17 ದಿನಗಳಲ್ಲಿ 12 ಬ್ರಿಡ್ಜ್‌ಗಳು ಕುಸಿತ; ಬಿಹಾರ ಸೇತುವೆಗಳು ಬೀಳುತ್ತಿರುವುದೇಕೆ?

Date:

Advertisements

ದೇಶದ ನಾನಾ ಭಾಗಗಳಲ್ಲಿ ಮಳೆ ಆರ್ಭಟ ಹೆಚ್ಚಾಗಿದೆ. ದೆಹಲಿ ಜಲಾವೃತವಾಗಿದೆ. ಅಸ್ಸಾಂನಲ್ಲಿ ಪ್ರವಾಹವಾಗುತ್ತಿದೆ. ಈ ನಡುವೆ ಮಳೆಯಾಗುತ್ತಿರುವ ಎಲ್ಲ ರಾಜ್ಯಗಳಿಗಿಂತ ಬಿಹಾರ ಹೆಚ್ಚು ಸುದ್ದಿಯಲ್ಲಿದೆ. ಅಲ್ಲಿನ ಸೇತುವೆಗಳೇ ಉರುಳಿ ಬೀಳುತ್ತಿವೆ. ಕಳೆದ 17 ದಿನಗಳಲ್ಲಿ ಆ ರಾಜ್ಯದ 12 ಸೇತುವೆಗಳು ನೆಲಸಮವಾಗಿದ್ದು, ರಾಜ್ಯವು ಅಪಖ್ಯಾತಿಗೆ ತುತ್ತಾಗಿದೆ. ‘ಸೇತುವೆಗಳು ಉರುಳುವ ರಾಜ್ಯ’ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಅಲ್ಲಿನ ಆಡಳಿತಾರೂಢ ನಿತೀಶ್ ನೇತೃತ್ವದ ಬಿಜೆಪಿ-ಜೆಡಿಯು ಸರ್ಕಾರದ ವಿರುದ್ಧ ಟೀಕೆ, ವ್ಯಂಗ್ಯ, ಟ್ರೋಲ್‌ಗಳು ಹೆಚ್ಚಾಗಿವೆ.

ಸಾಧಾರಣ ಮಳೆಗೂ ಸೇತುವೆಗಳು ಉರುಳಿ ಬೀಳುತ್ತಿರುವುದು ನಾನಾ ರೀತಿಯ ಚರ್ಚೆಯನ್ನು ಹುಟ್ಟು ಹಾಕಿದೆ. ಸೇತುವೆಗಳ ನಿರ್ಮಾಣದ ಗುಣಮಟ್ಟ ಮತ್ತು ಕಾಮಗಾರಿಗೆ ಬಳಸಿದ ವಸ್ತುಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕಳಪೆ ಕಾಮಗಾರಿಯ ಆರೋಪಗಳು ಕೇಳಿಬರುತ್ತಿವೆ. ಅದಾಗ್ಯೂ, ತಜ್ಞರು ಪ್ರಕರಣಗಳಿಗೆ ಮೂಲ ಕಾರಣಗಳು ಬೇರೆ ಯಾವುದಾದರೂ ಇರಬಹುದು ಎಂದೂ ಹೇಳುತ್ತಿದ್ದಾರೆ.

ಜೂನ್ 18 ರಂದು ನೇಪಾಳದ ಗಡಿಯಲ್ಲಿರುವ ಅರಾರಿಯಾ ಜಿಲ್ಲೆಯ ಸಿಕ್ತಿ ಪ್ರದೇಶದ ಪಾಡ್ಕಿಯಾ ಘಾಟ್‌ನಲ್ಲಿ ಮೊದಲ ಸೇತುವೆ ಕುಸಿದಿದೆ. ಅದಾದ ಬಳಿಕ, ಸಿವಾನ್, ಸರನ್, ಮಧುಬನಿ, ಅರಾರಿಯಾ, ಪೂರ್ವ ಚಂಪಾರಣ್ ಮತ್ತು ಕಿಶನ್‌ಗಂಜ್ ಜಿಲ್ಲೆಗಳಲ್ಲಿ ಕಳೆದ ಎರಡು ವಾರಗಳಲ್ಲಿ 12 ಸೇತುವೆಗಳು ಕುಸಿದಿವೆ.

Advertisements

ಗುರುವಾರ, ಸರೈಯಾ ಮತ್ತು ಸತುವಾ ಪಂಚಾಯತ್‌ಗಳ ಮಧ್ಯೆ ಹರಿಯುವ ಗಂಡಕಿ ನದಿಗೆ ಕಟ್ಟಲಾಗಿದ್ದ ಸೇತುವೆ ಕುಸಿದು ಬಿದ್ದಿದ್ದು, ಸುಮಾರು 50ಕ್ಕೂ ಹೆಚ್ಚು ಹಳ್ಳಿಗಳು ಸಂಪರ್ಕ ಕಳೆದುಕೊಂಡಿವೆ ಎಂದು ವರದಿಯಾಗಿದೆ. ಲಹ್ಲಾದ್‌ಪುರ ಪ್ರದೇಶದಲ್ಲಿದ್ದ 150 ವರ್ಷಗಳಷ್ಟು ಹಳೆಯದಾದ ಸೇತುವೆಯೊಂದು ಭಾಗಶಃ ಕುಸಿದಿದೆ. ಜಂತಾ ಬಜಾರ್ ಪ್ರದೇಶದಲ್ಲಿ ಮತ್ತೊಂದು ಸೇತುವೆ ಉರುಳಿದೆ.

bihar2

ಉತ್ತರ ಬಿಹಾರದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೂರು ಸೇತುವೆಗಳು ಕುಸಿದಿವೆ; ಅರಾರಿಯಾ ಜಿಲ್ಲೆಯ ಬಕ್ರಾ ನದಿಯ ಸೇತುವೆಗೆ 12 ಕೋಟಿ ರೂ., ಮಧುಬನಿ ಜಿಲ್ಲೆಯ ಭೂತಾಹಿ ಬಾಲನ್ ನದಿಯ ಸೇತುವೆಗೆ 3 ಕೋಟಿ ರೂ. ಮತ್ತು ಪೂರ್ವ ಚಂಪಾರಣ್ ಜಿಲ್ಲೆಯ ಸೇತುವೆಗೆ 1.5 ಕೋಟಿ ರೂ. ವೆಚ್ಚ ಮಾಡಲಾಗಿತ್ತು ಎಂದು ಟಿಒಐ ವರದಿ ಮಾಡಿದೆ.

ರಸ್ತೆ ನಿರ್ಮಾಣ ಇಲಾಖೆ (RCD) ಹೆಚ್ಚಿನ ಮೌಲ್ಯದ ಸೇತುವೆಗಳನ್ನು ನಿರ್ಮಿಸುತ್ತದೆ. ಪ್ರಮುಖ ಜಿಲ್ಲಾ ರಸ್ತೆಗಳು, ರಾಜ್ಯ ಹೆದ್ದಾರಿಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಈ ಇಲಾಖೆ ನಿರ್ವಹಿಸುತ್ತದೆ. ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆ (PMGSY) ಅಡಿಯಲ್ಲಿ ಹಳ್ಳಿಗಳನ್ನು ಸಂಪರ್ಕಿಸುವ ರಸ್ತೆಗಳು ಮತ್ತು ಸೇತುವೆಗಳನ್ನು ನಿರ್ಮಿಸುವ ಜವಾಬ್ದಾರಿಯನ್ನು ಗ್ರಾಮೀಣ ಕಾಮಗಾರಿ ಇಲಾಖೆ (RWD) ನಿರ್ವಹಿಸುತ್ತದೆ.

ಗಮನಾರ್ಹವೆಂದರೆ, ಈಗ ಕುಸಿದಿರುವ ಎಲ್ಲ ಸೇತುವೆಗಳೂ ಆರ್‌ಡಬ್ಲ್ಯುಡಿ ಅಡಿಯಲ್ಲಿವೆ. ಈ ಸೇತುವೆ ಕುಸಿತಗಳ ಬಗ್ಗೆ ಬಿಹಾರ ಇಂಜಿನಿಯರಿಂಗ್ ಸರ್ವಿಸಸ್ ಅಸೋಸಿಯೇಷನ್ ​​(BESA) ಮತ್ತು ಕೆಲವು ನಿವೃತ್ತ ಎಂಜಿನಿಯರ್‌ಗಳು ಕಳವಳ ವ್ಯಕ್ತಪಡಿಸಿದ್ದಾರೆ. ಕುಸಿದಿರುವ ಸೇತುವೆಗಳಲ್ಲಿ ಕೆಲವು ಹಳೆಯವಾಗಿದ್ದರೂ, ಪ್ರಮುಖ ಮೂರು ಸೇತುವೆಗಳು ನಿರ್ಮಾಣ ಹಂತದಲ್ಲಿದ್ದವು.

ಸಂಭಾವ್ಯ ಕಾರಣಗಳು

“ಸೇತುವೆ ವಿನ್ಯಾಸ, ಕಡಿಮೆ-ಮೌಲ್ಯದ ಸಿಮೆಂಟ್ ಮತ್ತು ಹೆಚ್ಚು ಮರಳು ಬಳಕೆಯ ಕಾಂಕ್ರೀಟ್, ಸ್ಟೀಲ್ ರಾಡ್‌ಗಳಂತಹ ಕಡಿಮೆ ಗುಣಮಟ್ಟದ ವಸ್ತುಗಳ ಬಳಕೆ, ಅನುಮೋದಿತ ವ್ಯಾಸಕ್ಕಿಂತ ತೆಳುವಾದ ಕಬ್ಬಿಣಗಳ ಬಳಕೆ, ಕಳಪೆ ಕಾಮಗಾರಿ – ಇದೆಲ್ಲವೂ ಕುಸಿತಕ್ಕೆ ಕಾರಣವಾಗುತ್ತವೆ” ಎಂದು ರಸ್ತೆ ನಿರ್ಮಾಣ ಇಲಾಖೆಯ ಮಾಜಿ ಮುಖ್ಯ ಇಂಜಿನಿಯರ್ ಜೆಕೆ ದತ್ ಹೇಳಿದ್ದಾರೆ.

BIHAR 2

“ಸೇತುವೆ ನಿರ್ಮಿಸಲು ತೊಡಗಿರುವ ಗುತ್ತಿಗೆದಾರನು ಲಾಭಕ್ಕಾಗಿ ಕೆಲಸ ಮಾಡುತ್ತಾನೆ. ಅವರು ಗುಣಮಟ್ಟದ ಕಾಮಗಾರಿಯ ಮಾನದಂಡಗಳನ್ನು ಉಲ್ಲಂಘಿಸಿದ್ದಾರೆ. ಆದರೆ, ಸ್ಥಳೀಯ ಸರ್ಕಾರಿ ಎಂಜಿನಿಯರ್‌ಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗದೆ ಕೆಲಸ ಮಾಡಿದರೆ, ಇಂತಹ ಉಲ್ಲಂಘನೆಗಳ ಸಾಧ್ಯವಾಗುವಿಲ್ಲ. ಕಳಪೆ ಕಾಮಗಾರಿಗೆ ಅಧಿಕಾರಿಗಳು ಕೈಜೋಡಿಸಿದರೆ, ಇಂತಹ ಘಟನೆಗಳು ನಡೆಯುತ್ತವೆ” ಎಂದು ಹೆಸರು ಹೇಳಲಿಚ್ಚಿಸದ ಗುತ್ತಿಗೆದಾರರೊಬ್ಬರು ಹೇಳಿದ್ದಾರೆ

ಆದರೆ, “ಗುತ್ತಿಗೆದಾರರು ಅಸಡ್ಡೆಯಿಂದ ಕೆಲಸ ಮಾಡುತ್ತಿದ್ದಾರೆ. ಎಂಜಿನಿಯರ್‌ಗಳು ಸಾಕಷ್ಟು ಎಚ್ಚರಿಕೆ ವಹಿಸುತ್ತಿಲ್ಲ” ಎಂದು ರಾಜ್ಯ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚೈತನ್ಯ ಪ್ರಸಾದ್ ಆರೋಪಿಸಿದ್ದಾರೆ.

“ಜುಲೈ 3 ಮತ್ತು ಜುಲೈ 4 ರಂದು ಸಿವಾನ್ ಮತ್ತು ಸರನ್‌ನಲ್ಲಿ ಗಂಡಕ್ ನದಿಗೆ ಕಟ್ಟಲಾಗಿದ್ದ ಆರು ಸೇತುವೆಗಳು ಕುಸಿದಿವೆ. ಇಂಜಿನಿಯರ್‌ಗಳು ಸರಿಯಾದ ಕಾಳಜಿ ವಹಿಸದಿರುವುದು ಮತ್ತು ಗುತ್ತಿಗೆದಾರರು ಪರಿಶ್ರಮದಿಂದ ಕೆಲಸ ಮಾಡದೇ ಇರುವುದು ಕಂಡುಬರುತ್ತದೆ. ಸಂಬಂಧಪಟ್ಟ ಎಂಜಿನಿಯರ್‌ಗಳು ಮೇಲ್ನೋಟದ ಕಾರಣಗಳನ್ನು ಹೇಳುತ್ತಿದ್ದಾರೆ. ವಿಶೇಷ ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು ಘಟನಾ ಸ್ಥಳಗಳಿಗೆ ಕಳುಹಿಸಲಾಗಿದ್ದು, ಅವರ ವರದಿ ಬಂದ ಬಳಿಕ, ಇನ್ನಷ್ಟು ಮಾಹಿತಿ ದೊರೆಯಲಿದೆ. ಈ ಸೇತುವೆಗಳಲ್ಲಿ ಹೆಚ್ಚಿನವು ಸರಿಯಾದ ಅಡಿಪಾಯವನ್ನೇ ಹೊಂದಿರದಿದ್ದ 30 ವರ್ಷಗಳಷ್ಟು ಹಳೆಯ ಸೇತುವೆಗಳಾಗಿವೆ. ನೀರಿಯ ಹಿರಿಯುವಿಕೆಯಿಂದ ಅವುಗಳ ಅಡಿಪಾಯಗಳು ಸವೆದುಹೋಗಿವೆ” ಎಂದು ಚೈತನ್ಯ ತಿಳಿಸಿದ್ದಾರೆ.

ನದಿಗಳಲ್ಲಿ ಹೂಳು ತೆಗೆಯುವಾಗ ಸೇತುವೆಗಳನ್ನು ಹಿಡಿದಿಟ್ಟುಕೊಂಡಿರುವ ಪಿಲ್ಲರ್‌ಗಳ ಸುತ್ತಲಿನ ಹೂಳು ಮತ್ತು ಮಣ್ಣನ್ನು ಸಹ ತೆರವುಗೊಳಿಸಲಾಗಿದೆ. ಹೀಗಾಗಿ, ಅವುಗಳಿಗೆ ಯಾವುದೇ ಆಧಾರವಿಲ್ಲದಂತಾಗಿದ್ದು, ಪಿಲ್ಲರ್‌ಗಳು ಶಿಥಿಲಗೊಂಡು, ಸೇತುವೆಗಳು ಉರುಳಿವೆ ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿಯಾಗಿದೆ.

ನಿರ್ಮಾಣದ ಹಂತಗಳಲ್ಲಿದ್ದ ಸೇತುವೆಗಳು ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳದಿದ್ದರಿಂದ ಭದ್ರವಾಗಿರಲಿಲ್ಲ. ಒಂದು ಬದಿಯಿಂದ ಮತ್ತೊಂದು ಬದಿವರೆಗೆ ಸೇತುವೆಯಲ್ಲಿ ಸಂಪೂರ್ಣ ಹೊಂದಾಣಿಕೆ ಇಲ್ಲದ ಕಾರಣ, ಅವುಗಳು ಕುಸಿದಿವೆ ಎಂದು RWD ಸಚಿವ ಅಶೋಕ್ ಚೌಧರಿ ಹೇಳಿದ್ದಾರೆ. ಅಲ್ಲದೆ, ಅರಾರಿಯಾ ಸೇತುವೆಯ ಕುಸಿತದ ಪ್ರಕರಣದಲ್ಲಿ ಮೂವರು ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿದ್ದಾರೆ. ಜೊತೆಗೆ, ಗುತ್ತಿಗೆದಾರರ ವಿರುದ್ಧ ಅಧಿಕೃತ ದೂರು ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

bihar3

ನಿರ್ಮಾಣ ಹಂತದಲ್ಲಿರುವ ಸೇತುವೆಗಳು ಸೇರಿದಂತೆ ರಾಜ್ಯದ ಎಲ್ಲ ಸೇತುವೆಗಳ ಬಗ್ಗೆ ಲೆಕ್ಕಪರಿಶೋಧನೆ ಮತ್ತು ತನಿಖೆ ನಡೆಸಲು ಬಿಹಾರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ವಕೀಲ ಬ್ರಜೇಶ್ ಸಿಂಗ್ ಗುರುವಾರ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸಲ್ಲಿಸಿದ್ದಾರೆ.

ಆಡಳಿತಾರೂಢ ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರವು ಘಟನೆಗಳಿಗೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕೆಂಬ ಚಿಂತೆಯಲ್ಲಿದೆ. ಸರ್ಕಾರವನ್ನು ವಿಪಕ್ಷಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿವೆ. ಸರ್ಕಾರವು ವಿಪಕ್ಷಗಳ ವಿರುದ್ಧವೇ ಆರೋಪ ಮಾಡಲು ಮುಂದಾಗಿದೆ. ತಮ್ಮ ಎದುರಾಳಿ ಆರ್‌ಜೆಡಿ ನಾಯಕ, ಹಿಂದಿನ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ರಾಜ್ಯದ ರಸ್ತೆ ನಿರ್ಮಾಣ ಮತ್ತು ಕಟ್ಟಡ ನಿರ್ಮಾಣ ಸಚಿವರಾಗಿದ್ದಾಗ ‘ಉತ್ತಮ ಸೇತುವೆ ನಿರ್ವಹಣಾ ನೀತಿ’ಯನ್ನು ರೂಪಿಸಲಿಲ್ಲವೆಂದು ಹಾಲಿ ಕಟ್ಟಡ ನಿರ್ಮಾಣ ಸಚಿವ ಅಶೋಕ್ ಕುಮಾರ್ ಚೌಧರಿ ಆರೋಪಿಸಿದ್ದಾರೆ.

ಆರೋಪವನ್ನು ತಳ್ಳಿ ಹಾಕಿ, ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿರುವ ತೇಜಸ್ವಿ ಯಾದವ್, “ಕಳೆದ 20 ವರ್ಷಗಳಲ್ಲಿ ಕೇವಲ ಮೂರು ವರ್ಷಗಳ ಕಾಲ ಮಾತ್ರವೇ ನಿತೀಶ್‌ ಕುಮಾರ್ ಮಹಾಘಟಬಂಧನ್ ಭಾಗವಾಗಿದ್ದರು. ಉಳಿದ 17 ವರ್ಷಗಳ ಕಾಲ ಬಿಜೆಪಿ ಜೊತೆ ಸರ್ಕಾರ ನಡೆಸಿದ್ದಾರೆ. ರಾಜ್ಯದ ಮೂಲಸೌಯರ್ಕ ಕಾಮಗಾರಿಗಳಲ್ಲಿ ಬಿಜೆಪಿ-ಜೆಡಿಯು ಸರ್ಕಾರದ ಪಾತ್ರ ಹೆಚ್ಚಿದೆ. ಸೇತುವೆ ಕುಸಿತ ಘಟನೆಗಳ ಕುರಿತು ಸಂಪೂರ್ಣ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದ್ದಾರೆ.

“ಜೂನ್ 18ರಿಂದ ಬಿಹಾರದಲ್ಲಿ 12 ಸೇತುವೆಗಳು ಕುಸಿದಿವೆ. ಬಿಹಾರದಲ್ಲಿನ ಈ ಘಟನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಇಬ್ಬರೂ ಮೌನವಾಗಿದ್ದಾರೆ. ಉತ್ತಮ ಆಡಳಿತ ಮತ್ತು ಭ್ರಷ್ಟಾಚಾರ ಮುಕ್ತ ಸರ್ಕಾರದ ಪ್ರತಿಪಾದನೆಗಳು ಏನಾದವು? ರಾಜ್ಯ ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲಿ ಭ್ರಷ್ಟಾಚಾರ ಎಷ್ಟು ತಾಂಡವವಾಡುತ್ತಿದೆ ಎಂಬುದನ್ನು ಈ ಘಟನೆಗಳು ತೋರಿಸುತ್ತವೆ” ಎಂದು ತೇಜಸ್ವಿ ಆರೋಪಿಸಿದ್ದಾರೆ.

 

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ನಿಖಿಲ್ ಆನಂದ್, “ಬಿಹಾರದ ಯಾವುದೇ ಸೇತುವೆಯನ್ನು ದಾಟಲು ನನಗೆ ಭಯವಾಗುತ್ತಿದೆ. ಕಳೆದ 10 ದಿನಗಳಲ್ಲಿ ಅನೇಕ ಸೇತುವೆಗಳು ಕುಸಿದಿರುವುದು ಅಚ್ಚರಿ ಮೂಡಿಸಿದೆ. ಗಂಭೀರ ತನಿಖೆ ಅಗತ್ಯವಿದೆ. ಘಟನೆಗಳ ಹೊಣೆಯನ್ನು ನಿರ್ಮಾಣ ಕಂಪನಿಗಳೇ ಹೊರಬೇಕು. ಅವುಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಎಂಜಿನಿಯರ್‌ಗಳನ್ನು ಅಮಾನತುಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ”ಬುಧವಾರ ನಡೆದ ಪರಿಶೀಲನಾ ಸಭೆಯ ನಂತರ, ರಾಜ್ಯದ ಎಲ್ಲ ಹಳೆಯ ಸೇತುವೆಗಳ ಸಮೀಕ್ಷೆ ನಡೆಸಿ, ತಕ್ಷಣ ದುರಸ್ತಿ ಮಾಡಬೇಕಾದ ಸೇತುವೆಗಳನ್ನು ಗುರುತಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿನ ಸೇತುವೆಗಳು ಅಥವಾ ಕಾಸ್‌ವೇಗಳಿಗೆ ಸಂಬಂಧಿಸಿದ ನಿರ್ವಹಣಾ ನೀತಿಯನ್ನು ತಕ್ಷಣವೇ ಸಿದ್ಧಪಡಿಸಲು ಕೂಟ ಸೂಚಿಸಿದ್ದಾರೆ” ಎಂದು ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X