ಪೋಕ್ಸೊ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿರುವ ಕಮಲಾಪುರ ವೃತ್ತ ನಿರೀಕ್ಷಕ ನಾರಾಯಣ ಮತ್ತು ಎಎಸ್‌ಪಿ ಬಿಂದುರಾಣಿ ವಿರುದ್ಧ ಶಿಸ್ತು ಕ್ರಮ ಜರುಗಿಸಿ, ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇರೊಬ್ಬ ತನಿಖಾಧಿಕಾರಿಯನ್ನು ನೇಮಿಸುವಂತೆ ಒತ್ತಾಯಿಸಿ ಸತ್ಯಶೋಧಕ ಸಮಿತಿಯಿಂದ ಪ್ರತಿಭಟನೆ ನಡೆಸಿದರು.
ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಿಂದ ಎಸ್‌ಪಿ ಕಚೇರಿವರೆಗೆ ಬೃಹತ್ ಪ್ರತಿಭಟನೆ ನಡೆಸಿದ ಸಂಘಟನಾಕಾರರು ಈಶಾನ್ಯ ವಲಯ ಪೋಲೀಸ್ ಮಹಾನಿರೀಕ್ಷಕರಿಗೆ ಮನವಿ ಪತ್ರ ಸಲ್ಲಿಸಿದರು.
“ಕಲಬುರಗಿ ಜಿಲ್ಲೆಯ ಕಿಣ್ಣಿ ಸರ್ಫ್ಯೂಸ್ ಗ್ರಾಮದ ಉದಯಕುಮಾರ ಎಂಬಾತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣವು ಕಮಲಾಪುರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಕಲಬುರಗಿ ಜಿಲ್ಲಾ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ. ಸದರಿ ಪೋಕ್ಸೊ ಪ್ರಕರಣ ಹಿಂಪಡೆಯುವಂತೆ ಆರೋಪಿಗಳು ಅಕ್ರಮಕೂಟ ರಚಿಸಿಕೊಂಡು ಸಂತ್ರಸ್ತ ಕುಟುಂಬದ ಮೇಲೆ ಹಲ್ಲೆ ಮಾಡಿದ್ದು,ಅವರ ವಿರುದ್ಧವೇ ದೂರು ದಾಖಲಿಸಿದ್ದಾರೆ. ಪ್ರಕರಣ ಪರಿಶೀಲಿಸದ ಪೊಲೀಸ್ ಇಲಾಖೆ ಸಂತ್ರಸ್ತ ಕುಟುಂಬದ ಮೇಲೆಯೇ ಪ್ರಕರಣ ದಾಖಲಿಸಿ ಕರ್ತವ್ಯಲೋಪ ಎಸಗಿದ್ದಾರೆ” ಎಂದು ಆರೋಪಿಸಿದರು.
“ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾಗಿರುವ ಉದಯಕುಮಾರ ಎಂಬಾತನನ್ನೇ ಕಿಣ್ಣಿ ಸರ್ಫ್ಯೂಸ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅತಿಥಿ ಶಿಕ್ಷಕರ ಹುದ್ದೆಗೆ ನೇಮಕ ಮಾಡಿಕೊಂಡಿದ್ದಾರೆ. ಗ್ರಾಮಸ್ಥರು ಆರೋಪಿಯನ್ನು ಶಿಕ್ಷಕ ಹುದ್ದೆಗೆ ನೇಮಕ ಮಾಡಿಕೊಳ್ಳಬಾರದೆಂದು ದೂರು ನೀಡಿದ್ದರಿಂದ ಕುಪಿತಗೊಂಡ ಉದಯಕುಮಾರ ಕುಟುಂಬಸ್ಥರು ಕೂಡಿಕೊಂಡು ಗ್ಯಾನಪ್ಪ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಜುಲೈ 1ರಂದು ಪ್ರಕರಣ ದಾಖಲಾಗಿದೆ. ಆದರೆ, ಕಮಲಾಪುರ ವೃತ್ತ ನಿರೀಕ್ಷಕ ನಾರಾಯಣ ಮತ್ತು ಎಎಸ್‌ಪಿ ಬಿಂದುರಾಣಿ ಅವರು ಕಾಂಗ್ರೆಸ್ ಮುಖಂಡ ಮಲ್ಲಿನಾಥ ಪಾಟೀಲ್ ಸೊಂತ ಇವರ ಒತ್ತಡಕ್ಕೆ ಮಣಿದು ಆರೋಪಿತ ಪೋಕ್ಸೊ ಮತ್ತು ಹಲ್ಲೆ ಪ್ರಕರಣಲ್ಲಿರುವ ಉದಯಕುಮಾರ ನೂಲಕರ ಎಂಬಾತನನ್ನು ಬಂಧಿಸದೇ ರಕ್ಷಣೆ ಮಾಡುತ್ತಿದ್ದು, ಕರ್ತವ್ಯಲೋಪ ಎಸಗಿದ್ದಾರೆ. ಅಲ್ಲದೆ ಪೋಕ್ಸೊ ಪ್ರಕರಣದಲ್ಲಿ ನೊಂದ ವಿದ್ಯಾರ್ಥಿನಿ ಮತ್ತು ಅವರ ಕುಟುಂದ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ” ಎಂದರು.
“ಸದರಿ ಪ್ರಕರಣದ ಸತ್ಯಾಸತ್ಯತೆ ಅರಿಯದೆ ರಾಜಕೀಯ ನಾಯಕ ಮಲ್ಲಿನಾಥ ಪಾಟೀಲ್ ಸೊಂತ ಅವರ ಒತ್ತಡಕ್ಕೆ ಮಣಿದು ಪೋಲೀಸ್ ಅಧಿಕಾರಿಗಳು ಕರ್ತವ್ಯ ಲೋಪವೆಸಗಿರುವುದು ಖಂಡನೀಯ” ಎಂದರು.
“ಈ ಎಲ್ಲ ಪ್ರಕರಣಗಳ ಸಮಗ್ರ ತನಿಖೆ ನಡೆಸುವಂತೆ ದಕ್ಷ ತನಿಖಾಧಿಕಾರಿಯನ್ನು ನೇಮಕ ಮಾಡಬೇಕು. ಕರ್ತವ್ಯಲೋಪ ಎಸಗಿರುವ ಪೊಲೀಸ್ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ಸುಳ್ಳು ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕು. ಪೋಕ್ಸೊ ಪ್ರಕರಣದಲ್ಲಿ ದಾಖಲಾಗಿರುವ ಆರೋಪಿತರನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವಿವಿಧ ಬೇಡಿಕೆ ಈಡೇರಿಕೆಗೆ ಅನುದಾನಿತ ಪಿಂಚಣಿ ವಂಚಿತ ನೌಕರರ ಆಗ್ರಹ
ಈ ಸಂದರ್ಭದಲ್ಲಿ ದಲಿತ ಮುಖಂಡರುಗಳಾದ ಸೂರ್ಯಕಾಂತ ನಿಂಬಾಳಕರ, ಎ ಬಿ ಹೊಸಮನಿ, ಜಿಲ್ಲಾಧ್ಯಕ್ಷ ಸೂರ್ಯಕಾಂತ ಜಿಡಗಾ, ಭೀಮ ಅರ್ಮಿ ಅಬ್ದುಲ್ ರಾವಣ ಘನಿ, ಸಂದೀಪ್ ಸೇರಿದಂತೆ ಇತರರು ಇದ್ದರು.