಗಳು ಕ್ರಿಕೆಟ್ ಇರುವಾಗಲೇ ಕಾಣಿಸಿಕೊಳ್ಳುತ್ತಿದ್ದವು. ಪಕ್ಕದ ಮನೆಗೆ ಹೋಗಿ ಮ್ಯಾಚ್ ನೋಡುವ ಅನಿವಾರ್ಯತೆ ನನಗೆ. ಮನೆಗೆ ವಾಪಸ್ ಬಂದ್ಮೇಲೆ ಏಟು ಗ್ಯಾರಂಟಿಯಾಗಿದ್ದರು, ಕ್ರಿಕೆಟ್‌ಗಾಗಿ ಯಾವ ತ್ಯಾಗಕ್ಕೂ ತಯಾರಿಗಿದ್ದ ಕಾಲವದು.
1991 ಅಕ್ಟೋಬರ್‍ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತಕ್ಕೆ ಬರುವುದಿತ್ತು. ಕ್ರಿಕೆಟಿಂಗ್ rivalry ಯಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಆಡುವ ಆಶೀಸ್ ತುಂಬ ಮಹತ್ವದ್ದು ಅಂತ ಪರಿಣತರು ಹೇಳೋದನ್ನ ಕೇಳೋಕೆ ಬಹಳ ದೊಡ್ಡ ಜೋಕ್ ಅನ್ನಿಸೋದು. ನನಗೆ ಭಾರತ ಪಾಕಿಸ್ತಾನ ತಂಡಗಳ ನಡುವಣ ನಡೆಯುವ ಪೈಪೋಟಿಗಿಂತ ದೊಡ್ಡ ಪೈಪೋಟಿ ಮೂರು ಲೋಕದಲ್ಲೆಲ್ಲೂ ಇರಲಿಲ್ಲ. ಆ ವರುಷದ ಅಕ್ಟೋಬರ್‍ನಲ್ಲಿ ಭಾರತ-ಪಾಕ್ ಸರಣಿಗಾಗಿ ಕಾತುರದಿಂದ ಕಾಯುತ್ತಿದ್ದವನಿಗೆ ನಿರಾಶೆ ಕಾದಿತ್ತು. ಬಾಂಬೆಯ ವಾಂಖೆಡೆ ಕ್ರೀಡಾಂಗಣದ ಪಿಚ್ ಅಗೆದು, ಎಂಜಿನ್ ಆಯಿಲ್ ಸುರಿದು ಹದಗೆಡಿಸಿದ್ದರು ಶಿವ ಸೇನೆ ಕಾರ್ಯಕರ್ತರು! ಪಾಕಿಸ್ತಾನದವರು ಭರತ ಭೂಮಿಯಲ್ಲಿ ಕಾಲಿಡಬಾರದೆಂಬ ಆಜ್ಞೆ ಹೊರಡಿಸಿದ್ದರು. ಈ ಘಟನೆಯ ನಂತರ ಪಾಕಿಸ್ತಾನ ಸರಣಿಯಿಂದಲೇ ಹಿಂದೆ ಸರಿಯಿತು. ‘ನಿಮಗೆ ಸಂಪೂರ್ಣ ಸುರಕ್ಷತೆ ನೀಡುತ್ತೇವೆ, ಪಂದ್ಯಗಳನ್ನೇ ಬೇರೆ ನಗರಕ್ಕೆ ಶಿಫ್ಟ್ ಮಾಡುತ್ತೇವೆ’ ಎಂದು ಭಾರತ ಕ್ರಿಕೆಟ್ ಮಂಡಳಿ ಆಶ್ವಾಸನೆ ನೀಡಿದರು, ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಇಮ್ರಾನ್ ಖಾನ್ ‘ನೊ ಥ್ಯಾಂಕ್ಸ್’ ಎಂದಿದ್ದ!
ಈಗಿನಷ್ಟು ಬಲಿಷ್ಠ ಮತ್ತು ಪ್ರಭಾವಿಯಾಗಿಲ್ಲದ ಭಾರತ ಕ್ರಿಕೆಟ್ ಮಂಡಳಿ ಪ್ರಪಂಚದ ಮುಂದೆ ತಲೆತಗ್ಗಿಸುವಂತಾಗಿತ್ತು. ಸರಣಿ ರದ್ದಾಗಿದ್ದರಿಂದ ಭಾರಿ ಆರ್ಥಿಕ ನಷ್ಟ ಅನುಭವಿಸುವ ಭಯ ಮಂಡಳಿಗೆ ಎದುರಾಯಿತು. ಮಂಡಳಿಯ ಅಧ್ಯಕ್ಷರಾಗಿದ್ದ ಮಾಧವ್ ರಾವ್ ಸಿಂಧ್ಯಾಗೆ ಇದೊಂದು ತಲೆ ನೋವಾಗಿ ಪರಿಣಮಿಸಿತು. ಸಿಂಧ್ಯಾ ಕೆಲ ಕಾಲ ಆಲೋಚಿಸಿ ದಕ್ಷಿಣ ಆಫ್ರಿಕಾದ ಅಲಿ ಬಾಕರ್ ಅವರಿಗೆ ಫೋನ್ ಹಾಯಿಸಿ, ದಕ್ಷಿಣ ಆಫ್ರಿಕಾ ತಂಡವನ್ನ ಭಾರತದಲ್ಲಿ ಆಡಲು ಕಳುಹಿಸಿಕೊಡುವಂತೆ ವಿನಂತಿಸಿಕೊಂಡಿದ್ದರು. ಆಗುತ್ತಿದ್ದ ನಷ್ಟ ತಡೆಯಲು ಅವರಿಗೆ ಹೊಳೆದ ಮಾರ್ಗ ಇದೊಂದೇ ಆಗಿತ್ತು. ಹೀಗೆ clive ರೈಸ್ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಬಂದಿಳಿಯಿತು.
ದಕ್ಷಿಣ ಆಫ್ರಿಕಾ ಸುಮಾರು ಇಪ್ಪತ್ತು ವರ್ಷಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಭಾರತಕ್ಕೆ ಬಂದಿತ್ತು. ಅನಿರ್ದಿಷ್ಟ ಕಾಲ ಅಮಾನತ್ತಿನಲ್ಲಿಟ್ಟಿತ್ತೆಂಬುದು ನನಗೆ ದಶಕಗಳ ನಂತರ ತಿಳಿಯಿತು. ದಕ್ಷಿಣ ಆಫ್ರಿಕಾ ತಂಡವನ್ನ ಸುಲಭವಾಗಿ ಭಾರತದವರು ಸದೆಬಡಿಯುತ್ತಾರೆ. ಮ್ಯಾಚ್ ನೋಡುವ ಅವಶ್ಯಕತೆ ಇಲ್ಲ ಎಂದುಕೊಂಡಿದ್ದ ನನಗೆ ಅಚ್ಚರಿ ಕಾದಿತ್ತು. ದಕ್ಷಿಣ ಆಫ್ರಿಕಾ ತಂಡ ಭಾರತ ತಂಡಕ್ಕೆ ತೀವ್ರ ಪೈಪೋಟಿ ನೀಡಿತು. ಮೂರೇ ಪಂದ್ಯಗಳಲ್ಲಿ ನಾನಂತೂ ಕೆಪ್ಲರ್ ವೆಸೆಲ್ಸ್, ಪೀಟರ್ ಕಿರ್ಸ್ಟೀನ್, ಮ್ಯಾಕ್ ಮಿಲನ್ ಫ್ಯಾನ್ ಆಗಿ ಹೋದೆ. ಕಪ್ಪುವರ್ಣದವರ ನಾಡಲ್ಲಿ ಬರಿ ಬಿಳಿಯರೇ ತುಂಬಿದ್ದು ತಂಡದಲ್ಲಿ ಪ್ರತಿಭೆ ತುಂಬಿ ತುಳುಕುತ್ತಿತ್ತು.
ಅಂದಿನಿಂದ ನಾನು ದಕ್ಷಿಣ ಆಫ್ರಿಕಾ ತಂಡವನ್ನ ಫಾಲೋ ಮಾಡಿಕೊಂಡೆ ಬಂದಿದ್ದೇನೆ. ತೆಂಡೂಲ್ಕರ್, ಫ್ಯಾನಿ ಡಿ ವಿಲಿಯರ್ಸ್ ಅವರ ಬೌಲಿಂಗಿಗೆ ಪತರಗುಟ್ಟುತ್ತಿದ್ದುದು, ಗ್ಯಾರಿ ಕ್ರಿಸ್ಟನ್ ಅದ್ಭುತ ಬ್ಯಾಟಿಂಗ್, ಅಲನ್ ಡೊನಾಲ್ಡ್, ಶಾನ್ ಪೊಲಾಕ್ ಅವರ ಮಾರಕ ಬೌಲಿಂಗ್, ಕಾಲಿಸ್ ಅವರ ಆಲ್ರೌಂಡ್ ಆಟಕ್ಕೆ ಮನಸೋತೆ. ಕ್ಲುಸ್ನೇರ್, ಡಿ ವಿಲಿಯರ್ಸ್, ಮಕಾಯ ಏನ್ ಟಿನಿ ತಂಡಕ್ಕೆ ಕಾಲಿಟ್ಟ ಮೇಲಂತೂ ತಂಡದ ಅಭಿಮಾನಿಯಾದೆ. ಆದರೆ ಇಷ್ಟೆಲ್ಲಾ ಪ್ರತಿಭೆಯಿದ್ದು ದಕ್ಷಿಣ ಆಫ್ರಿಕಾ ತಂಡದವರು ತಮ್ಮ ಹೆಗಲ ಮೇಲಿಂದ ಇಳಿಸಲಾಗದ ಮಂಗ, ಚೋಕರ್‍ಗಳೆಂಬ ಪಟ್ಟ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಹಳ ಕಾಲ ನೆನಪಿನಲ್ಲುಳಿಯುವ ಫೈನಲ್ ಪಂದ್ಯ
ಪ್ರಮುಖ ಪಂದ್ಯಾವಳಿಯ ನಿರ್ಣಾಯಕ ಹಂತದಲ್ಲಿ ಗೆಲ್ಲುವ ಪಂದ್ಯಗಳನ್ನ ಸೋತು ಪಂದ್ಯಾವಳಿಯಿಂದಲೇ ಹೊರಬೀಳುವ ಚಾಳಿಯದು. ಮಹತ್ವದ ಪಂದ್ಯಾವಳಿಗಳ ನಿರ್ಣಾಯಕ ಹಂತದಲ್ಲಿ ಈ ಪ್ರತಿಭಾನ್ವಿತ ತಂಡವೇಕೆ ಆಶ್ಚರ್ಯಕರ ರೀತಿಯಲ್ಲಿ ಕುಸಿಯುತ್ತದೆ ಎಂದು ಹಲವು ಬಾರಿ ಯೋಚಿಸಿದರು, ಶೇನ್ ವಾರ್ನ್ ಆತ್ಮಕಥನ ಓದುವವರೆಗೆ ಸಮರ್ಪಕ ಉತ್ತರ ನನಗೆ ಸಿಕ್ಕಿರಲಿಲ್ಲ.
ವಿಷಯಾಂತರ ಅಂತ ಅನ್ನಿಸಿದರೂ ಪರವಾಗಿಲ್ಲ ಕಳೆದ ವರ್ಷ ನಮ್ಮನ್ನಗಲಿದ ಶೇನ್ ಕುರಿತು ಒಂದೆರಡು ಮಾತುಗಳನ್ನ ಹೇಳಲೇಬೇಕು. ಶೇನ್ ವಾರ್ನ್, ಮೈಕ್ ಗ್ಯಾಟ್ಟಿಂಗ್ ಅವರನ್ನ ಔಟ್ ಮಾಡಿದ ಎಸೆತ ಯಾರು ತಾನೇ ಮರೆಯಲು ಸಾಧ್ಯ? ಅದು ನಿಜವಾಗಿಯು ಬಾಲ್ ಆಫ್ ದ ಸೆಂಚುರಿ! ಲೆಗ್ ಸ್ಟಂಪ್‌ನಿಂದ ಎರಡು ಅಡಿ ಆಚೆ ಬಿದ್ದ ಚೆಂಡು ಸ್ಪಿನ್ ಆಗಿ ಆಫ್ ಸ್ಟಂಪ್ ಉರುಳಿಸಿದ ಎಸೆತ ಶತಮಾನದ ಎಸೆತವಾಗಲೇಬೇಕು.
ಶೇನ್ ವಾರ್ನ್ ಬಗ್ಗೆ ತುಂಬಾ ಅಚ್ಚರಿ ಮೂಡಿಸುತ್ತಿದ್ದ ವಿಷಯವೆಂದರೆ ಆತ ಗಾಳಿಯಲ್ಲಿ ಚೆಂಡಿಗೆ ನೀಡುತ್ತಿದ್ದ ತಿರುವುಗಳು. ಅದೊಂದು ವಿಸ್ಮಯ. ಮತ್ತವನ ಈಸಿ ಆಕ್ಷನ್. ಯಾರೋ ಪೋಲಿ ಹುಡುಗನೊಬ್ಬ ತಾಯಿಯ ಒತ್ತಾಯಕ್ಕೆ ಮಣಿದು ಕೈ ಚೀಲ ಹಿಡಿದು ಮಾರುಕಟ್ಟೆಗೆ ಹೋದಂತೆ ಆತನ ಆಕ್ಷನ್! ಒಬ್ಬ ಬೌಲರ್‍ಗೆ ಇರಬೇಕಾದ ದೇಹ ಶೇನ್ ವಾರ್ನ್‌ಗೆ ಇರಲಿಲ್ಲ ಇಂತಹ ಸರಳ ಬೌಲಿಂಗ್ ಆಕ್ಷನ್ ಮತ್ತು ಪ್ರತಿಭೆ ಇದ್ದವನಿಗೆ ಅದು ಬೇಕಾಗಿಯೂ ಇರಲಿಲ್ಲ.
ಸಚಿನ್- ವಾರ್ನ್ ಸೆಣಸಾಟ ಕ್ರಿಕೆಟ್ ಇತಿಹಾಸದಲ್ಲಿ ಅವಿಸ್ಮರಣೀಯ. ಬಹುಶಃ ವಾರ್ನ್‌ನ ತಂತ್ರ ತಿರುವುಗಳನ್ನ ಸಂಪೂರ್ಣವಾಗಿ ಅರ್ಥಮಾಡಿಕೊಂಡದ್ದು ಸಚಿನ್ ಮತ್ತು ಸ್ವಲ್ಪ ಮಟ್ಟಿಗೆ ಬ್ರಯನ್ ಲಾರ ಮಾತ್ರ ಅನ್ನಿಸುತ್ತೆ. ಸಚಿನ್ ಶಾಂತಮೂರ್ತಿ ಮತ್ತು ಅನುಸರಣೆಯ ಪ್ರತೀಕವಾದರೆ. ವಾರ್ನ್ ಒಬ್ಬ flamboyant ಟಪೋರಿ. ಆತ ಮಾಡದ ತರಲೆಗಳಿಲ್ಲ, ಸಿಕ್ಕಿಹಾಕಿಕೊಳ್ಳದ ಹಗರಣಗಳಿಲ್ಲ. ಪ್ರತಿ ಕ್ಷಣವು ಉತ್ಕಟವಾಗಿ ಬದುಕಿಬಿಡಬೇಕೆಂಬ ಒಬ್ಬ intense ಚಿರಯುವಕ. Desert storm ಸರಣಿಯಲ್ಲಿ ಸಚಿನ್, ವಾರ್ನ್ ಎಸೆತಗಳನ್ನ ಶಾರ್ಜಾ ಕ್ರೀಡಾಂಗಣದಿಂದ ಹೊರಕಳಿಸುವಾಗ ನನ್ನ ಹೃದಯ ವಾರ್ನ್‌ಗಾಗಿ ಮರುಗಿದ್ದಂತೂ ನಿಜ. ಶೇನ್ ಎಲ್ಲಕ್ಕಿಂತ ಮಿಗಿಲಾಗಿ ಕ್ರಿಕೆಟ್ ಆಟದ ಅತ್ಯುತ್ತಮ ವಿಶ್ಲೇಷಕ ಕೂಡ.
ಶೇನ್ ವಾರ್ನ್ ಅವರ ಹಲವಾರು ಶ್ರೇಷ್ಠ ಬೌಲಿಂಗ್ ಪ್ರದರ್ಶನಗಳಲ್ಲಿ 1999 ವಿಶ್ವ ಕಪ್ ಜನರ ಮನಸ್ಸಿನಲ್ಲಿ ನಾನಾ ಕಾರಣಗಳಿಗೆ ಉಳಿದುಕೊಳ್ಳುತ್ತದೆ. ಶೇನ್ ವಾರ್ನ್ ಕೂಡ ತಮ್ಮ ಆತ್ಮಚರಿತ್ರೆಯಲ್ಲಿ ವಿಶೇಷವಾಗಿ ಈ ವಿಶ್ವಕಪ್ ಅನ್ನು ನೆನಪಿಸಿಕೊಳ್ಳುತ್ತಾರೆ. ದಕ್ಷಿಣ ಆಫ್ರಿಕಾ ತಂಡಕ್ಕೆ ಚೋಕರ್ಸ್ ಎಂಬ ಹಣೆಪಟ್ಟಿ ಬರುವುದಕ್ಕೆ ಪ್ರಮುಖ 1999 ವಿಶ್ವಕಪ್ ಕಾರಣವೆಂಬುದು ನನ್ನ ಅನಿಸಿಕೆ.
1999ರ ವಿಶ್ವಕಪ್ ನಡೆದದ್ದು ಇಂಗ್ಲೆಂಡಿನಲ್ಲಿ. ಆಸ್ಟ್ರೇಲಿಯಾಕ್ಕೆ ಮೊದಲೆರಡು ಪಂದ್ಯಗಳ ಎದುರಾಳಿ ನ್ಯೂಜಿಲ್ಯಾಂಡ್ ಮತ್ತು ಪಾಕಿಸ್ತಾನ. ಮೊದಲೆರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಹೀನಾಯ ಸೋಲು ಅನುಭವಿಸುತ್ತದೆ. ಕ್ರಿಕೆಟ್ ಪಂಡಿತರೆಲ್ಲ ಆಸ್ಟ್ರೇಲಿಯಾ ಬಹುಬೇಗ ಗಂಟು ಮೂಟೆ ಕಟ್ಟಿಕೊಂಡು ತವರಿಗೆ ಬರಿಗೈಯಲ್ಲಿ ಮರಳಲಿದ್ದಾರೆಂದು ಭವಿಷ್ಯ ನುಡಿಯುತ್ತಾರೆ. ಆ ಗಳಿಗೆಯಲ್ಲಿ ಶೇನ್ ವಾರ್ನ್‌ಗೆ ಒಂದು ಫೋನ್ ಕರೆ ಬರುತ್ತೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷ ಟ್ರೆವೊರ್ ಹೋಹ್ನ್ಸ್ ಆ ಕರೆ ಮಾಡಿದವ. “ಮುಂದಿನ ಪಂದ್ಯಗಳಲ್ಲಿ ಸ್ಟೀವ್ ವಾ ರನ್ ಗಳಿಸಲಿಲ್ಲವೆಂದರೆ, ವಿಶ್ವಕಪ್ ಪಂದ್ಯಾವಳಿಯ ಮುಂದಿನ ಹಂತಕ್ಕೆ ತಂಡ ಹೋಗಲಿಲ್ಲವೆಂದರೆ, ತಂಡದಿಂದ ಸ್ಟೀವ್‌ನನ್ನ ಕೈ ಬಿಟ್ಟು, ನಿನ್ನನ್ನ ನಾಯಕನನ್ನಾಗಿ ಮಾಡುತ್ತೇನೆ” ಎಂಬ ಆಶ್ವಾಸನೆಯನ್ನ ವಾರ್ನ್‌ಗೆ ನೀಡುತ್ತಾರೆ.
ತಂಡವನ್ನ ಮುಂದಿನ ಪಂದ್ಯಗಳಲ್ಲಿ ಗೆಲ್ಲಿಸಿ, ಆತ್ಮವಿಶ್ವಾಸ ಮರುಳುವಂತೆ ಮಾಡಿ, ವಿಶ್ವಕಪ್ ಮುಂದಿನ ಹಂತಕ್ಕೆ ಕರೆದುಕೊಂಡು ಹೋಗುವ ಆಲೋಚನೆಯಲ್ಲಿದ್ದ ವಾರ್ನ್‌ಗೆ ಈ ಕರೆ ಅಷ್ಟು ಮುಖ್ಯವೆನ್ನಿಸುವುದೇ ಇಲ್ಲ. ಫೈನಲ್ ಪ್ರವೇಶಿಸಲು ಮುಂದಿನ ಆರು ಪಂದ್ಯಗಳನ್ನ ಗೆದ್ದು, ಕೊನೆಯ ಪಂದ್ಯದಲ್ಲೂ ಗೆದ್ದು ವಿಶ್ವ ಕಪ್‌ನೊಂದಿಗೆ ಸಂಭ್ರಮಿಸುವುದು ಅವನ ಮತ್ತು ತಂಡದ ಏಕೈಕ ಗುರಿಯಾಗಿರುತ್ತದೆ. ಅವರಿಗೆ ಮತ್ತೆ ಎಡುವುದಕ್ಕೆ ಯಾವ ಅವಕಾಶವು ಇಲ್ಲದಾಗುತ್ತದೆ. One more loss and they were gone!
ಆಸ್ಟ್ರೇಲಿಯಾದ ಮುಂದಿನ ಎದುರಾಳಿ- ದಕ್ಷಿಣ ಆಫ್ರಿಕಾ! ದಕ್ಷಿಣ ಆಫ್ರಿಕಾ ಕತೆಯೇ ಬೇರೆಯಿತ್ತು. 1992ರ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ದುರದೃಷ್ಟಕರ ರೀತಿಯಲ್ಲಿ ಪಂದ್ಯಾವಳಿಯಿಂದ ಹೊರಬಿದ್ದಿತ್ತು. ಅಂದು ಸಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಗೆಲುವಿನ ಹಾದಿಯಲ್ಲಿದ್ದ ದಕ್ಷಿಣ ಆಫ್ರಿಕಾಕ್ಕೆ ಅಡ್ಡಿಯಾಗಿದ್ದು ಮಳೆ ಮತ್ತು ಡಕ್ವರ್ಥ್ ಲೂಯಿಸ್ ನಿಯಮ. 1996ರ ವಿಶ್ವಕಪ್‌ನಲ್ಲಿ ಗ್ರೂಪ್ ಹಂತದ ಎಲ್ಲಾ ಪಂದ್ಯಗಳಲ್ಲಿ ಗೆದ್ದರು ಕ್ವಾಟರ್ ಫೈನಲ್ ಹಂತದಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಸೋತು ನಿರ್ಗಮಿಸಿತ್ತು. ಆ ಬಾರಿ ವಿಶ್ವಕಪ್ ಗೆಲ್ಲಲೇಬೇಕೆಂದು ಇಂಗ್ಲೆಂಡಿಗೆ ಬಂದಿದ್ದ ತಂಡವದು. ನೆಲ್ಸನ್ ಮಂಡೇಲಾ ಅಪಾರ ವಿಶ್ವಾಸವಿಟ್ಟು ಬೆನ್ನುತಟ್ಟಿ ಕಳುಹಿಸಿದ್ದ ತಂಡವದು. ಆದರೆ ದಕ್ಷಿಣ ಆಫ್ರಿಕಾಕ್ಕೆ ಚೋಕರ್ಸ್ ಎಂಬ ಪಟ್ಟ ಗಟ್ಟಿಯಾಗಿದ್ದು ಇದೇ 1999 ವಿಶ್ವಕಪ್‌ನಲ್ಲಿ. ಕ್ರಿಕೆಟ್ ಪ್ರಿಯರಾರು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಣ ನಡೆದ ಆ ಎರಡು ಪಂದ್ಯಗಳನ್ನ ಎಂದಿಗೂ ಮರೆಯಲು ಸಾಧ್ಯವಿಲ್ಲ. ಆ ಪಂದ್ಯಗಳು ನಡೆದು ಇಪ್ಪತ್ತು ವರ್ಷಗಳ ಮೇಲಾದರೂ ಅವು ನನ್ನ ನೆನಪಿನಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿವೆ.
ಅದು ಹೆಡಿಂಗ್ಲಿಯಲ್ಲಿ ನಡೆದ ಸೂಪರ್ ಸಿಕ್ಸ್ ಪಂದ್ಯ. ಆ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಸ್ಟೀವ್ ವಾ ಅವರ ಕ್ಯಾಚ್ ಅನ್ನು ಡ್ರಾಪ್ ಮಾಡಿದ. ಹರ್ಷಲ್ ಗಿಬ್ಸ್ “ಈಗ ಬರಿಯ ಕ್ಯಾಚ್ ಬಿಡಲಿಲ್ಲ, ವಿಶ್ವ ಕಪ್ಪನ್ನೇ ಕೈ ಬಿಟ್ಟೆ” ಎಂದು ಸ್ಟೀವ್ ವಾ ಹೇಳಿದನೆಂಬ ಕಟ್ಟುಕತೆ ಕ್ರಿಕೆಟಿಂಗ್ ಜಾನಪದದಲ್ಲಿ ಸೇರಿಹೋಗಿದೆ. ಆದರೆ ಸತ್ಯವನ್ನ ತನ್ನ ಆತ್ಮಕಥನದಲ್ಲಿ ಶೇನ್ ದಾಖಲಿಸಿದ್ದಾನೆ. ಪಂದ್ಯ ನಡೆಯುವ ಹಿಂದಿನ ದಿನ ಆಸ್ಟ್ರೇಲಿಯಾ ತಂಡ ತರಬೇತಿ ಮುಗಿಸಿ ಚರ್ಚೆ ನಡೆಸುವಾಗ ಕೋಚ್ ಮತ್ತು ಸ್ಟೀವ್ ಯಾರಿಗಾದರೂ ಏನಾದರು ಹೇಳುವುದಿದೆಯೇ ಎಂದು ಕೇಳಿದಾಗ ಶೇನ್ ವಾರ್ನ್ “ಸ್ನೇಹಿತರೆ ಹರ್ಷಲ್ ಗಿಬ್ಸ್ ಕ್ಯಾಚ್ ಹಿಡಿದೊಡನೆ ನೀವು ತಲೆತಗ್ಗಿಸಿ ನಡೆದುಬಿಡಬೇಡಿ. ಸ್ಟಾಂಡ್ ಯುವರ್ ಗ್ರೌಂಡ್. ಅಲ್ಲೇ ಅರೆ ಕ್ಷಣ ನಿಲ್ಲಿ. ಆತನಿಗೆ ಕ್ಯಾಚ್ ಹಿಡಿದಾಕ್ಷಣ ಚೆಂಡನ್ನು ಮೇಲಕ್ಕೆ ಎಸೆದುಬಿಡುವ ಅಭ್ಯಾಸವಿದೆ. ಅಂಪೈರ್‍ಗಳು ಇದನ್ನು ಗಮನಿಸುತ್ತಿದ್ದಾರೆ. ನಾಳೆಯ ಪಂದ್ಯದಲ್ಲಿ ಅವನು ಹಾಗೆ ಮಾಡಿದರೆ ಅಂಪೈರ್‍ಗಳಿಗೆ ತಿಳಿಸಿ” ಎಂದಿದ್ದ! ಈ ನಂಬಲಸಾಧ್ಯ ಸೂಕ್ಷ್ಮ ಸಲಹೆ ವಿಶ್ವ ಕಪ್ಪನ್ನೇ ಅಲ್ಲ ಸ್ಟೀವ್ ವಾನ ವೃತ್ತಿ ಜೀವನವನ್ನೇ ಉಳಿಸಿತ್ತು. ಆಸ್ಟ್ರೇಲಿಯಾ ಅಂದು ಸ್ಟೀವ್ ಶತಕದ (ಔಟಾಗದೆ 120) ಸಹಾಯದಿಂದ 271 ರನ್ ಬೆನ್ನಟ್ಟಿ ಗೆದ್ದಿತ್ತು.
ಮುಂದಿನ ಪಂದ್ಯ ಎಡ್ಜ್ ಬಸ್ಟಾನ್‌ನಲ್ಲಿ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಣ ನಡೆದ ಸೆಮಿಫೈನಲ್ ಪಂದ್ಯ ಬಹುಶಃ ಸಾರ್ವಕಾಲಿಕ ಶ್ರೇಷ್ಠ ಏಕದಿನ ಪಂದ್ಯ ಎಂದರು ತಪ್ಪಾಗಲಾರದು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಕೇವಲ 213ಕ್ಕೆ ಆಲೌಟ್ ಆಯಿತು. ಪೊಲಾಕ್, ಡೊನಾಲ್ಡ್ ಅಬ್ಬರದ ಬೌಲಿಂಗ್ ಎದುರು ಸ್ಟೀವ್ ವಾ/ಬೇವನ್ ಜೊತೆಯಾಟ ಅಂದು ಆಸ್ಟ್ರೇಲಿಯಾ ಮಾನ ಉಳಿಸಿತ್ತು. ದಕ್ಷಿಣ ಆಫ್ರಿಕಾ ಬಹಳ ವಿಶ್ವಾಸದಿಂದಲೇ ಈ ಸಣ್ಣ ಮೊತ್ತವನ್ನ ಚೇಸ್ ಮಾಡತೊಡಗಿತು. ಶೇನ್ ವಾರ್ನ್ ಕೈಗೆ ಸ್ಟೀವ್ ಬಾಲು ಎಸೆದಾಗ ಆಫ್ರಿಕಾ ಸ್ಕೋರ್ 43/0. ತನ್ನ ಭುಜವನ್ನ ಸಡಿಲ ಪಡಿಸಿಕೊಂಡು ತನ್ನೆಲ್ಲಾ ಶಕ್ತಿ ಮತ್ತು ಕೌಶಲ್ಯವನ್ನ ಪ್ರಯೋಗಿಸುವ ಕಾಲ ಬಂದಿದೆ ಎಂದು ಮನದೊಳಗೆ ಅಂದುಕೊಂಡ ವಾರ್ನ್ ಎಸೆತಗಳಲ್ಲಿ ಹೆಚ್ಚು ತಿರುವುಕೊಡಲು ಶುರುಮಾಡಿದ್ದ. ಶತಮಾನದ ಎಸೆತವೆಂದು ಪ್ರಖ್ಯಾತವಾಗಿರುವ ಗ್ಯಾಟಿಂಗ್ ವಿಕೆಟ್ ಪಡೆದ ಎಸೆತದಷ್ಟೇ ಮಾಂತ್ರಿಕ ಸ್ಪಿನ್ ಎಸೆತದಿಂದ ಗಿಬ್ಸನ್ ಔಟ್ ಮಾಡಿದ, ನಂತರದ ಸರದಿ ಕಿರ್ಸ್ಟೆನ್ ಮತ್ತು ಹಾನ್ಸಿ ಕ್ರೋನಿಯನದ್ದು. ನೋಡ ನೋಡುತ್ತಿದಂತೆ ಶೇನ್ ಎಂಟು ಓವರ್‍ಗಳಲ್ಲಿ ಮೂರೂ ವಿಕೆಟ್ ತೆಗೆದು ಕೇವಲ ಹನ್ನೆರಡು ರನ್ ನೀಡಿದ್ದ. ಅಂದು ಆಸ್ಟ್ರೇಲಿಯಾ ತಂಡಕ್ಕೆ ಗೆಲುವಿನ ದಾರಿ ತೋರಿಸಿದ್ದು ಶೇನ್. ಇದರ ನಡುವೆ ಬಂಡೆಯಂತೆ ನಿಂತ ಜ್ಯಾಕ್ ಕಾಲಿಸ್/ಜಾಂಟಿ/ಪೊಲಾಕ್ ಹೋರಾಟ ನಡೆಸಿದ್ದರು. ನಲವತ್ತಮೂರನೇ ಓವರ್‍ನಲ್ಲಿ ಮತ್ತೊಂದು ಬ್ರೇಕ್ ನೀಡಿದ ಶೇನ್ ವಾರ್ನ್, ಈ ಬಾರಿಯ ವಿಕೆಟ್ ಜ್ಯಾಕ್ ಕಾಲಿಸನದು. ನಂತರ ಆರು ಓವರ್‍ಗಳಲ್ಲಿ ನಡೆದದ್ದು ಕ್ರಿಕೆಟ್ ಪಂದ್ಯಗಳಲ್ಲಿ ಮತ್ತೆಂದೂ ನೋಡ ಸಿಗದ ದೃಶ್ಯಗಳು. ಒಂದು ಬದಿಯಲ್ಲಿ ವಿಕೆಟ್ ಬೀಳುವಾಗಲು ಬೌಂಡರಿ ಬಾರಿಸುತ್ತಲೇ ವಿಜಯದ ಹೊಸ್ತಿಲಿಗೆ ದಕ್ಷಿಣ ಆಫ್ರಿಕವನ್ನ ತಂದು ನಿಲ್ಲಿಸಿದ್ದ ಲಾನ್ಸ್ ಕ್ಲುಸ್ನೇರ್!
1999ರ ವಿಶ್ವ ಕಪ್ ಸೆಮಿ ಫೈನಲ್ಲಿನ ಕೊನೆಯ ಓವರ್ ನನ್ನಂತಹ ಸಾಕಷ್ಟು ಕ್ರಿಕೆಟ್ ಪ್ರಿಯರಿಗೆ ಬಹು ದೊಡ್ಡ ಮಿಸ್ಟರಿ. ಅಂದು ದಕ್ಷಿಣ ಆಫ್ರಿಕಾ ತಂಡಕ್ಕೆ ಇದ್ದ ಒತ್ತಡ ಯಾವುದು? What was playing on their mind? ಆರು ಎಸೆತಗಳಲ್ಲಿ ದಕ್ಷಿಣ ಆಫ್ರಿಕಾ ಫೈನಲ್ ಪ್ರವೇಶಿಸಲು ಬೇಕಾಗಿದ್ದುದು ಒಂಬತ್ತು ರನ್. ಫ್ಲೆಮಿಂಗ್ ಎಸೆತ ಎದುರಿಸಲು ಕ್ಲುಸ್ನೇರ್ ತಯಾರಿದ್ದಾನೆ. ಮೊದಲೆರಡು ಎಸೆತಗಳನ್ನ ಬೌಂಡರಿಗಟ್ಟಿದ ಕ್ಲುಸ್ನೇರ್. Ball went like a tracer bullet. ಯಾವ ಕ್ಷೇತ್ರರಕ್ಷಕನು ಅಲುಗಾಡಲಿಲ್ಲ ಅಷ್ಟು ರಭಸದ ಹೊಡೆದ ಕ್ಲುಸ್ನೇರ್‍ದ್ದಾಗಿತ್ತು. ಕೊನೆಯ ನಾಲ್ಕು ಎಸೆತಕ್ಕೆ ಬೇಕಾಗಿದ್ದು ಒಂದು ರನ್ ಮಾತ್ರ. ಗೆಲುವಿಗೆ ಇಷ್ಟು ಸನಿಹ ಬಂದರು ದಕ್ಷಿಣ ಆಫ್ರಿಕಾದ ಡ್ರೆಸ್ಸಿಂಗ್ ರೂಮ್‌ನಲ್ಲಿ ನಗುವಿನ ಛಾಯೆಯು ಇರಲಿಲ್ಲ. ಸ್ಟೀವ್ ತನ್ನೆಲ್ಲಾ ಕ್ಷೇತ್ರ ರಕ್ಷಕರನ್ನ ಮೂವತ್ತು ಗಜದ ವೃತ್ತದಂಚಿನಲ್ಲಿ ನಿಲ್ಲಿಸಿದ. ಕ್ಲುಸ್ನೇರ್‍ಗೆ ಗೊತ್ತಿದ್ದುದು ಬೌಂಡರಿ ಹೊಡೆಯುವುದು ಮಾತ್ರ. ಆದರೆ ಜಯಕ್ಕೆ ಬೇಕಾಗಿದ್ದು ಒಂದು ರನ್. ಮನಸ್ಸು ಮಾಡಿದ್ದಾರೆ ಕ್ಲುಸ್ನೇರ್ ಮೂರನೇ ಎಸೆತವನ್ನೂ ಬೌಂಡರಿಗೆ ಅಟ್ಟಬಹುದಿತ್ತು. ಆದರೆ ಕ್ಲುಸ್ನೇರ್ ತಲೆಯಲ್ಲಿ ನಮೂದಾಗಿದ್ದುದು ಒಂದು ರನ್ ಮಾತ್ರ. ಫ್ಲೆಮಿಂಗ್ ಕೂಡ ಯಾರ್ಕರ್ ಹಾಕಿದ್ದ. ಅಚ್ಚರಿ ಎಂಬಂತೆ ಇನ್ನೊಂದು ಬದಿಯಲ್ಲಿದ್ದ ಡೊನಾಲ್ಡ್ ಕಣ್ಣು ಮುಚ್ಚಿ ಹುಚ್ಚನಂತೆ ಓಡತೊಡಗಿದ್ದ. ಬಹುಶಃ ಅವನ ತಲೆಯಲ್ಲೂ ಒಂದು ರನ್ ಮಾತ್ರ ತಾಂಡವವಾಡುತಿತ್ತು ಅನ್ನಿಸುತ್ತೆ. ಅದೃಷ್ಟವಶಾತ್ ಡೊನಾಲ್ಡ್ ಔಟಾಗದೆ ಬದುಕುಳಿದ. ಇಷ್ಟೆಲ್ಲಾ ಗೊಂದಲಗಳ ನಡುವೆಯೂ ಕ್ಲುಸ್ನೇರ್ – ಡೊನಾಲ್ಡ್ ಒಬ್ಬರನ್ನೊಬ್ಬರು ಮಾತನಾಡಿಸಲಿಲ್ಲ. ಮುಂಬರುವ ಎಸೆತದ ಕುರಿತು ಒಂದು ಕ್ಷಣ ಚರ್ಚಿಸಲಿಲ್ಲ. ಮುಂದಿನ ಫ್ಲೆಮಿಂಗ್ ಎಸೆತವನ್ನ ಬಾರಿಸಿ ಕ್ಲುಸ್ನೇರ್ ಒಮ್ಮೆಲೇ ಓಡತೊಡಗಿದ. ಡೊನಾಲ್ಡ್ ರಸ್ತೆ ಮಧ್ಯೆ ಚಲಿಸುವ ವಾಹನದ ಹೆಡ್ಲೈಟ್ ಎದುರು ದಂಗಾಗಿ ನಿಲ್ಲುವ ಮೊಲದಂತಾದ. ಪಂದ್ಯ ಟೈ ಆಯಿತು. ಆದರೆ ಸೂಪರ್ ಸಿಕ್ಸ್ ಹಂತದಲ್ಲಿ ಸಾಧಿಸಿದ್ದ ಗೆಲುವಿನ ಆಧಾರದ ಮೇಲೆ ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸಿತು.
What was going on in the mind of Lance Klusner? ತಂಡದಲ್ಲಿ ಝುಲು ಎಂದೇ ಪ್ರಖ್ಯಾತನಾಗಿದ್ದ ಕ್ಲುಸ್ನೇರ್ ಅಂದು ಯಾಕೆ ನಿರ್ಣಾಯಕ ಹಂತದಲ್ಲಿ ಮುಗ್ಗರಿಸಿದ? (ದಕ್ಷಿಣ ಆಫ್ರಿಕಾದ ಅತಿ ದೊಡ್ಡ ಬುಡಕಟ್ಟು ಜನಾಂಗ ಝುಲು. ಝುಲುಗಳು ನಿರ್ಭೀತ ಯೋಧರು ಕೂಡ.) ನಿರ್ಣಾಯಕ ಹಂತದಲ್ಲಿ ಆಫ್ರಿಕಾ ಹೀಗೇಕೆ ಪ್ರಮಾದವೆಸಗುತ್ತದೆ? ಅದ್ಯಾವ ಒತ್ತಡವನ್ನ ಅವರು ಮೀರಲಾಗುತ್ತಿಲ್ಲ?
ಆಫ್ರಿಕಾ ಅನುಸರಿಸುತ್ತಿದ್ದ ವರ್ಣಭೇದ ನೀತಿಯನ್ನ ವಿರೋಧಿಸಿ, ನೆಲ್ಸನ್ ಮಂಡೇಲಾ ಅವರ ಬಿಡುಗಡೆ ಒತ್ತಾಯಿಸಿ, ಆಫ್ರಿಕಾದಲ್ಲಾಗುತ್ತಿದ್ದ ಮಾನವ ಹಕ್ಕು ಉಲ್ಲಂಘನೆ ಖಂಡಿಸಿ ಅಂತಾರಾಷ್ಟ್ರೀಯ ಕ್ರೀಡಾ ಸಮುದಾಯ ಆಫ್ರಿಕಾವನ್ನ ಎಲ್ಲ ಕ್ರೀಡೆಗಳಿಂದ ದಶಕಗಳ ಕಾಲ ಬ್ಯಾನ್ ಮಾಡಿತ್ತು. 1990ರಲ್ಲಿ ಬಿಡುಗಡೆಯಾದ ನೆಲ್ಸನ್ ಮಂಡೇಲಾ 1994ರಲ್ಲಿ ರಾಷ್ಟ್ರಪತಿಯೂ ಆದರು. ಈ ನಡುವೆ ಬ್ಯಾನ್ ಸಡಿಲಿಕೆಯಾಗಿ 21 ವರ್ಷಗಳ ನಂತರ ದಕ್ಷಿಣ ಆಫ್ರಿಕಾ ತಂಡ ಅಂತಾರಾಷ್ಟ್ರೀಯ ಸರಣಿಯೊಂದನ್ನು ಭಾರತದಲ್ಲಿ ಆಡಲು ಬಂದಿತ್ತು ವರ್ಣಭೇದದ ಕರಾಳ ದಿನಗಳ ನೆರಳು ಮಾಯವಾಗಿರಲಿಲ್ಲ. ಹಲವು ಕಪ್ಪು ಸಂಘಟನೆಗಳು ಬಿಳಿಯರನ್ನ ಸಂಪೂರ್ಣವಾಗಿ ದೇಶದಿಂದ ಹೊಡೆದೋಡಿಸಿ ಹೊಸ ದೇಶ ಕಟ್ಟುವ ಕನಸು ಕಾಣುತ್ತಿದ್ದರು. ಆದರೆ ನೆಲ್ಸನ್ ಮಂಡೇಲಾ ತೆಗೆದುಕೊಂಡ ನಿರ್ಧಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಎಲ್ಲ ವರ್ಣದವರನ್ನ ಒಳಗೊಂಡ ವೈವಿಧ್ಯಮಯ ದೇಶ ದಕ್ಷಿಣ ಆಫ್ರಿಕವಾಗಬೇಕು ಎಂದು ಮಂಡೇಲಾ ಪ್ರತಿಪಾದಿಸಿದರು.
ವಸಾಹತುಶಾಹಿಗಳು ತಮ್ಮ ಸೋಮಾರಿತನವನ್ನ ಕಳೆಯಲು, ಕಪ್ಪುವರ್ಣದವರನ್ನ ದೂರವಿಡಲು ಮತ್ತು ನಾವು ಸ್ಥಳೀಯರಿಗಿಂತ ವಿಭಿನ್ನ ಎಂದು ತೋರಿಸಿಕೊಳ್ಳಲು ಆಡುತ್ತಿದ್ದ ಕ್ರಿಕೆಟ್ ಮತ್ತು ರಗ್ಬಿ ಸಂಪೂರ್ಣ ಬಿಳಿಯರ ತಂಡಗಳಿಗೆ ಮಂಡೇಲಾ ಬೆಂಬಲ ಸೂಚಿಸಿದರು. ತಂಡಗಳಿಗೆ ಔತಣಕೂಟಗಳನ್ನ ಏರ್ಪಡಿಸಿ ಸ್ಥೈರ್ಯ ತುಂಬಿದರು. ಅವರ ಸ್ಪೂರ್ತಿಯಿಂದಲೇ 1995ರ ರಗ್ಬಿ ವಿಶ್ವ ಕಪ್ ಗೆದ್ದಿತ್ತು ದಕ್ಷಿಣ ಆಫ್ರಿಕಾ ತಂಡ. ಅಂದು ಕಪ್ಪು ವರ್ಣದವರು/ ಬಿಳಿಯರು ಅಪ್ಪಿ ಕುಣಿದು ಕುಪ್ಪಳಿಸಿದ್ದರು. ನೆಲ್ಸನ್ ಮಂಡೇಲಾ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಕ್ಕೂ ಇದೆ ರೀತಿಯ ಉತ್ತೇಜನ ನೀಡಿದ್ದರು.
ಯಾವುದೇ ಸೇಡು, ಹಗೆ, ಮತ್ಸರಗಳಿಲ್ಲದ ಮಂಡೇಲಾರ ಉದಾತ್ತತೆ ಬಿಳಿಯರಲ್ಲಿ ಅತಿಯಾದ ಗಿಲ್ಟ್ ಹುಟ್ಟಿಸಿರಬೇಕು. ಕ್ರಿಕೆಟ್‌ನಂತಹ ಕ್ರೀಡೆಯಲ್ಲಿ ದಕ್ಷಿಣ ಆಫ್ರಿಕಾ ತಂಡದ ಬಿಳಿಯರು “ನಾವು ಕೂಡ ದಕ್ಷಿಣ ಆಫ್ರಿಕಾಕ್ಕೆ ಸೇರಿದವರೇ ಎಂದು ಸಾಬೀತು ಪಡಿಸಲೇಬೇಕಾದ ಒತ್ತಡದಲ್ಲಾಡುತ್ತಾರೆ” ಎಂಬುದು ನನ್ನ ಅನಿಸಿಕೆ. ಶೇನ್ ವಾರ್ನ್ ಕೂಡ ಇದನ್ನೇ ತನ್ನ ಆತ್ಮಕಥನದಲ್ಲಿ ಸೂಚಿಸುತ್ತಾನೆ. ಈ ಐತಿಹಾಸದ ಹೊರೆ (burden of history) ಮತ್ತು ಅದರಿಂದ ಸೃಷ್ಟಿಯಾಗುವ ಒತ್ತಡಕ್ಕೆ ಸುಲಭ ಪರಿಹಾರವಿಲ್ಲ.
ಭಾರತ ಕ್ರಿಕೆಟ್ ತಂಡದಲ್ಲೂ ಇದೇ ರೀತಿಯ ಒತ್ತಡವಿದೆ ಎಂದರೆ ನೀವು ನಂಬುವುದಿಲ್ಲ. ತಂಡದ ರೋಹಿತ್ ಶರ್ಮಗೆ ಬರಿಯ ಆಟದ ಒತ್ತಡವಿದ್ದರೆ, ಸಿರಾಜ್ ಅಂತವರ ಮೇಲೆ ಪಂದ್ಯದ ಒತ್ತಡದ ಜೊತೆಗೆ “ತಾನೊಬ್ಬ ಭಾರತೀಯ”ನೆಂದು ಪ್ರತಿ ಆಟದಲ್ಲೂ ಸಾಬೀತು ಪಡಿಸಬೇಕಾದ ಅನಿವಾರ್ಯತೆ ಇರುತ್ತದೆ. ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಉಮ್ರಾನ್ ಮಲಿಕ್, ಅರ್ಶದೀಪ್ ಸಿಂಗ್‌ನಂತಹ ಆಟಗಾರರ ಪ್ರತಿ ನಡೆಯೂ ಕಠೋರ ಪರಿಶೀಲನೆಗೆ ಒಳಪಡುತ್ತವೆ. ತಿಲಕವಿಡುವುದಿಲ್ಲ ಎಂದಿದ್ದಕ್ಕೆ, ಗೆಲುವಿನ ಸಂತಸದ ಕ್ಷಣಗಳಲ್ಲಿ ಷ್ಯಾಂಪೇನು ಹಾರಿಸುವಾಗ ವೇದಿಕೆಯಿಂದ ಕೆಳಗಿಳಿದುದಕ್ಕೆ ತೀವ್ರವಾದ ಟ್ರೋಲುಗಳಿಗೆ ಒಳಗಾಗುತ್ತಾರೆ. ಭಾರತದಲ್ಲೇ ಅಲ್ಲದೆ ವಿದೇಶಗಳಲ್ಲೂ ಅವರನ್ನ ಭಯೋತ್ಪಾದಕರೆಂದು ಕರೆದು ಅವರ ಮೇಲೆ ಬಾಟಲ್ ತೂರಲಾಗುತ್ತದೆ. ಇನ್ನು ಅವರುಗಳು ಯಾವುದಾದರೂ ಪಂದ್ಯಗಳಲ್ಲಿ ಕ್ಯಾಚ್ ಬಿಟ್ಟರೆ ಅವರು ಪಾಕಿಸ್ತಾನಿಗಳಾಗಿಬಿಡುತ್ತಾರೆ. ಇಂದಿನ ಇಸ್ಲಾಮೊಫೋಬಿಯಾ ಪೀಡಿತ ಜಗತ್ತಿನಲ್ಲಿ ನಿಜವಾದ ಅನ್ಯರು ಸಿರಾಜ್ ಮತ್ತು ಉಮ್ರಾನ್‌ನಂತವರು.
ಅದೇ ರೀತಿ ಶತ ಶತಮಾನಗಳ ಜಾತಿ ನಿಂದನೆ, ಹೀಯಾಳಿಕೆ, ಅವಮಾನದಿಂದ ಹೊರಬಂದು ಭಾರತ ತಂಡಕ್ಕಾಡಿದ ವಿನೋದ್ ಕಾಂಬ್ಳಿಗಿದ್ದ ಒತ್ತಡ, ಸಚಿನ್ ತೆಂಡೂಲ್ಕರ್ ಎಂದಿಗೂ ಅನುಭವಿಸಿರಲಾರ. ವಿನೋದ್ ಕಾಂಬ್ಳಿಯ ಟೆಸ್ಟ್ ಬ್ಯಾಟಿಂಗ್ ಸರಾಸರಿ ಸಚಿನ್ ತೆಂಡೂಲ್ಕರ್ ಸರಾಸರಿಗಿಂತ ಹೆಚ್ಚಿತ್ತು ಮತ್ತು ಸಚಿನ್ ತಮ್ಮ ಮೊದಲ ದ್ವಿಶತಕ ಬಾರಿಸಲು ಹತ್ತು ವರ್ಷ ಕ್ರಿಕೆಟ್ ಆಡಬೇಕಾಯಿತು. ಆದರೆ ಆಡಿದ 17 ಟೆಸ್ಟ್‌ಗಳಲ್ಲೇ ಎರಡು ದ್ವಿಶತಕ ಬಾರಿಸಿದ್ದ ಕಾಂಬ್ಳಿ ಅನ್ನೋದು ಸಾಕಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ. ವಿನೋದ್ ಕಾಂಬ್ಳಿಗೆ ಶಿಸ್ತು ಕಡಿಮೆ, ಆತನಿಕೆ ವರ್ಕ್ ಎಥಿಕ್ಸ್ ಇರಲಿಲ್ಲವೆನ್ನುವವರು ಸಾಮಾನ್ಯವಾಗಿ ಆತನ ಮೇಲಿದ್ದ ಐತಿಹಾಸ/ಸಾಮಾಜಿಕ ಒತ್ತಡಗಳನ್ನ ಕಡೆಗಣಿಸಿಬಿಡುತ್ತಾರೆ.
ಜರ್ಮನ್ ತತ್ವಜ್ಞಾನಿಯ ಹೆಗೆಲ್ “Times makes us but history shapes us- ಕಾಲ ನಮ್ಮನ್ನು ಸೃಷ್ಟಿಸುತ್ತದೆ, ಆದರೆ ಇತಿಹಾಸ ನಮ್ಮನ್ನು ರೂಪಿಸುತ್ತದೆ” ಎಂಬ ಮಾತುಗಳಿಗೆ ಸ್ಪಷ್ಟ ನಿದರ್ಶನ ಮತ್ತು ಉದಾಹರಣೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ. ಅವರು ಚೋಕರ್ಸ್ ಎಂಬ ಪಟ್ಟ ಕಳಚಿಹಾಕಲು, ತಾತ್ಕಾಲಿಕವಾಗಿಯಾದರೂ ಇತಿಹಾಸವನ್ನ ಮರೆಯಬೇಕಿದೆ. ಕರಿಯರು/ಬಿಳಿಯರು ಒಂದೇ, ಯೂರೋಪಿನಿಂದ ಬಂದು ಆಫ್ರಿಕಾದಲ್ಲಿ ನೆಲೆಯೂರಿದ ನಾವು ಈಗ ಆಫ್ರಿಕಾದವರೇ ಎಂದು ಅಂತರ್ಗತ ಮಾಡಿಕೊಳ್ಳಬೇಕಿದೆ. ಆದರೆ ಕರಾಳ ಇತಿಹಾಸ ಮರೆಯುವುದು, ಮಂಡೇಲಾ ಉದಾತ್ತತೆ ಅರಗಿಸಿಕೊಳ್ಳುವುದು ಅಷ್ಟು ಸುಲಭವೇ?
ಕಾಲದ ಅಗಾಧತೆಯಲ್ಲಿ ನಿರಂತರ ಘಟಿಸುತ್ತಲೇ ಇರುವ ಇತಿಹಾಸಕ್ಕೆ ಕೆಲ ಸಮುದಾಯಗಳು ಮೂಕ ಸಾಕ್ಷಿಗಳಾದರೆ, ಇನ್ನು ಕೆಲ ಸಮುದಾಯಗಳು ಎಸಗಿದ ಕ್ರೌರ್ಯಕ್ಕೆ ಮುಂದೊಂದು ದಿನ ಉತ್ತರಿಸಬೇಕಾಗುತ್ತದೆ. ಮತ್ತೊಂದು ಪೀಳಿಗೆ ಕುಲುಮೆಯಲ್ಲಿ ಬೇಯಬೇಕಾಗುತ್ತದೆ. ಪ್ರೋಗ್ರೆಸಿವ್ ಹಿಸ್ಟರಿಯ ನಿಯಮ ಮತ್ತು ಕಟುವಾಸ್ತವ ಇದೊಂದೇ ಅನ್ನಿಸುತ್ತದೆ.

ಹರೀಶ್ ಗಂಗಾಧರ್
ಲೇಖಕ, ಪ್ರಾಧ್ಯಾಪಕ
Nice one 🤝🙏
Geluvina kushi ya jothege, sothavara dukkhadallu sahabhagi yagona.
Tumba tilkondidira sir
Channagi bardidira
Sir ji, Nimma vivarane tumba chennagide .