ಗುಜರಾತಿನ ಸೂರತ್‌ನಲ್ಲಿ ಶನಿವಾರ ಸಂಜೆ ಆರು ಅಂತಸ್ತಿನ ಕಟ್ಟಡ ಕುಸಿದಿದ್ದು, ಈವರೆಗೆ ಏಳು ಮೃತದೇಹಗಳನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೂರತ್‌ನ ಪಾಲ್ ಪ್ರದೇಶದಲ್ಲಿರುವ ವಸತಿ ಕಟ್ಟಡ ಕುಸಿದಿದೆ. ಕಟ್ಟಡ ಕುಸಿದು ಬಿದ್ದ ಕೂಡಲೇ ಓರ್ವ ಮಹಿಳೆಯನ್ನು ರಕ್ಷಿಸಲಾಗಿದ್ದು, ಓರ್ವ ಪುರುಷನ ದೇಹವನ್ನು ಹೊರತೆಗೆಯಲಾಗಿತ್ತು. ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಇತರ ಆರು ಮಂದಿಯ ಮೃತದೇಹಗಳನ್ನು ಹೊರತೆಗೆದಿದ್ದಾರೆ ಎಂದು ವರದಿಯಾಗಿದೆ.
ಸೂರತ್ ಡಿಸಿಪಿ ರಾಜೇಶ್ ಪರ್ಮಾರ್, “ಕಳೆದ 12 ಗಂಟೆಗಳಿಂದ ಎನ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ದಳದ ತಂಡಗಳು ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಒಬ್ಬ ಮಹಿಳೆಯನ್ನು ರಕ್ಷಿಸಲಾಗಿದೆ. ಏಳು ಮೃತ ದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ” ಎಂದು ಹೇಳಿದ್ದಾರೆ.
ಅವಶೇಷಗಳನ್ನು ತೆಗೆಯುವ ಕಾರ್ಯಾಚರಣೆ ಮುಂದುವರಿದಿದೆ. ಆದರೆ, ಇನ್ನೂ ಕೆಲವು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು ಹೇಳಲಾಗುವುದಿಲ್ಲ ಎಂದು ಸಚಿನ್ ಜಿಐಡಿಸಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಜಿಗ್ನೇಶ್ ಚೌಧರಿ ಹೇಳಿದ್ದಾರೆ.
ಈ ಕಟ್ಟಡವನ್ನು 2016-17ರಲ್ಲಿ ನಿರ್ಮಿಸಲಾಗಿದೆ ಎಂದು ಸೂರತ್ ಪೊಲೀಸ್ ಆಯುಕ್ತ ಅನುಪಮ್ ಸಿಂಗ್ ಗೆಹ್ಲೋಟ್ ತಿಳಿಸಿದ್ದಾರೆ.