ಖಾಸಗಿ ಟೆಲಿಕಾಂ ಕಂಪನಿಗಳು ಮೊಬೈಲ್ ರೀಚಾರ್ಜ್ ಬೆಲೆ ಹೆಚ್ಚಳ ಮಾಡಿರುವುದನ್ನು ಕೂಡಲೇ ಹಿಂಪಡೆಯಲು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಕ್ರಮ ಕೈಗೊಳ್ಳಬೇಕು ಎಂದು ಡಿಎಸ್ಎಸ್(ನಾಗವಾರ ಬಣ) ಬಾಗಲಕೋಟೆ ಜಿಲ್ಲಾ ಸಂಘಟನಾ ಸಂಚಾಲಕ ಹನಮಂತ ಚಿಮ್ಮಲಗಿ ಆಗ್ರಹಿಸಿದ್ದಾರೆ.
ಬಾಗಲಕೋಟೆ ನಗರದಲ್ಲಿ ಪತ್ರಿಕೆ ಕೇಳಿಕೆ ನೀಡಿರುವ ಇವರು, “ಪ್ರಸ್ತುತ ದಿನಗಳಲ್ಲಿ ಇಂಟರ್‌ನೆಟ್, ಮೊಬೈಲ್ ಡೇಟಾ ಮತ್ತು ರೀಜಾರ್ಜ್ ಜನರ ಜೀವನದ ಅನಿವಾರ್ಯ ಭಾಗವಾಗಿದೆ. ಮತ್ತೊಂದೆಡೆ ನಿರುದ್ಯೋಗ ಮತ್ತು ಹಣದುಬ್ಬರದಿಂದಾಗಿ ದಿನಕ್ಕೆ ಎರಡು ಹೊತ್ತಿನ ಊಟಕ್ಕೂ ಜನಸಾಮಾನ್ಯರು ಪರದಾಡುವಂತಾಗಿದೆ. ಹಾಗಾಗಿ ಮೊಬೈಲ್ ಡೇಟಾ ಇಂದು ಎಷ್ಟು ಅವಶ್ಯವಾಗಿದೆ ಎಂದರೆ ಮೊಬೈಲ್ ರೀಚಾರ್ಜಗಾಗಿ ಹಣವನ್ನು ಉಳಿಸಲು ಹಸಿವಿನಿಂದ ಇರುವ ಅನಿವಾರ್ಯತೆಗೆ ಜನರು ಒಳಗಾಗಿದ್ದಾರೆ” ಎಂದರು.
“ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಲು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ತಕ್ಷಣವೇ ಮಧ್ಯ ಪ್ರವೇಶಿಸಿ, ರೀಚಾರ್ಜ್ ಮತ್ತು ಡೇಟಾ ಶುಲ್ಕಗಳಲ್ಲಿನ ಅನ್ಯಾಯಯುತವಾದ ಹೆಚ್ಚಳವನ್ನು ಸಂಪೂರ್ಣವಾಗಿ ಹಿಂಪಡೆಯಲು ಖಾಸಗಿ ಟೆಲಿಕಾಂ ಕಂಪನಿಗಳ ಮೇಲೆ ಒತ್ತಡ ಹೇರಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ರೈತನಿಗೆ ಭೂ ಪರಿಹಾರ ನೀಡುವಲ್ಲಿ ವಿಫಲ: ಟೂಡಾ ಕಚೇರಿಯ ಪೀಠೋಪಕರಣ ಜಪ್ತಿ
“ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿ ಬಿಸ್‌ಎನ್‌ಎಲ್ ನೆಟ್‌ವರ್ಕ್ ಅನ್ನು ಪುನರುಜ್ಜೀವನಗೊಳಿಸಲು ಮತ್ತು ಸಂವಹನ ಸೇವೆಗಳು ಕೈಗೆಟುಕುವ ದರದಲ್ಲಿ ದೊರೆಯುವಂತಾಗಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.