ಬೀದರ್ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ಪ್ರದೀಪ ಗುಂಟಿ ಅವರನ್ನು ನೇಮಿಸಿ ಮಂಗಳವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಮೊದಲಿನ ಎಸ್ಪಿ ಚನ್ನಬಸವಣ್ಣ ಎಸ್.ಎಲ್. ಅವರನ್ನು ಬೆಂಗಳೂರು ಪ್ರಧಾನ ಕಚೇರಿ ಆಡಳಿತ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರಿನ ಕಾರಾಗೃಹ ವಿಭಾಗದಲ್ಲಿದ್ದ ಪ್ರದೀಪ ಗುಂಟಿ ಅವರನ್ನು ಬೀದರ್ ಎಸ್ಪಿಯಾಗಿ ನೇಮಿಸಲಾಗಿದೆ.
ಬುಧವಾರ ನೂತನ ಎಸ್ಪಿ ಪ್ರದೀಪ ಗುಂಟಿ ಅವರಿಗೆ ಅಧಿಕಾರ ಹಸ್ತಾಂತರಿಸಿದ ಫೋಟೊವನ್ನು ಬೀದರ್ ಎಸ್ಪಿ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಚನ್ನಬಸವಣ್ಣ ಎಸ್.ಎಲ್. ಅವರು ʼಸರ್ಕಾರದಿಂದ ನನಗೆ ವರ್ಗಾವಣೆಯಾಗಿರುವ ಅಧಿಕೃತ ಆದೇಶ ಬಂದಿದೆ, ಕಳೆದ 1 ವರ್ಷ 5 ತಿಂಗಳು ನನ್ನ ಎಲ್ಲ ಸಹೋದ್ಯೋಗಿಗಳೊಂದಿಗೆ ತಮ್ಮ ಸೇವೆ ಮಾಡುವ ಸೌಭಾಗ್ಯ ದೊರೆತದ್ದು ನನ್ನ ವೃತ್ತಿ ಮತ್ತು ವೈಯಕ್ತಿಕ ಬದುಕಿನ ಅವಿಸ್ಮರಣೀಯ ಕ್ಷಣಗಳೆಂದು ಭಾವಿಸಿಕೊಂಡಿದ್ದೇನೆ. ಬೀದರ್ ಭಾರತದಲ್ಲಿ ಇರುವುದಷ್ಟೇ ಅಲ್ಲದೆ ಇಡೀ ಭಾರತವೇ ಬೀದರ್‌ನಲ್ಲಿದೆ ಎನ್ನುವುದು ಸೇವಾ ಅವಧಿಯಲ್ಲಿ ನನ್ನ ಅನುಭವಕ್ಕೆ ಬಂದಿದೆ. ಈ ಭ್ರಾತೃತ್ವ ಹೀಗೆ ಮುಂದುವರೆಯಲಿʼ ಎಂದು ಹಾರೈಸಿ ಜಿಲ್ಲೆಯ ಜನತೆಗೆ ಧನ್ಯವಾದ ತಿಳಿಸಿದ್ದಾರೆ.
ವರ್ಗಾವಣೆ ಆದೇಶ ರದ್ದತಿಗೆ ಆಗ್ರಹ :
ಒಂದುವರೆ ವರ್ಷಗಳ ಅವಧಿಯಲ್ಲಿ ಎಸ್ಪಿಯಾಗಿದ್ದ ಚನ್ನಬಸವಣ್ಣ ಎಸ್. ಎಲ್ ಅವರು ಜಿಲ್ಲೆ ಸಮಗ್ರ ಅಪರಾಧ ಮುಕ್ತ ಮಾಡುವ ನಿಟ್ಟಿನಲ್ಲಿ ಇಲಾಖೆಯಲ್ಲಿ ಹತ್ತಾರು ಹೊಸ ಯೋಜನೆಗಳನ್ನು ರೂಪಿಸಿ ಮಹತ್ವದ ಕ್ರಮಗಳನ್ನು ಕೈಗೊಂಡಿದ್ದಾರೆ. ಇಂಥ ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿಯನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಿರುವುದು ಬೇಸರ ಮೂಡಿಸಿದೆ. ಕೂಡಲೇ ವರ್ಗಾವಣೆ ಆದೇಶ ರದ್ದುಗೊಳಿಸುವಂತೆ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡು ಆಗ್ರಹಿಸುತ್ತಿದ್ದಾರೆ.
ಮಂಗಳವಾರ ವರ್ಗಾವಣೆ ಆದೇಶ ಬಂದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅನೇಕ ಸಾಮಾಜಿಕ ಹೋರಾಟಗಾರರು, ಪ್ರಜ್ಞಾವಂತರು ವರ್ಗಾವಣೆ ರದ್ದುಗೊಳಿಸಲು ಒತ್ತಾಯಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ವಿನಯ ಮಾಳಗೆ ಅವರು ಫೇಸ್‌ಬುಕ್ ಖಾತೆಯಲ್ಲಿ ʼನಿಮ್ಮ ವರ್ಗಾವಣೆ ಸುದ್ದಿ ಜಿಲ್ಲೆಯ ಪ್ರಜ್ಞಾವಂತರ ಪಾಲಿಗೆ ಇದು ನಿರಾಶೆಯ ಭಾವನೆ ಉಂಟು ಮಾಡಿದೆ. ಜಿಲ್ಲೆಯ ಕಾನೂನು ಸುವ್ಯವಸ್ಥೆ ವಿಭಾಗದಲ್ಲಿ ಬದಲಾವಣೆ ಬೀಸುತ್ತಿರುವ ಸಮಯದಲ್ಲಿ ಈ ವರ್ಗಾವಣೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮತ್ತು ಅಪರಾಧ ಮುಕ್ತ ಮಾಡುವ ಜಿಲ್ಲೆಯ ಗುರಿಯನ್ನು ಕುಸಿತಗೊಳಿಸುತ್ತದೆ. ನಿಮ್ಮ ಆಡಳಿತ ಕಾಲಾವಧಿಯಲ್ಲಿ ಅಕ್ರಮ ದಂಧೆಗಳು ಬಹುತೇಕ ಹತೋಟಿಗೆ ಬಂದಿತು, ಆದರೆ ನಿಮ್ಮ ವರ್ಗಾವಣೆಯಿಂದ ಅಕ್ರಮ ದಂಧೆಕೋರರಿಗೆ ಮತ್ತೆ ಖುಷಿಪಡುವಂತಾಗಿದೆʼ ಎಂದು ಹೇಳಿದರು.