‘ಎಕ್ಸ್’ಗೆ(ಹಿಂದಿನ ಟ್ವಿಟರ್) ಪರ್ಯಾಯ ಎಂದೇ ಹೇಳಲಾಗುತ್ತಿದ್ದ ಭಾರತದ ಸಾಮಾಜಿಕ ಮಾಧ್ಯಮ ಆಪ್ ‘ಕೂ’ ಶೀಘ್ರದಲ್ಲೇ ಸ್ಥಗಿತಗೊಳ್ಳಲಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಆನ್‌ಲೈನ್ ಮಾಧ್ಯಮ ಡೈಲಿಹಂಟ್‌ನೊಂದಿಗೆ ಸ್ವಾಧೀನ ಪ್ರಕ್ರಿಯೆ ಮಾತುಕತೆಗಳು ವಿಫಲವಾದ ನಂತರ 4 ವರ್ಷಗಳ ಹಿಂದೆ ಆರಂಭಗೊಂಡಿದ್ದ ‘ಕೂ’ ಆಪ್ ಸ್ಥಗಿತಕೊಳ್ಳುತ್ತಿದೆ.
‘ಕೂ’ ಆಪ್ ಆರಂಭವಾದಾಗ ರಾಜಕಾರಣಿಗಳು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಪ್ರಚಾರ ನಡೆಸಿದ್ದರು. ಕಂಪನಿಯು ನೈಜೀರಿಯಾ ಹಾಗೂ ಬ್ರೆಜಿಲ್‌ನಲ್ಲಿ ವಿಸ್ತರಿಸಿ ಹೂಡಿಕೆದಾರರ ಗಮನವನ್ನು ಸೆಳೆದಿತ್ತು.
2020ರಲ್ಲಿ ಉದ್ಯಮಿಗಳಾದ ಅಮ್ರಮೇಯ ರಾಧಾಕೃಷ್ಣ ಹಾಗೂ ಮಾಯಾಂಕ್ ಬಿದ್ವಾತ್ಕಾ ಎಂಬುವವರು 10 ಭಾಷೆಗಳಲ್ಲಿ ಲಭ್ಯವಾಗುವಂತೆ ‘ಕೂ’ ಆಪ್‌ಅನ್ನು ಅಭಿವೃದ್ಧಿಪಡಿಸಿದ್ದರು. ಹಳದಿ ಬಣ್ಣದ ಹಕ್ಕಿಯ ಲೋಗೊದೊಂದಿಗೆ ಆರಂಭವಾಗಿದ್ದ ಇದು ಉದ್ಘಾಟನಾ ಸಂದರ್ಭದಲ್ಲಿ ಸುಮಾರು 6 ಕೋಟಿ ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೊದಲ ಭಾಷಣದಲ್ಲೇ ಬಿಜೆಪಿಗರ ಬೆವರಿಳಿಸಿದ ರಾಹುಲ್ ಮತ್ತು ಮಹುವಾ
ಈ ನಡುವೆ ಆಪ್ 2021ರಲ್ಲಿ ಅಮೆರಿಕದ ಟೈಗರ್ ಗ್ಲೋಬಲ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು 31 ಮಿಲಿಯನ್ ಡಾಲರ್ ಹೂಡಿಕೆಯನ್ನು ಹೆಚ್ಚಿಸಿತ್ತು. ಇದು 2022ರ ವೇಳೆಗೆ 57 ಮಿಲಿಯನ್ ಡಾಲರ್‌ಗೆ ಏರಿಕೆಗೊಂಡು 90 ಲಕ್ಷ ಸಕ್ರಿಯ ಚಂದಾದಾರರಿದ್ದರು.
ಆದರೆ ನಂತರದ ದಿನಗಳಲ್ಲಿ ಕಂಪನಿ ಬೆಳವಣಿಗೆ ಸಾಧಿಸುವಲ್ಲಿ ವಿಫಲವಾಯಿತು. ಹೂಡಿಕೆ ಹೆಚ್ಚಿಸಲು ವಿಫಲವಾಗುವುದರೊಂದಿಗೆ ಕಾರ್ಮಿಕರ ಸಂಖ್ಯೆಯನ್ನು ಕಡಿತಗೊಳಿಸಲಾಯಿತು. ‘ಕೂ’ ಸಂಸ್ಥಾಪಕರು ತಮ್ಮ ಸ್ವಂತ ಹಣದಿಂದ ಉದ್ಯೋಗಿಗಳಿಗೆ ವೇತನವನ್ನು ನೀಡಬೇಕಾದ ಪರಿಸ್ಥಿತಿ ಉಂಟಾಯಿತು. ಅಂತಿಮವಾಗಿ ಡೈಲಿಹಂಟ್‌ನೊಂದಿಗೆ ಸ್ವಾಧೀನ ಪ್ರಕ್ರಿಯೆ ವಿಫಲವಾದ ನಂತರ ಕಂಪನಿ ಮುಚ್ಚುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.
