ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ(ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಇಂದು ರೋಹಿತ್ ಶರ್ಮಾ ಅವರ ಏಕದಿನ, ಟೆಸ್ಟ್ ನಾಯಕತ್ವದ ಭವಿಷ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಬಿಸಿಸಿಐ ವೆಬ್ಸೈಟ್ನಲ್ಲಿ ವಿಡಿಯೋ ಹಂಚಿಕೊಂಡಿರುವ ಜಯ್ ಶಾ, ರೋಹಿತ್ ಶರ್ಮಾ ನಾಯಕರಾಗಿ 2025ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಹಾಗೂ ಚಾಂಪಿಯನ್ಸ್ ಟ್ರೋಫಿಯ ತನಕ ಮುಂದುವರಿಯಲಿದ್ದಾರೆ. ಭಾರತವು ಮುಂದಿನ ವರ್ಷ ಎರಡು ಐಸಿಸಿ ಟೂರ್ನಮೆಂಟ್ಗಳನ್ನು ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2024ರ ಟಿ20 ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದ ಟೀಂ ಇಂಡಿಯಾವನ್ನು ಶ್ಲಾಘಿಸಿದ ಜಯ್ ಶಾ ಇನ್ನು ಒಂದು ವರ್ಷ ನಾಯಕರಾಗಿ ಮುಂದುವರಿಯಲಿದ್ದಾರೆ ಎಂದು ತಿಳಿಸಿದ್ದಾರೆ.
“ಕಳೆದ ವರ್ಷ ನವೆಂಬರ್ 23ರಂದು 10 ಪಂದ್ಯಗಳನ್ನು ಗೆದ್ದ ನಂತರ ನಾವು ಹೃದಯಗಳನ್ನು ಗೆದ್ದೆವು ಆದರೆ ಏಕದಿನ ವಿಶ್ವಕಪ್ ಜಯಿಸಲು ಸಾಧ್ಯವಾಗಲಿಲ್ಲ. ಜೂನ್ 29ರಂದು ನಾವು ಹೃದಯಗಳನ್ನು, ಟ್ರೋಫಿಯನ್ನು ಗೆದ್ದಿದ್ದೇವೆ. ಬಾರ್ಬೊಡೊಸ್ನಲ್ಲಿ ಭಾರತದ ಧ್ವಜವನ್ನು ಎತ್ತಿ ಹಿಡಿದ್ದೇವೆ. ನಮ್ಮ ನಾಯಕ ಅಲ್ಲಿ ಭಾರತದ ಧ್ವಜವನ್ನು ನೆಟ್ಟಿದ್ದಾರೆ” ಎಂದು ಜಯ್ ಶಾ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಐಸಿಸಿ ಟಿ20 ರ್ಯಾಂಕಿಂಗ್: ಆಲ್ರೌಂಡರ್ಗಳಲ್ಲಿ ಮೊದಲ ಸ್ಥಾನಕ್ಕೇರಿದ ಹಾರ್ದಿಕ್ ಪಾಂಡ್ಯ
“ ಗೆಲುವಿನ ನಂತರ ಮುಂದಿನ ಐಸಿಸಿ ಟೂರ್ನಿಗಳಾದ ವಿಶ್ವ ಟೆಸ್ಟ್ ಚಾಂಪಿಯನ್ಶಿಷ್ ಹಾಗೂ ಚಾಂಪಿಯನ್ಶಿಪ್ ಟ್ರೋಫಿಗಳನ್ನು ಜಯಿಸುವ ವಿಶ್ವಾಸದಲ್ಲಿ ನಮ್ಮ ತಂಡವಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ನಾವು ಚಾಂಪಿಯನ್ಗಳಾಗುತ್ತೇವೆ” ಎಂದು ತಿಳಿಸಿದ್ದಾರೆ.
ಈಗಾಗಲೇ ಟಿ20 ವಿಶ್ವಕಪ್ ಮಾದರಿಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ನಿವೃತ್ತಿ ಘೋಷಿಸಿದ್ದಾರೆ. ಈ ಮೂವರು ಹಿರಿಯ ಆಟಗಾರರು ಚಾಂಪಿಯನ್ಸ್ ಟ್ರೋಫಿಯ ತನಕ ಇರಲಿದ್ದಾರೆ ಎಂದು ಜಯ್ ಶಾ ಮಾಹಿತಿ ನೀಡಿದ್ದಾರೆ.
ಭಾರತದ ವಿಶ್ವಕಪ್ ವಿಜೇತ ಆಟಗಾರರು ಮುಂಬರುವ ಶ್ರೀಲಂಕಾ ವಿರುದ್ಧದ ಪ್ರವಾಸಕ್ಕೆ ಪುನಃ ಮರಳಲಿದ್ದು, ಜುಲೈ ಅಂತ್ಯದ ವೇಳೆಗೆ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ. ಹಿರಿಯ ಆಟಗಾರರೆಲ್ಲಲೂ ಮುಂದಿನ 12 ತಿಂಗಳುಗಳ ಕಾಲ ಟೆಸ್ಟ್ ಹಾಗೂ ಏಕದಿನ ಪಂದ್ಯಗಳ ಮೇಲೆ ಹೆಚ್ಚು ಗಮನ ನೀಡಲಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಪಟ್ಟಿಯಲ್ಲಿ ಭಾರತವು ಪ್ರಸ್ತುತ 9ರಲ್ಲಿ 6 ಗೆದ್ದು ಮೊದಲ ಸ್ಥಾನದಲ್ಲಿದೆ. ಈ ವರ್ಷ ಸ್ವದೇಶದಲ್ಲಿ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ವಿರುದ್ದ ಟೆಸ್ಟ್, ಆಸ್ಟ್ರೇಲಿಯಾದಲ್ಲಿ ಆಸೀಸ್ ವಿರುದ್ಧ 5 ಟೆಸ್ಟ್ ಆಡಲಿದೆ. 2025ರ ಫೆಬ್ರವರಿ-ಮಾರ್ಚ್ನಲ್ಲಿ ಏಕದಿನ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ.