ಶಾಸಕ ಅಶೋಕ ಪಟ್ಟಣ ಅವರು ತಮ್ಮ ತಂದೆ ತಾಯಿಗಳಂತೆ ಸಮಾಜ ಸೇವೆಯನ್ನು ಮುಂದೆವರೆಸಿದ್ದು, ಮುಂದಿನ ದಿನಗಳಲ್ಲಿ ಅವರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ಸಿಗಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಾಸಕ ಅಶೋಕ್ ಪಟ್ಟಣವರ ಹಿರಿತನವನ್ನು ಗಮನಿಸಿ ಸಚಿವರನ್ನಾಗಿ ಮಾಡಬೇಕು ಎಂದು ಡವಳೇಶ್ವರ ಮಠದ ರೇಣುಕಾ ಶಿವಯೋಗಿ ಶಿವಾಚಾರ್ಯ ಸ್ವಾಮಿ ಒತ್ತಾಯಿಸಿದರು.
ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ವಿದ್ಯಾಚೇತನ ಆವರಣದಲ್ಲಿ ಕ್ಷೇತ್ರದ ಮಾದರಿ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಉಚಿತವಾಗಿ ಬುಕ್ ಮತ್ತು ಬ್ಯಾಗ್ ವಿತರಣಾ ಕಾರ್ಯಕ್ರಮಕ್ಕೆ ಶಾಸಕ ಅಶೋಕ ಪಟ್ಟಣವರು ಚಾಲನೆ ನೀಡಿದರು. ಈ ವೇಳೆ ಡವಳೇಶ್ವರ ಮಠದ ರೇಣುಕಾ ಶಿವಯೋಗಿ ಶಿವಾಚಾರ್ಯ ಸ್ವಾಮಿ ಮಾತನಾಡಿದರು.
ರಾಮದುರ್ಗ ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ ಪಟ್ಟಣವರು 3 ಭಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಹಾಗೂ ಸಿದ್ದರಾಮಯ್ಯನವರ ಮೊದಲ ಮತ್ತು ಈಗಿನ ಸರ್ಕಾರದಲ್ಲಿ ಮುಖ್ಯ ಸಚೇತಕರಾಗಿದ್ದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿದ್ದಾರೆ.
ಚುನಾವಣೆ ಪೂರ್ವದಲ್ಲಿ ವಿದ್ಯಾರ್ಥಿಗಳಿಗೆ ನೀಡಿದ ಭರವಸೆಯಂತೆ ರಾಮದುರ್ಗ ತಾಲೂಕಿನ ಎಲ್ಲ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಬುಕ್ ಮತ್ತು ಬ್ಯಾಗ್ ವಿತರಿಸಲು ಪ್ರಾರಂಭಿಸಿದ್ದಾರೆ. ಹಿಂದಿನ ಅವಧಿಯಲ್ಲಿ ಶಾಸಕರಾದ ಸಂದರ್ಭದಲ್ಲಿಯೂ ತಾಲೂಕಿನ ವಿದ್ಯಾರ್ಥಿಗಳಿಗೆ ಬುಕ್ ಮತ್ತು ಬ್ಯಾಗ್ ನೀಡಿದ್ದರು.
ಶಾಸಕ ಅಶೋಕ ಪಟ್ಟಣವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ರಾಮದುರ್ಗ ತಾಲೂಕಿನ ಮಾಧ್ಯಮಿಕ, ಪ್ರಾಥಮಿಕ, ಕಾಲೇಜು ವಿದ್ಯಾರ್ಥಿಗಳಿಗೆ ಸೇರಿದಂತೆ 65 ಸಾವಿರ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಸುಮಾರು 4 ಲಕ್ಷ ನೋಟಬುಕ್ ವಿತರಿಸಲಾಗುವುದು. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಪ್ರೌಢಶಾಲೆ, ಪ್ರಾಥಮಿಕ ಶಾಲೆಗಳನ್ನು ತೆರೆಯಲು ತಿರ್ಮಾನಿಸಿದ್ದೇನೆ. ತಾಲೂಕಿನಲ್ಲಿ ಉತ್ತಮ ಕ್ರೀಡಾಂಗಣಕ್ಕೆ ಜಾಗ ಗುರುತಿಸಿ ಕ್ರೀಡಾಂಗಣ ನಿರ್ಮಿಸಲಾಗುವುದು” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಉಪ್ಪಾರಕೇರಿ ಬಟ್ಟೆ ಮಾರ್ಕೆಟ್ ಬೆಂಕಿ ಅವಘಡ; ವ್ಯಾಪಾರಸ್ಥರಿಗೆ ಶೀಘ್ರ ನಷ್ಟ ಪರಿಹಾರ ನೀಡಲು ಆಗ್ರಹ
ತಾ ಪಂ ಇಒ ಪ್ರವೀಣ್‌ಕುಮಾರ ಸಾಲಿ, ಬಿಇಒ ಆರ್ ಟಿ ಬಳಿಗಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ ಬಿ ರಂಗನಗೌಡರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಮ್ ಎಸ್ ನಿಜಗುಲಿ ಮಾತನಾಡಿದರು.
ತಹಶೀಲ್ದಾರ್ ಪ್ರಕಾಶ್ ಹೊಳೆಪ್ಪಗೋಳ, ಡಿವೈಎಸ್‌ಪಿ ಎಂ ಪಾಂಡುರಂಗ ಯೋಗ್ಯ, ಪ್ರದೀಪ್ ಪಟ್ಟಣ, ರಾಯಪ್ಪ ಕತ್ತಿ, ಸೋಮಶೇಖರ್, ಸಿದ್ಲಿಂಗಪ್ಪನವರ ಸೇರಿದಂತೆ ಪುರಸಭೆ ಸದಸ್ಯರು ಶಾಲಾ ಶಿಕ್ಷಕರು, ಎಸ್‌ಡಿಎಂಸಿ ಪದಾಧಿಕಾರಿಗಳು ಇದ್ದರು.
