ಈ ದಿನ ಸಂಪಾದಕೀಯ | ವರ್ಷದಿಂದ ನಡೆಯುತ್ತಲೇ ಇರುವ ಅಂಬಾನಿ ಮದುವೆಯೂ, ಪೌಷ್ಟಿಕ ಆಹಾರ ಸಿಗದ 67 ಲಕ್ಷ ಶಿಶುಗಳೂ…

Date:

Advertisements
ಆಹಾರ ಕ್ಷೇತ್ರ ಕಾರ್ಪೊರೇಟ್‌ ಕುಳಗಳ ಕೈವಶವಾದ ನಂತರ ನಿರಂತರವಾಗಿ ಅಗತ್ಯ ವಸ್ತುಗಳ ಬೆಲೆಯೇರಿಕೆಯಾಗುತ್ತಿದೆ. ಇದರ ಪರಿಣಾಮವಾಗಿ ಬಡವರು ಬೇಕಾದಷ್ಟು ಆಹಾರ ಖರೀದಿಸುವುದು ಕಷ್ಟವಾಗಿದೆ. ಸರ್ಕಾರದಿಂದ ಉಚಿತ ಅಕ್ಕಿ ಸಿಕ್ಕಿದ ಮಾತ್ರಕ್ಕೆ ಅದು ಅಪೌಷ್ಟಿಕತೆ ನಿವಾರಿಸಲ್ಲ. ಹಾಲು ಹಣ್ಣು, ತರಕಾರಿ, ಬೇಳೆ- ಕಾಳು ಬೇಕು. ಅದನ್ನು ಕೊಳ್ಳಲು ಆರ್ಥಿಕ ಶಕ್ತಿಯೂ ಬೇಕು

 

ಒಂದು ಕಡೆ ಪ್ರಧಾನಿ ಮೋದಿಯವರ ದೋಸ್ತಿ ಏಷ್ಯಾದ ಎರಡನೇ ಶ್ರೀಮಂತ ಉದ್ಯಮಿ ರಿಲಯನ್ಸ್‌ ಸಮೂಹದ ಮುಖ್ಯಸ್ಥ ಮುಖೇಶ್‌ ಅಂಬಾನಿಯವರ ಸುಪುತ್ರ ಅನಂತ್‌ ಅಂಬಾನಿಯವರ ಮದುವೆಯ ಕಾರ್ಯಕ್ರಮಗಳು ಒಂದು ವರ್ಷದಿಂದ ಅದ್ಧೂರಿಯಾಗಿ ನಡೆಯುತ್ತಿವೆ. ತಮ್ಮ ಶ್ರೀಮಂತಿಕೆ, ಆಡಂಬರ ಪ್ರದರ್ಶನಕ್ಕೆ ಸಾವಿರಾರು ಕೋಟಿ ರೂಪಾಯಿ ಹಣದ ಹೊಳೆಯನ್ನೇ ಹರಿಸಲಾಗುತ್ತಿದೆ. ಮದುವೆಯ ಊಟಕ್ಕೆ 2,500 ಬಗೆಯ ಖಾದ್ಯ ಅಂತೆ! ಜುಲೈ 12ಕ್ಕೆ ಮದುವೆ ಸಮಾಪ್ತಿಯಾಗಲಿದೆ. ಅಂಬಾನಿಯ ಸಿರಿವಂತಿಕೆ ಹೆಚ್ಚಲು ಮೋದಿಯವರ ಶ್ರಮ ಅಪಾರ.

ಇತ್ತ ಮೋದಿಯವರು ತಮ್ಮ ಎರಡು ಅವಧಿಯಲ್ಲಿ ಭಾರತವನ್ನು ಐದನೇ ದೊಡ್ಡ ಆರ್ಥಿಕ ದೇಶವನ್ನಾಗಿ ಮಾಡಿದ್ದೇವೆ. ಮೂರನೇ ಅವಧಿಯಲ್ಲಿ ಜಪಾನ್‌ ಹಿಂದಿಕ್ಕಿ ಮೂರನೇ ಆರ್ಥಿಕತೆಯ ದೇಶವನ್ನಾಗಿಸುತ್ತೇವೆ ಎಂಬ ಬೊಗಳೆ ಬಿಡುತ್ತಾ ಓಡಾಡುತ್ತಿದ್ದಾರೆ. ಈ ಸುಳ್ಳು ಅಂಕಿಅಂಶವನ್ನು ಹೇಳಲು ಸಂಸತ್ತಿನಂತಹ ಅತಿ ದೊಡ್ಡ ಪ್ರಜಾಪ್ರಭುತ್ವದ ದೇವಾಲಯವನ್ನೂ ಅವರು ಬಳಸಿಕೊಳ್ಳಲು ಹೇಸುತ್ತಿಲ್ಲ. 81 ಕೋಟಿ ಬಡವರಿಗೆ ಉಚಿತ ರೇಷನ್‌ ಕೊಡುತ್ತಿದ್ದೇವೆ. ಕಾಂಗ್ರೆಸ್‌ ಎಪ್ಪತ್ತು ವರ್ಷಗಳಿಂದ “ಗರೀಬಿ ಹಠಾವೋ” ಘೋಷಣೆ ಮಾಡುತ್ತಲೇ ಬಂದಿತ್ತು. ಆದರೆ ಅದನ್ನು ನಿಜಕ್ಕೂ ಮಾಡುತ್ತಿರುವುದು ನಾವು ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆ ಬಡತನ ಪ್ರಮಾಣ ಕಡಿಮೆಯಾಗಿದೆ ಅಂತಾರೆ. ಕಡಿಮೆಯಾಗಿರುವುದು ಬಡತನ ಅಲ್ಲ, ಬಡವರ ಕಡೆಗಿನ ಕಾಳಜಿ ಕಡಿಮೆಯಾಗಿದೆ. ಮೋದಿ ಸರ್ಕಾರ ಹೇಳುತ್ತಿರುವುದೇ ಒಂದು. ವಾಸ್ತವ ಬೇರೆಯೇ ಇದೆ.

ಇದೀಗ ಬಂದಿರುವ ಆಘಾತಕಾರಿ ಸುದ್ದಿ ಏನೆಂದರೆ, ಭಾರತದಲ್ಲಿ ಅಂದಾಜು 67 ಲಕ್ಷ ಶಿಶುಗಳಿಗೆ ಆಹಾರವೇ ಸಿಗುತ್ತಿಲ್ಲ. ಎರಡು ತಿಂಗಳಿನಿಂದ ಇಪ್ಪತ್ತನಾಲ್ಕು ತಿಂಗಳವರೆಗಿನ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ. ಅವು ಕೇವಲ ಎದೆ ಹಾಲಿನಿಂದ ಬದುಕಿವೆ. ಇದು ಸುಸ್ಥಿರ ಆಹಾರ ಪದ್ಧತಿಗಳ ಅಂತಾರಾಷ್ಟ್ರೀಯ ತಜ್ಞರ ತಂಡ(ಜೆಎಎಂಎ) 92 ದೇಶಗಳಲ್ಲಿ ನಡೆಸಿದ ಸಮೀಕ್ಷೆಯಿಂದ ಬಹಿರಂಗಗೊಂಡಿದೆ. ಆಹಾರವಿಲ್ಲದ ಮಕ್ಕಳ ಪ್ರಮಾಣದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಗಿನಿ, ಮಾಲಿ ನಂತರದ ದೇಶವೇ ನಮ್ಮದು. ಇದು ನಾಚಿಕೆಗೇಡಿನ ಸಂಗತಿ ಅಲ್ಲವೇ ಮೋದಿಯವರೇ?

Advertisements

ಮಗು ಜನಿಸಿ ಆರು ತಿಂಗಳಿಂದ ಗಟ್ಟಿ ಆಹಾರ ಕೊಡಲು ಶುರು ಮಾಡಬೇಕು. ಪೌಷ್ಟಿಕ ಆಹಾರ ಕೊಡುವುದು ಶಿಶುಮರಣ ಪ್ರಮಾಣ ತಡೆಯುವ ನಿಟ್ಟಿನಲ್ಲಿ ಅಗತ್ಯ. ತಾಯಿ ಮಗು ಇಬ್ಬರೂ ಪೌಷ್ಟಿಕ ಆಹಾರ ಪಡೆದು ಸದೃಢವಾಗಿದ್ದರೆ ಆ ಕುಟುಂಬ ಸ್ವಸ್ಥವಾಗಿರುತ್ತದೆ. ಆದರೆ, ಸರ್ಕಾರ ನಡೆಸುವವರಿಗೆ ಇದ್ಯಾವ ಕಾಳಜಿಯೂ ಇಲ್ಲ. ಆಹಾರ ಕ್ಷೇತ್ರ ಕಾರ್ಪೊರೇಟ್‌ ಕುಳಗಳ ಕೈವಶವಾದ ನಂತರ ನಿರಂತರವಾಗಿ ಅಗತ್ಯ ವಸ್ತುಗಳ ಬೆಲೆಯೇರಿಕೆಯಾಗುತ್ತಿದೆ. ಇದರ ಪರಿಣಾಮವಾಗಿ ಬಡವರು ಬೇಕಾದಷ್ಟು ಆಹಾರ ಖರೀದಿಸುವುದು ಕಷ್ಟವಾಗಿದೆ. ಸರ್ಕಾರದಿಂದ ಉಚಿತ ಅಕ್ಕಿ ಸಿಕ್ಕಿದ ಮಾತ್ರಕ್ಕೆ ಅದು ಅಪೌಷ್ಟಿಕತೆ ನಿವಾರಿಸಲ್ಲ. ಅದರ ಜೊತೆಗೆ ಹಾಲು, ಹಣ್ಣು, ಸೊಪ್ಪು,ತರಕಾರಿ, ಬೇಳೆ-ಕಾಳು ಮುಂತಾದ ಪೌಷ್ಟಿಕ ಆಹಾರವೂ ಆರೋಗ್ಯಕರ ದೇಹಕ್ಕೆ ಬೇಕು. ಅವುಗಳನ್ನು ಕೊಳ್ಳಲು ಆರ್ಥಿಕ ಶಕ್ತಿ ಬೇಕು. ಇವೆಲ್ಲ ದಿನದ ದುಡಿಮೆ ನಂಬಿ ಬದುಕುವ ಕುಟುಂಬಗಳಿಗೆ ಅಸಾಧ್ಯ.

ಅತಿ ಹೆಚ್ಚು ಯುವಜನರಿರುವ ದೇಶದಲ್ಲಿ ಒಂದು ಕಡೆ ಪದವಿಗೆ ಸರಿಯಾದ ಉದ್ಯೋಗ ಸಿಗದೇ ಯುವ ಸಮೂಹ ಖಿನ್ನತೆಗೆ ಜಾರುತ್ತಿದೆ. ಭವಿಷ್ಯದ ಯುವ ಭಾರತ ಶಿಶು ಅವಸ್ಥೆಯಲ್ಲೇ ನಿತ್ರಾಣಗೊಂಡು ಅನಾರೋಗ್ಯಕರ ಸಮಾಜದತ್ತ ಕುಂಟುತ್ತಾ ಸಾಗಬೇಕಿದೆ. ಇನ್ನು ಎಂಟು ಟ್ರಿಲಿಯನ್‌ ಆರ್ಥಿಕತೆ, ಬಲಿಷ್ಠ ಆರ್ಥಿಕತೆ ಎನ್ನುವುದಕ್ಕೆ ಯಾವ ಅರ್ಥ ಇದೆ? ಇದು 140 ಕೋಟಿ ಜನಸಂಖ್ಯೆ ಇರುವ ದೊಡ್ಡ ದೇಶದಲ್ಲಿ ಆಡಳಿತ ಚುಕ್ಕಾಣಿ ಹಿಡಿದವರು ಎಂಥವರು ಎಂಬುದರ ಮೇಲೆ ಈ ಎಲ್ಲಾ ಬೆಳವಣಿಗೆಗಳು ನಿಂತಿವೆ. ಸದ್ಯಕ್ಕೆ ಬಿಜೆಪಿಯ ಅಗ್ರನಾಯಕ ಪ್ರಧಾನಿ ಮೋದಿ ಅವರು ಎಲ್ಲಾ ಅಭಿವೃದ್ಧಿಯನ್ನೂ ಬಾಯಿ ಮಾತಿನಲ್ಲೇ ಆಗು ಮಾಡುತ್ತಿದ್ದಾರೆ. ಯಾವುದೇ ಸಮೀಕ್ಷೆ, ಸೂಚ್ಯಂಕ ಬಂದ ಕೂಡಲೇ ಅದನ್ನು ಸಂಬಂಧಪಟ್ಟವರು ಗಂಭೀರವಾಗಿ ಪರಿಗಣಿಸಿ ಸುಧಾರಿಸುವ ಕಡೆಗೆ ಕಾರ್ಯಯೋಜನೆ ರೂಪಿಸುತ್ತಾರೆ. ಆದರೆ, ಈ ಹತ್ತು ವರ್ಷಗಳಲ್ಲಿ ಭಾರತ ಯಾವ್ಯಾವ ಕ್ಷೇತ್ರದಲ್ಲಿ ಕಳಪೆಯಾಗಿದೆ ಎಂದು ತೋರಿಸುವ ವರದಿ ಬಂದಾಗಲೆಲ್ಲ ಅವನ್ನು ಷಡ್ಯಂತ್ರ, ಪೂರ್ವಾಗ್ರಹಪೀಡಿತ ಎಂದು ತಿರಸ್ಕರಿಸುವ ಚಾಳಿ ಹೆಚ್ಚಾಗಿದೆ.

ಮೋದಿ ಅಧಿಕಾರಾವಧಿಯಲ್ಲಿ ದೇಶದಲ್ಲಿ ಮಹಿಳಾ ಸುರಕ್ಷತೆ, ಪ್ರವಾಸಿಗರ ಸುರಕ್ಷತೆ ಕುಸಿದಿದೆ. ವಾಕ್‌ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ ಕುಸಿದಿದೆ. ಬಡತನ, ನಿರುದ್ಯೋಗ ಪ್ರಮಾಣ ಹೆಚ್ಚಿದೆ ಎಂಬ ವರದಿಗಳು ಸರ್ಕಾರದ ಅಂಕಿ ಅಂಶ ಆಧರಿಸಿಯೇ ಬರುತ್ತಿವೆ. ಆದರೂ ಮೋದಿ ಸರ್ಕಾರ ಅದನ್ನು ಒಪ್ಪಲು ಸಿದ್ಧವಿಲ್ಲ. ತಾವು ಉದ್ಯೋಗ ಸೃಷ್ಟಿ ಮಾಡಿದ್ದೇವೆ, ಬಡತನ ರೇಖೆಯಿಂದ ಕೆಳಗಿದ್ದವರನ್ನು ಮೇಲಕ್ಕೆ ಎತ್ತಿದ್ದೇವೆ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಮಾಣ ಕಡಿಮೆಯಾಗಿದೆ, ನಮ್ಮ ಅವಧಿಯಲ್ಲಿ ಈಶಾನ್ಯ ರಾಜ್ಯಗಳಲ್ಲಿ ಹಿಂಸಾಚಾರ ಇಳಿಮುಖವಾಗುತ್ತಾ ಸಾಗಿದೆ (ಮಣಿಪುರ ಒಂದೂವರೆ ವರ್ಷಗಳಿಂದ ಹೊತ್ತಿ ಉರಿಯುತ್ತಿದ್ದರೂ), ದೇಶದಲ್ಲಿ ಉಗ್ರರನ್ನು ಮಟ್ಟ ಹಾಕಿದ್ದೇವೆ, ಭಯೋತ್ಪಾದನೆ ನಿಗ್ರಹಿಸಿದ್ದೇವೆ ಎಂದು ಸತ್ಯದ ತಲೆಯ ಮೇಲೆ ಹೊಡೆದು ಹೇಳುವುದಕ್ಕೆ ಅವರಿಗೆ ಯಾವುದೇ ಮುಜುಗರವಿಲ್ಲ.

2030ರ ವೇಳೆಗೆ ವಿಶ್ವದಲ್ಲಿ ಹಸಿವಿನ ಪ್ರಮಾಣವನ್ನು ಸಂಪೂರ್ಣವಾಗಿ ನಿವಾರಿಸುವ ಗುರಿಯನ್ನು ವಿಶ್ವಸಂಸ್ಥೆ ಹೊಂದಿದೆ. ಇದರ ಭಾಗವಾಗಿ ಇದೇ ಜು. 8ರಿಂದ 17ರವರೆಗೆ ವಿಶ್ವಸಂಸ್ಥೆಯು ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದ ಉನ್ನತಮಟ್ಟದ ರಾಜಕೀಯ ಸಭೆಯನ್ನು ಆಯೋಜಿಸಿದೆ.

ಬಡ ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಸುವುದು ಜವಾಬ್ದಾರಿಯಿರುವ ಸರ್ಕಾರವೊಂದರ ಪ್ರಮುಖ ಆದ್ಯತೆಯಾಗಿರಬೇಕು. ಡಾ ಮನಮೋಹನ್‌ ಸಿಂಗ್‌ ಸರ್ಕಾರ ಆಹಾರ ಭದ್ರತಾ ಕಾಯ್ದೆ ತಂದ ಪರಿಣಾಮವಾಗಿ ಉಚಿತ ಆಹಾರ ಪೂರೈಕೆ ಯೋಜನೆಗಳು ಜಾರಿಯಾಗಿವೆ. 2013ರಲ್ಲಿ ಸಿದ್ದರಾಮಯ್ಯ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನವೇ ಅನ್ನಭಾಗ್ಯ ಉಚಿತ ಅಕ್ಕಿ ಯೋಜನೆ ಜಾರಿಗೆ ತಂದಿದ್ದರು. ಪ್ರತಿಯೊಬ್ಬರಿಗೆ ಮಾಸಿಕ ಹತ್ತು ಕೇಜಿ ಅಕ್ಕಿ ಕೊಡುವ ಕಾಂಗ್ರೆಸ್‌ನ ಯೋಜನೆ ಸರ್ಕಾರ ಬದಲಾದ ನಂತರ ಏಳು, ನಂತರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಐದಕ್ಕೆ ಇಳಿದು, ಬಡವರು ಅರೆಹೊಟ್ಟೆಯಲ್ಲಿರುವಂತೆ ಮಾಡಿದ್ದರು.

ಕಳೆದ ವರ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ತಲಾ ಹತ್ತು ಕೆ.ಜಿ ಅಕ್ಕಿ ಕೊಡುವ ಘೋಷಣೆ ಮಾಡಿದ್ದರು. ಎಫ್‌ಸಿಐಯಿಂದ ಹಣಕೊಟ್ಟು ಖರೀದಿಸಿ ಬಡವರಿಗೆ ಉಚಿತ ನೀಡುವ ಸರ್ಕಾರದ ಯೋಜನೆಗೆ ಕೇಂದ್ರದಲ್ಲಿ ಸಾಕಷ್ಟು ಅಕ್ಕಿ ಸಂಗ್ರಹ ಇದ್ದರೂ ಕೊಡದೇ ರಾಜಕೀಯ ಮಾಡಿದವರು ಮೋದಿ. ಸರಿಯಾದ ನಿರ್ವಹಣೆ ಇಲ್ಲದೇ ಟನ್‌ಗಟ್ಟಲೆ ಅಕ್ಕಿ ಕೊಳೆತು ನಾರುತ್ತಿದ್ದರೂ ಅಕ್ಕಿ ಕೊಡಲು ನಿರಾಕರಿಸಿದರು. ನಂತರ ಅದೇ ಅಕ್ಕಿಯನ್ನು ಖಾಸಗಿ ಮಾರುಕಟ್ಟೆಗೆ ಮಾರಿದ್ದರು. ಅಷ್ಟೇ ಅಲ್ಲ ಚುನಾವಣೆ ಘೋಷಣೆಯಾಗುವ ಮುನ್ನ ಭಾರತ್‌ ರೈಸ್‌ ಹೆಸರಿನಲ್ಲಿ ಕೆ.ಜಿ ಗೆ 29 ರೂಪಾಯಿಯಂತೆ  ಮಾರಾಟ ಮಾಡಿದ್ದರು. ಭಾರತ್‌ ರೈಸ್‌ ತಲುಪಿದ್ದು ಬಿಜೆಪಿಯವರಿಗೆ ಮಾತ್ರ ಎಂಬ ಆರೋಪವಿದೆ. ಯಾಕೆಂದರೆ ಲಾರಿಗಳಲ್ಲಿ ಮೂಟೆ ತುಂಬಿ ತಂದು ಬಿಜೆಪಿ ಶಾಸಕರು, ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ತಮಗೆ ಬೇಕಾದಷ್ಟು ಅಕ್ಕಿ ಖರೀದಿಸಿ ಕೊಂಡೊಯ್ದಿದ್ದರು. ಬಡವರಿಗೆ ಆ ಅಕ್ಕಿ ತಲುಪಿಯೇ ಇಲ್ಲ. ಈಗಲೂ ಭಾರತ್‌ ರೈಸ್‌ ಮಾರಾಟ ಇದೆಯೇ, ಎಲ್ಲಿ ಸಿಗುತ್ತದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇಂತಹ ಗಿಮಿಕ್‌ ಮಾಡುತ್ತ ರಾಜಕೀಯ ಕಾರ್ಯಸಾಧನೆ ಮಾಡುವುದಕ್ಕೆ ಬಡವರ ಆಹಾರವನ್ನೂ ನುಂಗುವುದಕ್ಕೆ ಹೇಸುವವರಲ್ಲ.

ಮೋದಿಯವರ ವಿಕಸಿತ ಭಾರತದಲ್ಲಿ ಕೆಲವು ಉದ್ಯಮಿಗಳು ಬಿಲಿಯನೇರ್‌ಗಳಾಗಿದ್ದಾರೆ. ಕೋಟ್ಯಧಿಪತಿಗಳ ಸಂಖ್ಯೆ ಹೆಚ್ಚಿದೆ. ಇದು ಸಾಧನೆಯೇ? ಖ್ಯಾತ ಆರ್ಥಿಕ ತಜ್ಞ ಪರಕಾಲ ಪ್ರಭಾಕರ ಅವರು ಹೇಳಿದಂತೆ ನವ ಭಾರತದಲ್ಲಿ ದೇಶದ ಶೇ 40ರಷ್ಟು ಸಂಪತ್ತು ಕೇವಲ 1% ಜನರ ಕೈಯಲ್ಲಿದೆ. 24% ಯುವ ನಿರುದ್ಯೋಗಿಗಳಿದ್ದಾರೆ. ಆದರೂ ಬಡತನ ನಿವಾರಿಸಿದ್ದೇವೆ. ದೇಶ ಅಭಿವೃದ್ಧಿ ಕಂಡಿದೆ ಎಂದು ತಮ್ಮನ್ನು ತಾವೇ ಹೊಗಳಿಕೊಳ್ಳುತ್ತಿದ್ದಾರೆ.

ಮೂರನೇ ಅವಧಿಗೆ ದೇಶದ ಚುಕ್ಕಾಣಿ ಹಿಡಿದ ಮೋದಿಯವರು ಬೊಗಳೆ ಬಿಡುವುದು ಬಿಟ್ಟು, ಇಂತಹ ವಾಸ್ತವ ಸಮಸ್ಯೆಯನ್ನು ನಿವಾರಿಸಲು ಪ್ರಯತ್ನಿಸಿದರೆ ಕಡೇ ಪಕ್ಷ ಹಸಿದ ಮಕ್ಕಳಿಗೆ ಪೌಷ್ಟಿಕ ಆಹಾರವಾದರೂ ಸಿಕ್ಕೀತು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

Download Eedina App Android / iOS

X