ರಾಜ್ಯದಲ್ಲಿ ಮಳೆ ಹೆಚ್ಚಾಗುತ್ತಿದ್ದಂತೆಯೇ ಡೆಂಘೀ ಜ್ವರದಿಂದ ಬಳಲುತ್ತಿರುವವರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು, ಸಚಿವರು, ತಮಗೆ ಸಿಕ್ಕ ಅಧಿಕಾರವೆಂಬ ಅವಕಾಶವನ್ನು ನಾಡಿನ ಜನತೆಯ ಒಳಿತಿಗಾಗಿ ವಿನಿಯೋಗಿಸಿದರೆ; ಜನ ಕೂಡ ಸ್ವಚ್ಛತೆ ಬಗ್ಗೆ ಅರಿತು ಆರೋಗ್ಯ ಕಾಪಾಡಿಕೊಳ್ಳುವ ಕಡೆ ಮುಂಜಾಗೃತ ಕ್ರಮ ಕೈಗೊಂಡರೆ- ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗಬಹುದು.
‘ಡೆಂಘೀ ಪ್ರಕರಣಗಳ ಕುರಿತು ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಸರಕಾರಕ್ಕೆ ಮಾಹಿತಿ ನೀಡಬೇಕು. ಪ್ರಕರಣಗಳನ್ನು ನಿರ್ವಹಿಸುವಾಗ ಜವಾಬ್ದಾರಿಯಿಂದ ವರ್ತಿಸಬೇಕು. ಲಾಭ ಗಳಿಸುವ ಅವಕಾಶವನ್ನಾಗಿ ಮಾಡಿಕೊಳ್ಳಬಾರದು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಖಡಕ್ ಸಂದೇಶ ರವಾನಿಸಿದ್ದಾರೆ.
ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಮತ್ತು ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಆರೋಗ್ಯ ಇಲಾಖೆ ಅಧಿಕಾರಿಗಳು ಆ ತಕ್ಷಣವೇ ಡೆಂಘೀ ಪರೀಕ್ಷೆಗೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಗಳಿಗೆ ಹಾಗೂ ಪ್ರಯೋಗಾಲಯಗಳಿಗೆ ದರ ನಿಗದಿಪಡಿಸಿ ಆದೇಶ ಹೊರಡಿಸಿದ್ದಾರೆ. ಅಷ್ಟೇ ಅಲ್ಲ, ಅಧಿಕ ಹಣ ಪಡೆದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಕೆ ಕೂಡ ನೀಡಿದೆ.
ಆದರೆ ಖಾಸಗಿ ಆಸ್ಪತ್ರೆಗಳ ಮಾಲೀಕರು ಆರೋಗ್ಯ ಸಚಿವರ ಖಡಕ್ ಸಂದೇಶವನ್ನು ಪಾಲಿಸುವಂತಹ ಸ್ಥಿತಿಯಲ್ಲಿ ಇದ್ದಾರೆಯೇ? ಈ ಹಿಂದೆ ಸರ್ಕಾರ ನೀಡಿದ ಈ ರೀತಿಯ ಖಡಕ್ ಆದೇಶಗಳನ್ನು ಪಾಲಿಸಿದ ಉದಾಹರಣೆಗಳೇನಾದರೂ ಇದೆಯೇ? ಅವರ ಮೇಲೆ ನಿಗಾ ಇಡುವವರು ಯಾರು? ಇಲ್ಲಿಯವರೆಗೆ ಎಷ್ಟು ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ? ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆ.
ಇನ್ನು, ರೋಗ ಹರಡುತ್ತಿರುವ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಡೆಂಘೀ ನಿಯಂತ್ರಣಕ್ಕೆ ಪಾಲಿಕೆ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಶಿಕ್ಷಕರನ್ನು ಬಳಸಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ. ಸಚಿವರ ಸೂಚನೆಯನ್ನು ಎಷ್ಟು ಅಧಿಕಾರಿಗಳು ಪಾಲಿಸುತ್ತಾರೆಂಬುದೇ ಯಕ್ಷಪ್ರಶ್ನೆಯಾಗಿದೆ. ಸಚಿವರ ಸೂಚನೆ ಸಭೆಗಷ್ಟೇ ಸೀಮಿತವಾಗಿದೆ.

ಮಳೆಗಾಲ ಶುರುವಾಗುತ್ತಿದ್ದಂತೆ, ಹಳ್ಳ-ಕೊಳ್ಳಗಳಲ್ಲಿ, ಗುಂಡಿ-ಗಟಾರಗಳಲ್ಲಿ ನೀರು ನಿಲ್ಲುವುದು ಸಾಮಾನ್ಯ. ಇದು ಸೊಳ್ಳೆಗಳ ಸುಳಿದಾಟಕ್ಕೆ, ಆವಾಸಸ್ಥಾನಕ್ಕೆ ಯೋಗ್ಯವಾದ ಸ್ಥಳ. ಅದು ಸಹಜವಾಗಿಯೇ ಸೊಳ್ಳೆಗಳ ಸಂತತಿಗೂ ಸಹಕರಿಸುತ್ತದೆ. ಸೊಳ್ಳೆ ಕಡಿತದಿಂದ ಡೆಂಘೀ ರೋಗ ಬರುತ್ತದೆ. ಈಡಿಸ್ ಈಜಿಪ್ಟಿ ಹೆಣ್ಣು ಸೊಳ್ಳೆ ಕಡಿತದಿಂದ ಡೆಂಘೀ ವೈರಸ್ ಸೋಂಕು ಹರಡುತ್ತದೆ.
ಮಾರಕ ಸೋಂಕಿಗೆ ರಾಜ್ಯದ ನಾನಾ ಭಾಗಗಳಲ್ಲಿ ಜನರು ಉಸಿರು ಚೆಲ್ಲುತ್ತಿರುವುದು ಕಳವಳ ಉಂಟು ಮಾಡಿದೆ. ಈ ವರ್ಷದಲ್ಲಿ, ಆರು ತಿಂಗಳ ಅವಧಿಯಲ್ಲಿ 6,390 ಡೆಂಘೀ ಪ್ರಕರಣಗಳು ವರದಿಯಾಗಿವೆ. ಆರೋಗ್ಯ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ- ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ- ನಿನ್ನೆ ಬುಧವಾರ ಒಂದೇ ದಿನ ರಾಜ್ಯದಲ್ಲಿ 13 ಡೆಂಘೀ ಪ್ರಕರಣಗಳು ದೃಢಪಟ್ಟಿವೆ. ಹಾಸನದಲ್ಲಿ ಇಬ್ಬರು, ಹಾವೇರಿ, ಬೆಂಗಳೂರು, ಧಾರವಾಡ ಮತ್ತು ಶಿವಮೊಗ್ಗಗಳಲ್ಲಿ ತಲಾ ಒಬ್ಬರು ಸೇರಿ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾದವರು ಹಾಗೂ ಲೆಕ್ಕಕ್ಕೆ ಸಿಕ್ಕವರು ಆರು ಮಂದಿ. ಖಾಸಗಿ ಆಸ್ಪತ್ರೆಗಳಿಗೆ ದಾಖಲಾದವರು ಎಷ್ಟು, ಮರಣ ಹೊಂದಿದವರು ಇನ್ನೆಷ್ಟು?
ಮಳೆಗಾಲ ಶುರುವಾಯಿತೆಂದರೆ, ಕೃಷಿ ಚಟುವಟಿಕೆಗಳು ಗರಿಗೆದರುತ್ತವೆ. ಅದರಲ್ಲೂ ರೈತಾಪಿ ಕುಟುಂಬಗಳು ಹೊಲ, ಗದ್ದೆ, ತೋಟದ ಕೆಲಸಗಳಲ್ಲಿ ಮುಳುಗಿ ಬೀಜ, ಬಿತ್ತನೆ, ಗೊಬ್ಬರದ ಚಿಂತೆಯಲ್ಲಿರುತ್ತಾರೆ. ಅಂತಹ ಸಂಕಷ್ಟದ ಸಂದರ್ಭದಲ್ಲಿ ಡೆಂಘೀಯಂತಹ ರೋಗಗಳು ಹರಡಿದರೆ, ಜೇಬಲ್ಲಿ ಕಾಸಿರುವುದಿಲ್ಲ, ಹತ್ತಿರದಲ್ಲಿ ಆಸ್ಪತ್ರೆಗಳಿರುವುದಿಲ್ಲ, ಆಸ್ಪತ್ರೆಗಳಿದ್ದರೆ ವೈದ್ಯರಿರುವುದಿಲ್ಲ, ಔಷಧವಿರುವುದಿಲ್ಲ, ಸೂಕ್ತ ಮಾರ್ಗದರ್ಶನವೂ ಸಿಗುವುದಿಲ್ಲ. ಗ್ರಾಮೀಣ ಭಾಗದ ಜನರ ಸ್ಥಿತಿ ಊಹೆಗೂ ನಿಲುಕುವುದಿಲ್ಲ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಗಾಯ ನೆಕ್ಕಿಕೊಳ್ಳುತ್ತಿರುವ ಮೋದಿ ಎಚ್ಚರಿಕೆ- ಹೊಸ ದಮನ ದಾಳಿ ದಸ್ತಗಿರಿಗಳ ಮುನ್ಸೂಚನೆ
ಇನ್ನು ನಗರ ಪ್ರದೇಶಗಳಲ್ಲಿ, ಒಂದೇ ಒಂದು ಜೋರು ಮಳೆಗೆ ನಗರದ ಜನಜೀವನ ಅಸ್ತವ್ಯಸ್ತವಾಗುತ್ತದೆ. ಅದರಲ್ಲೂ ಬೆಂಗಳೂರಿನಂತಹ ನಗರಗಳಲ್ಲಿ ವೈದ್ಯಕೀಯ ನೆರವು ಸಿಕ್ಕರೂ, ಅದು ಹಣವಿರುವವರಿಗೆ ಮಾತ್ರ. ಬಡವರಿಗೆ ವಾಸಯೋಗ್ಯ ಪ್ರದೇಶಗಳೇ ಇಲ್ಲದಂತಾಗಿವೆ. ಚಿಕ್ಕ ಚಿಕ್ಕ ಬೀದಿಯಲ್ಲಿ, ವಠಾರದಲ್ಲಿ ಒತ್ತಟ್ಟಾಗಿ ಬದುಕುವ ಬಡವರು, ಕಾರ್ಮಿಕರು, ಕೆಳವರ್ಗದವರ ಆರೋಗ್ಯದ ಬಗ್ಗೆ ವಿಚಾರಿಸುವವರಾರು?
ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಪ್ರತಿನಿಧಿಸುವ ಗಾಂಧಿನಗರ ಕ್ಷೇತ್ರದಲ್ಲಿಯೇ ಬಡವರ ಬದುಕು ದಯನೀಯವಾಗಿದೆ. ಇವರು ಇಲ್ಲಿಂದ ನಾಲ್ಕು ಬಾರಿ ಗೆದ್ದು ಶಾಸಕರಾಗಿದ್ದಾರೆ, ಎರಡು ಸಲ ಸಚಿವರಾಗಿದ್ದಾರೆ. ಆದರೆ ಇವರನ್ನು ಗೆಲ್ಲಿಸಿದ ಮತದಾರರು ಇವತ್ತಿಗೂ ಸ್ಲಂಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಸೊರಗುತ್ತಿದ್ದಾರೆ.
ರಾಜ್ಯದಲ್ಲಿ ಮಳೆ ಹೆಚ್ಚಾಗುತ್ತಿದ್ದಂತೆಯೇ ಡೆಂಘೀ ಜ್ವರದಿಂದ ಬಳಲುತ್ತಿರುವವರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಮೇ-ಜೂನ್ ತಿಂಗಳ ನಂತರ ಡೆಂಘೀ ಪ್ರಕರಣಗಳು ಗಣನೀಯವಾಗಿ ಏರಿಕೆ ಕಾಣುತ್ತಿವೆ. ಇದು ಪ್ರತಿವರ್ಷದ ಮಳೆಗಾಲದ ಕತೆ. ಆದರೆ, ಪ್ರತಿ ಮಳೆಗಾಲದ ಅವಧಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು ಕಾಣುತ್ತಿಲ್ಲ. ಕಂಡರೂ ಪರಿಣಾಮಕಾರಿಯಾಗಿಲ್ಲ. ವರ್ಷಕ್ಕೆ ಸುಮಾರು 15 ಸಾವಿರ ಕೋಟಿಯಷ್ಟು ಹಣ ಖರ್ಚಾಗುವುದೂ ನಿಂತಿಲ್ಲ. ಯಾವ ಸರ್ಕಾರ ಬಂದರೂ, ಯಾರೇ ಸಚಿವರಾದರೂ, ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲೂ ಸಾಧ್ಯವಾಗಿಲ್ಲ.
ಅಧಿಕಾರಿಗಳು, ಜನಪ್ರತಿನಿಧಿಗಳು, ಸಚಿವರು, ತಮಗೆ ಸಿಕ್ಕ ಅಧಿಕಾರವೆಂಬ ಅವಕಾಶವನ್ನು ನಾಡಿನ ಜನತೆಯ ಒಳಿತಿಗಾಗಿ ವಿನಿಯೋಗಿಸಿದರೆ; ಜನ ಕೂಡ ಸ್ವಚ್ಛತೆ ಬಗ್ಗೆ ಅರಿತು ಆರೋಗ್ಯ ಕಾಪಾಡಿಕೊಳ್ಳುವ ಕಡೆ ಮುಂಜಾಗೃತ ಕ್ರಮ ಕೈಗೊಂಡರೆ- ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗಬಹುದು.
