- ಸಾರ್ವಜನಿಕರಿಗೆ ನೀರಿನ ಕೊರತೆ ಮತ್ತು ಸರಬರಾಜಿನ ಬಗ್ಗೆ ಮಾಹಿತಿ ನೀಡಬೇಕು
- ಖಾಸಗಿ ಟ್ಯಾಂಕರ್‌ಗಳೊಂದಿಗೆ ಶಾಮೀಲಾಗಿ ವ್ಯಾಪಾರ ಮಾಡುತ್ತಿರುವ ಅಧಿಕಾರಿಗಳು
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೇಸಿಗೆಯ ತಾಪಮಾನ ಹೆಚ್ಚಾಗಿದ್ದು, ಜತೆಗೆ ನೀರಿನ ಬೇಡಿಕೆಯೂ ಹೆಚ್ಚಾಗಿದೆ. ಆದರೆ, ನಗರದ ಕೆಲವು ಪ್ರದೇಶಗಳಿಗೆ ನೀರಿನ ಪೂರೈಕೆಯಲ್ಲಿ ಕೊರತೆ ಉಂಟಾಗುತ್ತಿದೆ ಎಂದು ದೂರುಗಳು ದಾಖಲಾಗುತ್ತಿವೆ.
ವಿದ್ಯಾಮಾನ್ಯನಗರ, ಆಂದ್ರಹಳ್ಳಿ, ಕಮ್ಮನಹಳ್ಳಿ ಮುಂತಾದ ಪ್ರದೇಶಗಳಲ್ಲಿ ನೀರಿನ ಕೊರತೆ ಎದುರಾಗಿದೆ. ಅದರಲ್ಲಿಯೂ ಬಾಣಸವಾಡಿಯ ಒಎಂಬಿಆರ್ ಲೇಔಟ್ ನಿವಾಸಿಗಳು ಒಂದು ತಿಂಗಳಿನಿಂದ ನಿತ್ಯ ನೀರಿನ ಕೊರತೆಯಿಂದ ಪರದಾಡುತ್ತಿದ್ದಾರೆ.
“ಈ ಹಿಂದೆ ನಮ್ಮ ಏರಿಯಾದಲ್ಲಿ ವಾರಕ್ಕೆ ಮೂರು ಬಾರಿ ನೀರು ಬರುತ್ತಿತ್ತು. ಕಳೆದ ಒಂದು ತಿಂಗಳಿನಿಂದ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಸತತ 10 ದಿನಗಳಿಂದ ಒಎಂಬಿಆರ್ ಲೇಔಟ್‌ಗೆ ನೀರು ಬಿಟ್ಟಿಲ್ಲ. ಈ ಪ್ರದೇಶದಲ್ಲಿ ಶೂನ್ಯ ನೀರಿನ ಪೂರೈಕೆಯನ್ನು ಹೊಂದಿದ್ದೇವೆ. ಕೆಲವೊಮ್ಮೆ ನೀರನ್ನು ಕಡಿಮೆ ಅವಧಿಗೆ ಮತ್ತು ಕಡಿಮೆ ಒತ್ತಡದಲ್ಲಿ ಸರಬರಾಜು ಮಾಡಲಾಗುತ್ತದೆ” ಎಂದು ಒಎಂಬಿಆರ್ ಲೇಔಟ್ ನಿವಾಸಿ ಬೋಬಿ ಜೋಸೆಫ್ ತಿಳಿಸಿದರು.
“ನೀರು ಮೂಲಭೂತ ಅವಶ್ಯಕತೆಯಾಗಿದೆ. ನೀರು ಸರಬರಾಜು ಬಗ್ಗೆ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಪ್ರತಿ ಬಾರಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್ಎಸ್‌ಬಿ) ಅಧಿಕಾರಿಗಳಿಗೆ ದೂರು ನೀಡಿದಾಗ, ಅವರು ನಮಗೆ ಕೆಲಸಗಾರರು ರಜೆಯಲ್ಲಿದ್ದಾರೆ ಎಂಬ ಸಣ್ಣ ಕಾರಣಗಳನ್ನು ನೀಡುತ್ತಾರೆ. ನೀರಿನ ಕೊರತೆ ಇದೆಯೇ ಎಂಬುದು ನಮಗೂ ಗೊತ್ತಿಲ್ಲ. ಈ ಬಗ್ಗೆ ಬಿಡಬ್ಲ್ಯುಎಸ್ಎಸ್‌ಬಿ ಅಧಿಕಾರಿಗಳನ್ನು ಭೇಟಿ ಮಾಡಿ ದೂರು ನೀಡುವೆ” ಎಂದರು.
“ನೀರಿನ ಸರಬರಾಜಿನಲ್ಲಿ ಏಕೆ ತೊಂದರೆ ಉಂಟಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಬಹುಶಃ ನೀರಿನ ಬೇಡಿಕೆ ಹೆಚ್ಚಿರಬಹುದು. ಆದರೆ, ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ನೀಡಬೇಕು” ಎಂದು ವಿದ್ಯಾಮಾನ್ಯ ನಗರದ ನಿವಾಸಿಯೊಬ್ಬರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೇಡಿಕೆ ಮೇರೆಗೆ ಕೇರಳದ ಕೊಚುವೇಲಿ-ಬೆಂಗಳೂರು ನಡುವೆ ವಿಶೇಷ ರೈಲು ಆರಂಭ
“ಬಿಡಬ್ಲ್ಯುಎಸ್ಎಸ್‌ಬಿ ಅಧಿಕಾರಿಗಳು ಖಾಸಗಿ ಟ್ಯಾಂಕರ್‌ಗಳೊಂದಿಗೆ ಶಾಮೀಲಾಗಿ ವ್ಯಾಪಾರ ಮಾಡಲು ಕೆಲಸ ಮಾಡುತ್ತಿದ್ದಾರೆ” ಎಂದು ಕೆಲವು ನಿವಾಸಿಗಳು ದೂರಿದ್ದಾರೆ.
ಈ ಬಗ್ಗೆ ಮಾತನಾಡಿದ ಬಿಡಬ್ಲ್ಯುಎಸ್ಎಸ್‌ಬಿ ಅಧಿಕಾರಿಯೊಬ್ಬರು, “ತಾಂತ್ರಿಕ ಅಡಚಣೆ ಮತ್ತು ವಿದ್ಯುತ್ ಅಡೆತಡೆಗಳಂತಹ ಸಮಸ್ಯೆ ನೀರಿನ ಕೊರತೆಗೆ ಕಾರಣವಾಗಿದೆ” ಎಂದರು.
“ಬೆಂಗಳೂರಿನ ಪೂರ್ವ ಮತ್ತು ಉತ್ತರ ಭಾಗದ ಕೆಲವು ಪ್ರದೇಶಗಳಲ್ಲಿ ಮಾತ್ರ ನೀರಿನ ಸಮಸ್ಯೆ ಇದೆ. ಬೇಸಿಗೆಯಲ್ಲಿ ನೀರಿನ ಬೇಡಿಕೆ ಹೆಚ್ಚಾಗುತ್ತದೆ. ವಿದ್ಯುತ್ ವ್ಯತ್ಯಯದಿಂದ ನಿರಂತರ ನೀರು ಪೂರೈಕೆಗೆ ತೊಂದರೆಯಾಗುತ್ತಿದೆ. ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ” ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಮುಖ್ಯ ಎಂಜಿನಿಯರ್ ಸುರೇಶ್ ಬಿ ಹೇಳಿದರು.