ಸಂಸದ ಕೆ ಸುಧಾಕರ್ ಅಭಿನಂದನಾ ಸಮಾರಂಭದಲ್ಲಿ ಮದ್ಯ ಹಂಚಿಕೆ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿವೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಹೊರವಲಯದಲ್ಲಿರುವ ಬಾವಿಕೆರೆ ಗ್ರಾಮದ ಪ್ರಜ್ವಲ್ ರೇವಣ್ಣ ಅವರಿಗೆ ಸೇರಿದ ಜಮೀನಿನಲ್ಲಿ ಬಿಜೆಪಿ ಜೆಡಿಎಸ್ ಮುಖಂಡರು ಭಾನುವಾರ ಆಯೋಜಿಸಿದ್ದ ಮೈತ್ರಿಹಬ್ಬ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಸುಮಾರು ₹20 ಲಕ್ಷದ ಮದ್ಯ ಹಂಚಲಾಗಿದೆ ಎಂದು ತಿಳಿದುಬಂದಿದೆ.
ಬಿಜೆಪಿ ಮಾಜಿ ಶಾಸಕ ಎಂ ವಿ ನಾಗರಾಜು, ಜೆಡಿಎಸ್ ಮಾಜಿ ಶಾಸಕ ಶ್ರೀನಿವಾಸ್ ಮೂರ್ತಿ, ಬಿಜೆಪಿ ಮುಖಂಡ ಜಗದೀಶ್ ಚೌದರಿ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಜನರಿಗೆ ಮದ್ಯ ಹಂಚಿಕೆ ಮಾಡಲು ಅಬಕಾರಿ ಇಲಾಖೆ ಅನುಮತಿಯನ್ನೂ ಪಡೆದಿದ್ದಾರೆ.
ಕಾರ್ಯಕ್ರಮದ ಜಾಗದಲ್ಲಿ ಮಾತ್ರ ಮದ್ಯ ಹಂಚಿಕೆಗೆ ಅನುಮತಿ ನೀಡಲಾಗಿತ್ತು. ಅನುಮತಿಯನ್ನು ಮೀರಿ ಸಾರ್ವಜನಿಕವಾಗಿ ಮದ್ಯ ಹಂಚಿಕೆ ಮಾಡಲಾಗಿದೆ ಎನ್ನಲಾಗಿದ್ದು, ಸಾರ್ವಜನಿಕರ ವಿರೋಧಕ್ಕೆ ಕಾರಣವಾಗಿದೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ಸ್ಲಂ ವಿದ್ಯಾರ್ಥಿಗಳು ಬೌದ್ಧಿಕವಾಗಿ ಬೆಳೆಯಬೇಕು: ಚಿಂತಕ ಕೆ ದೊರೈರಾಜ್
ಈ ಕುರಿತು ಈ ದಿನ.ಕಾಮ್ ಬೆಂಗಳೂರು ಗ್ರಾಮಾಂತರ ಅಬಕಾರಿ ಡಿಎಸ್‌ಪಿಯವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯಿಸಿದ್ದು, “ಅಭಿನಂದನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೆಲವು ಷರತ್ತುಗಳೊಂದಿಗೆ ಒಂದು ದಿನದ ಮಟ್ಟಿಗೆ ಮದ್ಯ ಹಂಚಿಕೆಗೆ ಅನುಮತಿ ನೀಡಲಾಗಿತ್ತು. ಇಲಾಖೆ ಅನುಮತಿ ಮೇರೆಗೆ ಕಾರ್ಯಕ್ರಮಗಳಲ್ಲಿ ಮದ್ಯ ಹಂಚಲು ಎಲ್ಲರಿಗೂ ಅವಕಾಶ ಇದೆ” ಎಂದು ತಿಳಿಸಿದ್ದಾರೆ.
ಇಂಥಾ ಜನಪ್ರತಿನಿಧಿಗಳು ಅವ್ರಿಗೆ ತಕ್ಕಂತೆ ಪ್ರಜೆಗಳು ದೇಶ ಉದ್ಧಾರ ಆದಂತೆ,, ಶಿಸ್ತು ಸಂಸ್ಕಾರವಂತ ಪಕ್ಷದ ಸಂಸದರು