ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ಬಿಜೆಪಿಯನ್ನು ಸೋಲಿಸಿದಂತೆಯೇ ಮುಂದಿನ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಬಿಜೆಪಿಯನ್ನು ಪಕ್ಷವು ಸೋಲಿಸಲಿದೆ ಎಂದು ಲೋಕಸಭಾ ವಿಪಕ್ಷ ನಾಯಕ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಗುಜರಾತ್‌ನಲ್ಲಿರುವ ರಾಹುಲ್ ಗಾಂಧಿ ಅಹಮದಾಬಾದ್‌ನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. “ಅವರು (ಬಿಜೆಪಿ) ನಮಗೆ ಬೆದರಿಕೆ ಹಾಕಿದರು. ನಮ್ಮ ಕಚೇರಿಗೆ ಹಾನಿ ಮಾಡಿದರು. ಈ ಮೂಲಕ ಸವಾಲು ಹಾಕಿದರು. ನಮ್ಮ ಕಚೇರಿಗೆ ಹಾನಿ ಮಾಡಿದಂತೆ, ನಾವು ಅವರ ಸರ್ಕಾರ ಆಡಳಿತವನ್ನು ಕೊನೆಗಾಣಿಸಲು ಹೊರಟಿದ್ದೇವೆ. ಗುಜರಾತ್‌ನಲ್ಲಿ ಕಾಂಗ್ರೆಸ್ ಪ್ರಬಲವಾಗಿ ಸ್ಪರ್ಧಿಸುತ್ತದೆ ಮತ್ತು ನರೇಂದ್ರ ಮೋದಿಯನ್ನು ಸೋಲಿಸುತ್ತದೆ. ಅಯೋಧ್ಯೆಯಲ್ಲಿ ಬಿಜೆಪಿಯನ್ನು ಸೋಲಿಸಿದಂತೆ ಗುಜರಾತ್‌ನಲ್ಲಿಯೂ ಬಿಜೆಪಿಯನ್ನು ಸೋಲಿಸುತ್ತೇವೆ” ಎಂದು ಹೇಳಿದ್ದಾರೆ.
“ಕಾಂಗ್ರೆಸ್ ಗುಜರಾತ್ಅನ್ನು ಗೆಲ್ಲುತ್ತದೆ. ರಾಜ್ಯದಿಂದ ಪಕ್ಷವು ಹೊಸ ಅಧ್ಯಾಯವನ್ನು ಆರಂಭಿಸುತ್ತದೆ” ಎಂದು ರಾಹುಲ್ ಹೇಳಿದ್ದಾರೆ.
“ಪ್ರಧಾನಿ ಮೋದಿ ಅವರು ಅಯೋಧ್ಯೆಯಿಂದ ಸ್ಪರ್ಧಿಸಲು ಬಯಸಿದ್ದರು. ಆದರೆ ಅವರ ಸರ್ವೇಗಳು ಸೋಲಿನ ಬಗ್ಗೆ ಸೂಚನೆ ನೀಡಿದವು ಮತ್ತು ಅಲ್ಲಿ ಸ್ಪರ್ಧಿಸದಂತೆ ಸಲಹೆ ನೀಡಿದವು. ಮೋದಿ ಅಯೋಧ್ಯೆಯಲ್ಲಿ ಸ್ಪರ್ಧಿಸಿದರೆ ಸೋಲುತ್ತಾರೆ. ಅವರ ರಾಜಕೀಯ ಜೀವನ ಕೊನೆಗೊಳ್ಳುತ್ತದೆ ಎಂದು ಅವರ ಆಂತರಿಕ ಸಮೀಕ್ಷೆಗಳೇ ಹೇಳಿದ್ದವು” ವಿಪಕ್ಷ ನಾಯಕ ಹೇಳಿದ್ದಾರೆ.