ವೆಸ್ಟ್ ಇಂಡೀಸ್ ದ್ವೀಪ ರಾಷ್ಟ್ರದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಎರಡನೇ ಬಾರಿಗೆ ಟಿ20 ವಿಶ್ವಕಪ್ ಕಿರೀಟ ಎತ್ತಿಹಿಡಿದ ಟೀಂ ಇಂಡಿಯಾ ತಂಡ ಗುರುವಾರ ಸಂಜೆ ಮುಂಬೈನಲ್ಲಿ ಭರ್ಜರಿ ವಿಜಯೋತ್ಸವದ ಮೆರವಣಿಗೆ ನಡೆಸಿತು.
ಸಮುದ್ರದ ಕಿನಾರೆ ಮರೈನ್ ಡ್ರೈವ್ ಬೀಚ್ನ ನರೀಮನ್ ಪಾಯಿಂಟ್ನಲ್ಲಿರುವ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ (ಎನ್ಸಿಪಿಎ)ನಿಂದ ತೆರೆದ ಚಾವಣಿಯ ಬಸ್ನಲ್ಲಿ ಆರಂಭವಾದ ಮೆರವಣಿಗೆ ವಾಂಖೆಡೆ ಕ್ರೀಡಾಂಗಣದವರೆಗೂ ತಲುಪಿತು. ತಮ್ಮ ನೆಚ್ಚಿನ ಆಟಗಾರರನ್ನು ಸ್ವಾಗತಿಸಲು ಸಾವಿರಾರು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು.
ಧಾರಾಕಾರ ಮಳೆ ಬಂದರೂ ಕೂಡ ಅಭಿಮಾನಿಗಳು ಕದಲಿರಲಿಲ್ಲ. ಅಭಿಮಾನಿಗಳಷ್ಟೆ ಉತ್ಸಾಹದಲ್ಲಿದ್ದ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬೂಮ್ರಾ, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್, ಯಜುವೇಂದ್ರ ಚಾಹಲ್, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜ, ರಿಷಭ್ ಪಂತ್, ಶಿವಂ ದುಬೆ ಮತ್ತು ನೆರವು ಸಿಬ್ಬಂದಿಯು ಬಸ್ ಟಾಪ್ ಮೇಲೆ ನಿಂತು ಅಭಿಮಾನಿಗಳತ್ತ ವಿಶ್ವಕಪ್ ತೋರಿಸಿ ಸಂಭ್ರಮಿಸಿದರು. ಕೈಬೀಸಿ ಶುಭಕೋರಿದರು. ಕ್ರಿಕೆಟ್ಪ್ರೇಮಿಗಳೂ ಕೂಡ ತ್ರಿವರ್ಣ ಧ್ವಜವನ್ನು ಹಾರಿಸುತ್ತ, ಜಯಘೋಷಗಳನ್ನು ಕೂಗಿದರು.
ಈ ಸುದ್ದಿ ಓದಿದ್ದೀರಾ? ಮೈದಾನದ ಮಣ್ಣು ಸವಿದ ಭಾವನಾತ್ಮಕ ಅನುಭವದ ಬಗ್ಗೆ ರೋಹಿತ್ ಶರ್ಮಾ ಮಾತು
ಸನ್ಮಾನ ಸಮಾರಂಭ ನಡೆದ ಕ್ರೀಡಾಂಗಣಕ್ಕೆ ಜನರಿಗೆ ಉಚಿತ ಪ್ರವೇಶ ನೀಡಲಾಗಿತ್ತು. ಇದರಿಂದಾಗಿ ಕೆಲವೇ ಕ್ಷಣಗಳೊಳಗೆ ಕ್ರೀಡಾಂಗಣ ಜನರಿಂದ ಭರ್ತಿಯಾಯಿತು. ಮೈದಾನದ ಹೊರಗೂ ಜನಸಾಗರ ಸೇರಿತ್ತು.
ವಿಶ್ವಕಪ್ ಗೆದ್ದ ಟೀಮ್ ಇಂಡಿಯಾ ಆಟಗಾರರಿಗೆ ಬಿಸಿಸಿಐ 125 ಕೋಟಿ ರೂ. ಬಹುಮಾನ ಘೋಷಿಸಿತ್ತು. ಈ ಬಹುಮಾನದ ಮೊತ್ತವನ್ನು ಆಟಗಾರರಿಗೆ ಬಿಸಿಸಿಐ ಮುಂಬೈನ ವಾಂಖೆಡೆ ಕೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ವಿತರಣೆ ಮಾಡಿತು.
ಜೂ.29ರಂದು ಬಾರ್ಬೊಡೋಸ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ತಂಡವನ್ನು 8 ವಿಕೆಟ್ಗಳಿಂದ ಮಣಿಸಿ ಎರಡನೇ ಬಾರಿ ಟಿ20 ಚಾಂಪಿಯನ್ ಪಟ್ಟಕೇರಿ 17 ವರ್ಷಗಳ ನಂತರ ಟ್ರೋಫಿಯ ಬರವನ್ನು ನೀಗಿಸಿಕೊಂಡಿತ್ತು. ಭಾರತ ನೀಡಿದ 176 ರನ್ಗಳ ಸವಾಲನ್ನು ಬೆನ್ನಟ್ಟಿದ ಹರಿಣಗಳ ತಂಡ 169 ರನ್ಗಳನಷ್ಟೆ ಗಳಿಸಲು ಶಕ್ತವಾಗಿತ್ತು.
2011ರ ಏಕದಿನ ವಿಶ್ವಕಪ್ ಗೆದ್ದ ನಂತರ ಭಾರತ ಯಾವುದೇ ಐಸಿಸಿ ಟ್ರೋಫಿಯನ್ನು ಜಯಿಸಿರಲಿಲ್ಲ. ಟಿ20 ವಿಶ್ವಕಪ್ ಟ್ರೋಫಿ ಜಯಿಸಿದ ನಂತರ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಕೋಚ್ ರಾಹುಲ್ ದ್ರಾವಿಡ್ ಅವಧಿ ಕೂಡ ಅಂತ್ಯವಾಗಲಿದೆ.
AN UNFORGETTABLE DAY 💙
𝐂𝐇𝐀𝐌𝐏𝐈𝐎𝐍𝐒 🏆#TeamIndia | #T20WorldCup | #Champions pic.twitter.com/FeT7VNV5lB
— BCCI (@BCCI) July 4, 2024