ಕರ್ನಾಟಕದ ಮಲೆನಾಡು-ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ನದಿ, ತೊರೆಗಳು ತುಂಬಿ ಹರಿಯುತ್ತಿವೆ. ಜಲಪಾತಗಳು ಮಳೆ ನೀರಿನಿಂದ ಭೋರ್ಗರೆಯುತ್ತಿವೆ. ಈ ಭಾಗದ ಹಲವಾರು ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸಲಾಗಿದೆ.
ಮಲೆನಾಡು ಭಾಗವಾದ ಚಿಕ್ಕಮಗಳೂರು, ಕೊಡಗು ಜಿಲ್ಲೆಯಲ್ಲಿ ಧಾರಕಾರ ಮಳೆ ಸುರಿದಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅಬ್ಬರದಿಂದ ತುಂಗಾ ನದಿಗೆ ನೀರು ಹರಿದು ಬರುತ್ತಿದ್ದು, ನದಿ ತುಂಬಿ ಹರಿಯುತ್ತಿದೆ. ನದಿ ದಂಡೆಯ ಕೃಷಿ ಭೂಮಿ, ತೋಟಗಳು ಜಲಾವೃತವಾಗಿವೆ. ಗಾಜನೂರು ಬಳಿಯ ತುಂಗಾ ಜಲಾಶಯ ಭರ್ತಿಯಾಗಿದ್ದು, ಜಲಾಶಯದ 22 ಕ್ರಸ್ಟ್‌ಗೇಟ್‌ಗಳ ಪೈಕಿ 14 ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲಾಗುತ್ತಿದೆ.
ಮಳೆಯ ಅಬ್ಬರಕ್ಕೆ ಜಿಲ್ಲೆಯ ಕೊಟ್ಟಿಗೆಹಾರ ಬಳಿಯ ಚಾರ್ಮಾಡಿ ಘಾಟ್‌ನಲ್ಲಿ ಇತ್ತೀಚೆಗಷ್ಟೇ ಕಾಮಗಾರಿ ನಡೆದಿದ್ದ ರಸ್ತೆ ಬಿರುಕು ಬಿಟ್ಟಿದೆ. ರಸ್ತೆ ಕುಸಿಯುವ ಅಪಾಯ ಎದುರಾಗಿದೆ. ದಕ್ಷಿಣ ಕನ್ನಡ-ಚಿಕ್ಕಮಗಳೂರು ನಡುವಿನ ಸಂಪರ್ಕಕೊಂಡಿ ಕಳಚಿದಂತಾಗಿದೆ.
ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಕೆಆರ್‌ಎಸ್ ಜಲಾಶಯಕ್ಕೆ 12 ಅಡಿ ನೀರು ಬಂದಿದೆ. ವಾರದ ಹಿಂದೆ, ಜಲಾಶಯದಲ್ಲಿ 87 ಅಡಿಯಿದ್ದ ನೀರಿನ ಮಟ್ಟ 99.30 ಅಡಿಗೆ ಏರಿಕೆಯಾಗಿದೆ.
ಇನ್ನು, ಕರಾವಳಿ ಪ್ರದೇಶದಲ್ಲಿಯೂ ಮಳೆ ಅಬ್ಬರಿಸುತ್ತಿದ್ದು, ಗಾಳಿಯೂ ವೇಗವಾಗಿ ಬೀಸುತ್ತಿದೆ. ಕುಂದಾಪುರ ತಾಲೂಕಿನ ರಟ್ಟಾಡಿ ಗ್ರಾಮದಲ್ಲಿ ಸುಂಟರಗಾಳಿ ಎದ್ದಿದ್ದು, ಮರಗಳು ಉರುಳಿ ಬಿದ್ದಿವೆ. ಮನೆಗಳಿಗೂ ಹಾನಿಯಾಗಿದೆ. ಗ್ರಾಮದ ಜನರು ಆತಂಕಗೊಂಡಿದ್ದಾರೆ. ಗ್ರಾಮಕ್ಕೆ ಅಮಾವಾಸ್ಯೆ ಬೈಲು ಗ್ರಾಮ ಪಂಚಾಯತಿ ಪಿಡಿಒ ಭೇಟಿ ನೀಡಿ ಹಾನಿ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ ಇರುವ ಕಮಲಶಿಲೆಯಲ್ಲಿಯೂ ಹೆಚ್ಚಿನ ಮಳೆಯಾಗಿದ್ದು, ಕುಬ್ಜ ನದಿ ತುಂಬಿ ಹರಿಯುತ್ತಿದೆ. ದೇವಾಲಯಕ್ಕೂ ನೀರು ನುಗ್ಗಿದೆ.
ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನಲ್ಲಿ ಗಂಗಾವಳಿ ನದಿ ಕೂಡ ತುಂಬಿ ಹರಿಯುತ್ತಿದೆ. ತಾಲೂಕಿನ ಶಿರಲೆ ಜಲಪಾತ, ಕಾನೂರು ಜಲಪಾತ, ಕುಳಿ ಮಾಗೋಡು ಜಲಪಾತಗಳಿಗೆ ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಕಣಕುಂಬಿ, ಜಾಂಬೋಟಿ, ನಾಗರಗಾಳಿ, ಭೀಮಗಡ ಹಾಗೂ ಲೋಂಡಾ ಅರಣ್ಯ ಪ್ರದೇಶದಲ್ಲಿ ಧಾರವಾರವಾಗಿ ಮಳೆ ಸುರಿದಿದೆ ಮಲಪ್ರಭಾ, ಮಹಾದಾಯಿ ಮತ್ತು ಪಾಂಡರಿ ನದಿಗಳು ಉಕ್ಕಿ ಹರಿಯುತ್ತಿವೆ.
ರಾಜ್ಯದಲ್ಲಿ ಗುರುವಾರವೂ ಭಾರೀ ಮಳೆಯಾಗಲಿದ್ದು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.