ಹಾಥರಸ್ ಸತ್ಸಂಗದಲ್ಲಿ ಉಂಟಾದ ಕಾಲ್ತುಳಿತ ದುರಂತದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಸತ್ಸಂಗ ಹಮ್ಮಿಕೊಳ್ಳಲಾದ ಆಯೋಜನೆಯ ಸದಸ್ಯರಾಗಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ನಾರಾಯಣ್ ಸಾಕಾರ್ ಹರಿ ಎಂಬಾತ ಹಮ್ಮಿಕೊಂಡಿದ್ದ ಸತ್ಸಂಗದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಬಹುತೇಕ ಮಹಿಳೆಯರನ್ನು ಒಳಗೊಂಡು ಒಟ್ಟು 121 ಮಂದಿ ಮೃತಪಟ್ಟು, 31 ಮಂದಿ ಗಾಯಗೊಂಡಿದ್ದರು.
ಅಲಿಘಢ ಐಜಿ ಶಲಭ್ ಮಾತೂರ್ ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಒಳಗೊಂಡು 6 ಮಂದಿಯನ್ನು ಬಂಧಿಸಲಾಗಿದೆ. ಎಲ್ಲ ಸದಸ್ಯರು ಸಂಘಟನಾ ಸಮಿತಿ ಹಾಗೂ ಸೇವಾದಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿಸಿದ್ದಾರೆ.
ಬಂಧಿತ ಆರೋಪಿಗಳು ಗುಂಪಿನ ನಿರ್ವಹಣೆಯ ಸ್ವಯಂಸೇವಾ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು. ಅವರೆಲ್ಲರೂ ಸ್ವತಂತ್ರವಾಗಿ ಗುಂಪು ನಿಯಂತ್ರವನ್ನು ನಿಭಾಯಿಸುತ್ತಿದ್ದರು ಹಾಗೂ ಈ ಕಾರ್ಯ ನಿರ್ವಹಿಸಲು ಸರ್ಕಾರಿ ಅಧಿಕಾರಿಗಳಿಗೆ ಅನುಮತಿಸಿರಲಿಲ್ಲ ಎಂದು ಶಲಭ್ ಮಾತೂರ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮತ್ತೆ ಮಳೆ ಹೊಯ್ಯುತಿದೆ, ಡೆಂಘೀ ಹರಡುತಿದೆ- ಆರೋಗ್ಯ ಇಲಾಖೆ ಏನು ಮಾಡುತ್ತಿದೆ?
ಈ ನಡುವೆ ಮುಖ್ಯ ಸೇವದಾರನಾದ ದೇವ್ ಪ್ರಕಾಶ್ ಮಧುಕರ್ ಎಂಬಾತನನ್ನು ಮುಖ್ಯ ಆರೋಪಿ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ. ಈತನ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಲಾಗಿದ್ದು, ಮಧುಕರ್ ಬಗ್ಗೆ ಸುಳಿವು ಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಮಾತೂರ್ ತಿಳಿಸಿದ್ದಾರೆ.
ಅಗತ್ಯ ಬಿದ್ದರೆ ‘ಬೋಲೆ ಬಾಬಾ ನಾರಾಯಣ್ ಸಾಕಾರ್’ ನನ್ನು ಕೂಡ ಅಧಿಕಾರಿಗಳು ಪ್ರಶ್ನಿಸಲಿದ್ದಾರೆ. ಆತನ ಹೆಸರು ಎಫ್‌ಐಆರ್‌ನಲ್ಲಿ ಇಲ್ಲದಿದ್ದರೂ ತನಿಖೆ ತಡೆಯುತ್ತಿದೆ. ಪೊಲೀಸರು ಬೋಲೆ ಬಾಬಾನ ಹಿನ್ನೆಲೆಯ ಬಗ್ಗೆ ಹೆಚ್ಚಿನ ವಿವರಗಳು ಹಾಗೂ ಅಪರಾಧ ಹಿನ್ನೆಲೆಯ ಬಗ್ಗೆ ಕೂಡ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಸತ್ಸಂಗದಲ್ಲಿ 2.50 ಲಕ್ಷ ಮಂದಿ ಭಾಗಿಯಾಗಿದ್ದು, ಜಿಲ್ಲಾಡಳಿತ 80 ಸಾವಿರ ಜನರಿಗಷ್ಟೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಿತ್ತು.
