ಹಿಂದೂ ಜನಜಾಗೃತಿ ಸಮಿತಿ ಎಂಬ ಬಲಪಂಥೀಯ ಸಂಘಟನೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಮತ್ತು ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಆರೋಪಿಗಳನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸುವ ವಕೀಲರನ್ನು ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್ ಸನ್ಮಾನಿಸಿದ ಬೆಳವಣಿಗೆ ನಡೆದಿದೆ.
ವಿವಾದಾತ್ಮಕ ಬಿಜೆಪಿಯ ಶಾಸಕ ರಾಜಾ ಸಿಂಗ್, ಹೈದರಾಬಾದ್‌ನಲ್ಲಿ 101 ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇದರಲ್ಲಿ 18 ಕೋಮುವಾದಕ್ಕೆ ಪ್ರಚೋದನೆ ಪ್ರಕರಣಗಳು ಕೂಡ ಒಳಗೊಂಡಿದೆ. ಜೂನ್ 24 ಮತ್ತು 30 ರ ನಡುವೆ ಗೋವಾದಲ್ಲಿ ನಡೆದ ವೈಶ್ವಿಕ್ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ನಾಲ್ವರು ವಕೀಲರನ್ನು ರಾಜಾ ಸಿಂಗ್ ಸನ್ಮಾನಿಸಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಪ್ರತಿನಿಧಿಸುತ್ತಿರುವ ಪಿ ಕೃಷ್ಣಮೂರ್ತಿ, ಉಮಾಶಂಕರ್ ಮೇಗುಂಡಿ, ದಿವ್ಯಾ ಮೇಗುಂಡಿ ಮತ್ತು ಅವಿನಾಶ ಮಸೂತಿ ಅವರನ್ನು ಅವರು ಸನ್ಮಾನಿಸಿದ್ದಾರೆ.
Advocates representing Hindus in the Gauri Lankesh and Prof Kalburgi murder case felicitated by @TigerRajaSingh in the Vaishvik Hindu Rashtra Mahotsav
Read More : https://t.co/sCoCzM9Zzr#VHRMGoa_Success #Hindu_Legal_Force pic.twitter.com/Vcn5qndpeK
— Sanatan Prabhat (@SanatanPrabhat) July 1, 2024
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಸೆಪ್ಟೆಂಬರ್ 5, 2017 ರಂದು ಬೆಂಗಳೂರಿನ ಆಕೆಯ ಮನೆಯ ಹೊರಗೆ ಹತ್ಯೆ ಮಾಡಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಹಿಂದೂ ಜನಜಾಗೃತಿ ಸಮಿತಿಯ ಮಾಜಿ ಮುಖಂಡ ಅಮೋಲ್ ಕಾಳೆ ಅವರು ಗೌರಿ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಗೌರಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡವು 18 ಮಂದಿ ಭಾಗಿಯಾಗಿರುವುದನ್ನು ಪತ್ತೆ ಹಚ್ಚಿದೆ.
ಶಾಸಕ ರಾಜಾಸಿಂಗ್ ವಕೀಲರನ್ನು ಸನ್ಮಾನಿಸುತ್ತಿರುವ ಫೋಟೋವನ್ನು ಖುದ್ದು ಹಿಂದೂ ಜನಜಾಗೃತಿ ಸಮಿತಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.
ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆಯ ಆರೋಪಿಗಳನ್ನು ಪ್ರತಿನಿಧಿಸುತ್ತಿರುವ ವಕೀಲರಾದ ಪ್ರಕಾಶ್ ಸಾಲ್ಸಿಂಕರ್, ಘನಶ್ಯಾಮ್ ಉಪಾಧ್ಯಾಯ, ಮೃಣಾಲ್ ವ್ಯಾವಹರೆ ಸಾಖರೆ ಮತ್ತು ಸ್ಮಿತಾ ದೇಸಾಯಿ ಅವರನ್ನು ರಾಜಾ ಸಿಂಗ್ ಸನ್ಮಾನಿಸಿದ್ದಾರೆ.
ದಾಭೋಲ್ಕರ್ ಅವರನ್ನು 2013ರ ಆಗಸ್ಟ್ 13ರಂದು ಪುಣೆಯ ಓಂಕಾರೇಶ್ವರ ದೇವಸ್ಥಾನದ ಬಳಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಪುಣೆಯ ವಿಶೇಷ ನ್ಯಾಯಾಲಯವು ಮೇ 2024 ರಲ್ಲಿ ದಾಭೋಲ್ಕರ್ ಅವರನ್ನು ಹತ್ಯೆಗೈದ ಸಚಿನ್ ಅಂದುರೆ ಮತ್ತು ಶರದ್ ಕಲಾಸ್ಕರ್ ದೋಷಿ ಎಂದು ತೀರ್ಪು ನೀಡಿದೆ. ಗೌರಿ ಹತ್ಯೆಯ ಆರೋಪಿಗಳಲ್ಲಿ ಕಲಾಸ್ಕರ್ ಕೂಡ ಒಬ್ಬನಾಗಿದ್ದಾನೆ.
ಇದನ್ನು ಓದಿದ್ದೀರಾ? ಮೊದಲ ಭಾಷಣದಲ್ಲೇ ಶಿವ ದೇವರ ಫೋಟೋ ತೋರಿಸಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ
ಹಿಂದೂ ಜನಜಾಗೃತಿ ಸಮಿತಿಯ ವೆಬ್‌ಸೈಟ್ ಪ್ರಕಾರ, ಜೂನ್ 24 ಮತ್ತು 30ರ ನಡುವೆ ಗೋವಾದಲ್ಲಿ ನಡೆದ ವೈಶ್ವಿಕ್ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ದೇಶಾದ್ಯಂತದ ಸುಮಾರು 800 ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದೆ.
