ಗದಗ | ವಚನ ಸಾಹಿತ್ಯದ ತತ್ವಗಳನ್ನು ಯುವಜನಾಂಗ ಮೈಗೂಡಿಸಿಕೊಳ್ಳಬೇಕು: ಸಿದ್ಧರಾಮ ಮಹಾಸ್ವಾಮಿ 

Date:

Advertisements

ವಚನ ಸಾಹಿತ್ಯದ ತತ್ವಗಳನ್ನು ಅರಿತು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಕಾಯಕ, ದಾಸೋಹ ಸಿದ್ಧಾಂತಗಳಡಿ ನವಸಮಾಜ ನಿರ್ಮಾಣವಾಗಬೇಕು ಎಂದು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಗದಗ ನಗರದ  ಶ್ರೀ ಜಗದ್ಗುರು ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಹಯೋಗದಲ್ಲಿ ಡಾ. ಫ ಗು ಹಳಕಟ್ಟಿಯವರ ಜನ್ಮದಿನದ ನಿಮಿತ್ಯ ನಡೆದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.

“ಸಂಶೋಧಕ ಮತ್ತು ಸಾಹಿತ್ಯ ಪ್ರಚಾರಕ ಡಾ ಫ ಗು ಹಳಕಟ್ಟಿಯವರು ವಕೀಲ ವೃತ್ತಿ ನಿರ್ವಹಿಸುತ್ತಿದ್ದರು. ಅವರ ವಚನ ಸಾಹಿತ್ಯದ ಮೇಲಿನ ಕಾಳಜಿ ಇಡೀ ರಾಜ್ಯಾದ್ಯಂತ ಅಲೆದಾಡಿ 12ನೇ ಶತಮಾನದ ಅನೇಕ ವಚನಗಳನ್ನು ಸಂಗ್ರಹಿಸಿ ವಚನ ಸಾಹಿತ್ಯವನ್ನು ಶಾಶ್ವತವಾಗಿ ಉಳಿಸುವಲ್ಲಿ ಅವರ ಪಾತ್ರ ಮಹತ್ತರವಾದದ್ದು. ಬ್ರಿಟಿಷರ ಕಾಲದಲ್ಲಿ ಕನ್ನಡದ ಅತ್ಯಮೂಲ್ಯ ವಚನ ಸಾಹಿತ್ಯವನ್ನು ಪ್ರಕಟಿಸುವುದು ಸುಲಭ ಕಾರ್ಯವಾಗಿದ್ದಿಲ್ಲ. ಅವರಿಗೆ ಎದುರಾದ ಅಡೆ ತಡೆಗಳನ್ನು ಎದುರಿಸಿ ಸಂಗ್ರಹಿಸಿದ ವಚನಗಳನ್ನು ಮುದ್ರಿಸಲು ತಮ್ಮ ಸ್ವಂತ ಮನೆಯನ್ನು ಮಾರಿರುವುದು ಅವರ ದೃಢವಾದ ಇಚ್ಛಾಶಕ್ತಿ ಎಂತಹದ್ದೆಂದು ತಿಳಿಯುತ್ತದೆ” ಎಂದರು.

Advertisements

“ವೈಯಕ್ತಿಕ ಜೀವನದಲ್ಲಿ ಹಲವಾರು ತೊಂದರೆಗಳಿದ್ದರೂ ಅವುಗಳನ್ನು ಲೆಕ್ಕಿಸದೆ ವಚನಗಳನ್ನು ಸಂಗ್ರಹಿಸುವಲ್ಲಿ ನಿರತರಾಗಿ ಜನಸಾಮಾನ್ಯರ ಜೀವನ ಬದಲಾಯಿಸುವಲ್ಲಿ ಮಹತ್ತರ ಪಾತ್ರ ಹೊಂದಿದ್ದಾರೆ. ಅವರ ಉನ್ನತ ವ್ಯಕ್ತಿತ್ವ ಮತ್ತು ಅವರ ವಚನ ಸಾಹಿತ್ಯದ ಮೇಲಿರುವ ಶ್ರದ್ಧೆಯನ್ನು ಗಮನಿಸಿದ ಮಠಾಧೀಶರು ಫ ಗು ಹಳಕಟ್ಟಿಯವರನ್ನು ಒಬ್ಬ ಶರಣರಂತೆ ಭಾವಿಸಿ ತಮ್ಮ ಸಂಪೂರ್ಣ ಬೆಂಬಲ ಮತ್ತು ಸಹಕಾರವನ್ನು ನೀಡಿದ್ದಾರೆ. ಅವರ ಸತತ ಪರಿಶ್ರಮದಿಂದ ಹೊರಬಂದ ಅವರ ವಚನ ಸಾಹಿತ್ಯದ ಸಂಗ್ರಹ ನಮಗೆಲ್ಲರಿಗೂ ಮಾದರಿಯಾಗಿದೆ” ಎಂದು ತಿಳಿಸಿದರು.

“ಕೇವಲ ಪುಸ್ತಕಕ್ಕೆ ಸೀಮಿತವಾಗದೆ ಪ್ರತಿಯೊಬ್ಬರ ಮನೆಮನೆಗೆ ತಲುಪುವ ಕಾರ್ಯವಾಗಬೇಕು. ಯುವಜನಾಂಗದ ವಚನ ಸಾಹಿತ್ಯವನ್ನು ಅರಿತು ತಮ್ಮ ಜೀವನವನ್ನು ಕಟ್ಟಿಕೊಳ್ಳುವುದರ ಜತೆಗೆ ಉತ್ತಮ ಸಮಾಜ ನಿರ್ಮಾಣ ಮಾಡುವ ಕಾರ್ಯವಾಗಬೇಕು” ಎಂದು  ಜಗದ್ಗುರು ಸಿದ್ಧರಾಮ ಮಹಾಸ್ವಾಮಿ ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ ಕಾರ್ಯಕ್ರಮ ಉದ್ಘಾಟಿಸಿ ಮಾತನಡಿ, ವಚನ ಸಾಹಿತ್ಯ ದಿನಾಚರಣೆಯ ಶುಭಾಶಯ ಕೋರಿದ ಅವರು, “ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯವು ಜನಸಾಮಾನ್ಯರ ಜೀವನ ಕಟ್ಟುವಲ್ಲಿ ಮಹತ್ತರ ಪಾತ್ರವನ್ನು ವಹಿಸದೆ ಇಂತಹ ವಚನಗಳನ್ನು ಶ್ರಮವಹಿಸಿ ಸಂಗ್ರಹಿಸಿದ ಫ ಗು ಹಳಕಟ್ಟಿಯವರ ಕಾರ್ಯ ಶ್ಲಾಘನೀಯವಾದದ್ದು. ಅರ್ಥಪೂರ್ಣ, ಅತ್ಯಮೂಲ್ಯ ವಚನಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದು ಹೇಳಿದರು.

ವಿಜಯಪುರದ ಸಂಶೋಧನಾ ಕೇಂದ್ರದ ಕಾರ್ಯದರ್ಶಿ ಡಾ. ಎಂ ಎಸ್ ಮದಬಾವಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿ, “ಡಾ ಫ ಗು ಹಳಕಟ್ಟಿಯವರು ಧಾರವಾಡದಲ್ಲಿ ಹುಟ್ಟಿ ವಿದ್ಯಾಭ್ಯಾಸ ಮುಗಿಸಿದ ನಂತರ ಬಿಜಾಪುರದಲ್ಲಿ ತಮ್ಮ ವಕೀಲ ವೃತ್ತಿ ಪ್ರಾರಂಭಿಸಿದರು. ವಚನ ಸಾಹಿತ್ಯದ ಮೇಲಿನ ಅಪಾರ ಆಸಕ್ತಿಯಿಂದ ತಾಳೆಗರಿಯ ಪ್ರಾಚೀನ ಗ್ರಂಥಗಳನ್ನು ಸಂಪಾದಿಸಲು ಪ್ರಾಂಭಿಸಿ ವಚನ ಸಾಹಿತ್ಯವನ್ನು ಉಳಿಸಲು ಪಣತೊಟ್ಟರು. 1920ರ ಸಮಾರಿಗೆ ಸಾವಿರಾರು ಗ್ರಂಥಗಳ ಸಂಪಾದನೆ ಜತೆಗೆ ವಚನ ಸಂಗ್ರಹವನ್ನು ಮಾಡಿ ಸರ್ಕಾರ ಯುಜಿಸಿ ಸಾರ್ವಜನಿಕ ಸಂಸ್ಥೆಗಳ ನೆರವಿಲ್ಲದೆ ಹಲವಾರು ವಚನಕಾರರನ್ನು ಬೆಳಕಿಗೆ ತರುವಲ್ಲಿ ಅವರು ಮಾಡಿದ ಮಹತ್ಕಾರ್ಯ ಅಪಾರವಾಗಿದ್ದು, ಇತಿಹಾಸ‌ ನೆನಪಿಡುವಂತದಾಗಿದೆ” ಎಂದರು.

“ಕ್ರಿಶ್ಚಿಯನ್ ಮಿಷಿನರಿಯವರು ಇವರ ಗ್ರಂಥವನ್ನು ಮುದ್ರಿಸಲು ನಿರಾಕರಿಸಿದಾಗ ಮನೆಯನ್ನೇ ಮಾರಿ 1926ರಲ್ಲಿ ಮುದ್ರಣಾಲಯ ಸ್ಥಾಪಿಸಿ ಹಿತಚಿಂತಕ ಮುದ್ರಣಾಲಯವೆಂದು ನಾಮಕರಣಗೊಳಿಸಿ ಮುದ್ರಣ ಕಾರ್ಯ ಆರಂಭ ಮಾಡಿ, ಶಿವಾನುಭವ ಪತ್ರಿಕೆ ಕಾರ್ಯ ಪ್ರಾರಂಭಿಸಿ, ವಚನ ಸಾಹಿತ್ಯ ಶಾಶ್ವತವಾಗಿ ಉಳಿಯುವಂತೆ ಮಾಡಿದರು. ಮೂಲಗ್ರಂಥ, ಟೀಕಾಗ್ರಂಥಾ, ಸ್ವತಂತ್ರಗ್ರಂಥ, ಪಠ್ಯ ಪುಸ್ತಕ, ಗದ್ಯಗ್ರಂಥ, ಐತಿಹಾಸಿಕ ಗ್ರಂಥ, ಧಾರ್ಮಿಕ ಪುರುಷರ ಚರಿತ್ರೆ ಸೇರಿದಂತೆ 165 ಗ್ರಂಥಗಳ ಪ್ರಕಟಣೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ” ಎಂದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ಗುರುಪುರ ಸಮುದಾಯ ಆರೋಗ್ಯಾಧಿಕಾರಿ ಡೆಂಘೀ ಜ್ವರಕ್ಕೆ ಬಲಿ

“1926ರಲ್ಲಿ ಬಳ್ಳಾರಿಯಲ್ಲಿ ನಡೆದ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 1928ರ ಜೂನ್‍ನಲ್ಲಿ ನಡೆದ ಕರ್ನಾಟಕ ಏಕೀಕರಣ ಪರಿಷತ್ತಿನ 3ನೇ ಅಧ್ಯಕ್ಷ ಪದವಿ ಗೌರವ, ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಬ್ರಿಟಿಷ್ ಸರ್ಕಾರದಿಂದ ರಾವ್ ಬಹದ್ದೂರ್ ಮತ್ತು ರಾವ್ ಸಾಹೇಬ ಪ್ರಶಸ್ತಿ, ವಚನ ಶಾಸ್ತ್ರ ಪ್ರವೀಣ, ವಚನ ಶಾಸ್ತ್ರ ಪಿತಾಮಹ ಮುಂತಾದ ಗೌರವಗಳಿಗೆ ಪಾತ್ರರಾದವರು” ಎಂದು  ಫ‌ ಗು ಹಳಕಟ್ಟಿಯವರ ಜೀವನ ಮತ್ತು ಸಾಧನೆಯ ಪ್ರಮುಖ ವಿಷಯಗಳನ್ನು ಉಪನ್ಯಾಸ ಮಾಡಿದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಜಿ, ಜಿ ಪಂ ಉಪಕಾರ್ಯದರ್ಶಿ ಸಿ ಆರ್ ಮುಂಡರಗಿ ಸೇರಿದಂತೆ ಇತರೆ ಗಣ್ಯರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಒಳ ಮೀಸಲಾತಿ : ಅಲೆಮಾರಿಗಳಿಗೆ ನ್ಯಾಯ ಸಮ್ಮತ ಪಾಲು ನೀಡಲು ಒತ್ತಾಯ

ಒಳ ಮೀಸಲಾತಿ ಕಲ್ಪಿಸುವಲ್ಲಿ ಸೂಕ್ಷ್ಮ, ಅತಿಸೂಕ್ಷ್ಮ ಅಲೆಮಾರಿಯ 59 ಸಮುದಾಯಗಳಿಗೆ ಆಗಿರುವ...

ಗುಬ್ಬಿ | ರೈತನ ಕೃಷಿ ಚಟುವಟಿಕೆಗೆ ಜೇನು ಸಾಕಾಣಿಕೆ ವರದಾನ : ಪುಷ್ಪಲತಾ

ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಪ್ರಮುಖ ಘಟವಾದ ಪರಾಗಸ್ಪರ್ಶ ಕ್ರಿಯೆಗೆ...

ಮಂಗಳೂರು | ಆ. 23: ಅಲ್ ವಫಾ ಚಾರಿಟೇಬಲ್ ಟ್ರಸ್ಟ್‌ನಿಂದ 15 ಜೋಡಿಗಳ ಸರಳ ಸಾಮೂಹಿಕ ವಿವಾಹ

ಮಂಗಳೂರು ಭಾಗದಲ್ಲಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಅಲ್ ವಫಾ ಚಾರಿಟೆಬಲ್ ಟ್ರಸ್ಟ್...

ಗುಬ್ಬಿ | ಎಂ.ಎನ್.ಕೋಟೆ ಗ್ರಾಪಂ ಉಪಾಧ್ಯಕ್ಷರಾಗಿ ಸಿದ್ದಗಂಗಮ್ಮ ಅವಿರೋಧ ಆಯ್ಕೆ

ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಎಂ.ಎನ್.ಕೋಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ...

Download Eedina App Android / iOS

X