ವಿದ್ಯುನ್ಮಾನ ಮತಯಂತ್ರದ ಬಗ್ಗೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ಸಮಾಜವಾದಿ ಪಕ್ಷದ ಸಂಸ್ಥಾಪಕ ಪುನಃ ಅನುಮಾನ ವ್ಯಕ್ತಪಡಿಸಿದ್ದು, ಉತ್ತರ ಪ್ರದೇಶದಲ್ಲಿ ನಾವು 80 ಲೋಕಸಭಾ ಸ್ಥಾನಗಳನ್ನು ಗೆದ್ದರೂ ಇವಿಎಂ ಮೇಲೆ ನಮ್ಮ ಅನುಮಾನ ಬದಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
“ನಾನು ನಿನ್ನೆಯೂ ಇವಿಎಂಅನ್ನು ನಂಬಲಿಲ್ಲ, ಇವತ್ತು ನಂಬುವುದಿಲ್ಲ. ಉತ್ತರ ಪ್ರದೇಶದಲ್ಲಿ ನಾವು 80 ಸ್ಥಾನಗಳನ್ನು ಗೆದ್ದರೂ ಇವಿಎಂಗಳನ್ನು ನಂಬುವುದಿಲ್ಲ. ಇದು ಯಾವಾಗಲು ಸಮಸ್ಯೆಯಾಗಿರುತ್ತದೆ. ನಾವು ಇದರ ಬಗ್ಗೆ ದೃಢವಾಗಿದ್ದು, ನಾವು ಇವಿಎಂಗಳ ಮೂಲಕ ಗೆದ್ದರೂ ಅಧಿಕಾರಕ್ಕೆ ಬಂದರೆ ನಾವು ಅದನ್ನು ತೆಗೆದುಹಾಕುತ್ತೇವೆ” ಎಂದು ಅಖಿಲೇಶ್ ಯಾದವ್ ತಿಳಿಸಿದರು.
“ಇವಿಎಂಗಳನ್ನು ಬಳಸುವುದನ್ನು ನಿಲ್ಲಿಸುವವರೆಗೂ ಈ ಸಮಸ್ಯೆ ಬಗೆಹರಿಯುವುದಿಲ್ಲ. ನಾವು ನಿಲ್ಲಿಸಬೇಕೆಂದು ನಿರ್ಧರಿಸಿದ್ದೇವೆ” ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ವಂದನಾ ನಿರ್ಣಯದ ಭಾಷಣದ ನಂತರ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
2024ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ವಿಪಕ್ಷಗಳು ಇವಿಎಂಗಳ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದು, ಮತಯಂತ್ರವನ್ನು ಹ್ಯಾಕ್ ಮಾಡಬಹುದು ಅಥವಾ ಮತಗಳನ್ನು ತಿರುಚಬಹುದು ಎಂದು ತಿಳಿಸಿದ್ದವು. ಕೋರ್ಟ್‌ನಲ್ಲೂ ಈ ಬಗ್ಗೆ ಅರ್ಜಿ ಸಲ್ಲಿಸಲಾಗಿದ್ದು, ಆದರೆ ಸೂಕ್ತ ಆಧಾರವಿಲ್ಲದ ಕಾರಣ ಸುಪ್ರೀಂ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೊದಲ ಭಾಷಣದಲ್ಲೇ ಬಿಜೆಪಿಗರ ಬೆವರಿಳಿಸಿದ ರಾಹುಲ್ ಮತ್ತು ಮಹುವಾ
ಅಖಿಲೇಶ್ ಯಾದವ್ 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೂಡ ಇದೇ ರೀತಿಯ ಪ್ರಶ್ನೆಗಳನ್ನು ಎತ್ತಿದ್ದರು.
ಲೋಕಸಭೆ ಚುನಾವಣೆ ನಡೆಯುವ ಸಂದರ್ಭ ಬಿಜೆಪಿ ವಿರುದ್ಧ ಆರೋಪ ಮಾಡಿದ್ದ ಅಖಿಲೇಶ್ ಯಾದವ್, ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸಿದ್ದ ವಾರಣಾಸಿ ಕ್ಷೇತ್ರದಲ್ಲಿ ಕೆಲವು ನಿರ್ದಿಷ್ಟ ಉಲ್ಲೇಖಗಳೊಂದಿಗೆ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ವಾಗ್ದಾಳಿ ನಡೆಸಿದ್ದರು.
2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ 37 ಸ್ಥಾನ ಗಳಿಸಿ ಉತ್ತಮ ಸಾಧನೆ ಮಾಡಿದ್ದರೆ, ಬಿಜೆಪಿ 32 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಎಸ್‌ಪಿ ಮೈತ್ರಿಕೂಟದ ಮಿತ್ರಪಕ್ಷ ಕಾಂಗ್ರೆಸ್ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
