ಸೋಮವಾರ ಮುಂಜಾನೆ ಮುಂಬೈ ಮತ್ತು ಇಲ್ಲಿನ ಉಪನಗರಗಳಲ್ಲಿ ಭಾರೀ ಮಳೆ ಸುರಿದು, ಪ್ರಮುಖ ರಸ್ತೆಗಳು ಮತ್ತು ತಗ್ಗು ಪ್ರದೇಶಗಳಲ್ಲಿ ವ್ಯಾಪಕವಾಗಿ ಜಲಾವೃತಗೊಂಡು ಜನಜೀವನ ಅಸ್ಥವ್ಯಸ್ಥಗೊಂಡಿದೆ. ನಗರದ ವಿವಿಧೆಡೆ 300 ಮಿಲಿ ಮೀಟರ್‌ಗೂ ಅಧಿಕ ಮಳೆಯಾಗಿದೆ ಎಂದು ಪೌರಾಯುಕ್ತರು ತಿಳಿಸಿದ್ದಾರೆ.
ಅಂಧೇರಿ, ಕುರ್ಲಾ, ಭಾಂಡೂಪ್, ಕಿಂಗ್ಸ್ ಸರ್ಕಲ್ ಮತ್ತು ದಾದರ್ ಸೇರಿದಂತೆ ಹಲವು ಪ್ರದೇಶಗಳು ಮಳೆಯಿಂದ ಹೆಚ್ಚು ಹಾನಿಯುಂಟಾಗಿವೆ. ಬಹುತೇಕ ಪ್ರದೇಶಗಳಲ್ಲಿ 2 ಅಡಿಗೂ ಹೆಚ್ಚು ನೀರು ಸಂಗ್ರಹಗೊಂಡಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ನಾಗರಿಕ ಮಂಡಳಿಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರಣಿ ಅವಘಡಗಳಿಂದ ಬಯಲಾದ ಮೋದಿಯವರ ‘ಅಭಿವೃದ್ಧಿ ಮತ್ತು ಆಡಳಿತ’
ಭಾರೀ ಮಳೆಯಿಂದಾಗಿ ಉಪನಗರ ರೈಲು ಸೇವೆಗಳು ಮತ್ತು ಬೆಸ್ಟ್ ಬಸ್ ಸೇವೆಗಳಿಗೆ ಅಡಚಣೆಯುಂಟಾಗಿದೆ. ಹಲವು ಬೆಸ್ಟ್ ಬಸ್‌ಗಳನ್ನು ಅವುಗಳ ನಿಯಮಿತ ಮಾರ್ಗಗಳಿಂದ ಬೇರೆಡೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹವಾಮಾನ ಅಧಿಕಾರಿಗಳ ಪ್ರಕಾರ, ಮುಂದಿನ ಗಂಟೆಗಳಲ್ಲಿ ನಗರದಲ್ಲಿ ಭಾರೀ ಮಳೆ ಮುಂದುವರಿಯುವ ನಿರೀಕ್ಷೆಯಿದೆ.
ರೈಲುಗಳ ರದ್ದು
ಕೇಂದ್ರ ರೈಲ್ವೆ ಎಂಎಂಆರ್ ಸಿಎಸ್‌ಎಂಟಿ (12110), ಪುಣೆ-ಸಿಎಸ್‌ಎಂಟಿ (11010), ಪುಣೆ-ಸಿಎಸ್‌ಎಂಟಿ ಡೆಕ್ಕನ್ (12124), ಪುಣೆ-ಸಿಎಸ್‌ಎಂಟಿ ಡೆಕ್ಕನ್ (11007) ಮತ್ತು ಸಿಎಸ್‌ಎಂಟಿ-ಪುಣೆ ಇಂಟರ್‌ಸಿಟಿ ಎಕ್ಸ್‌ಪ್ರೆಸ್ (12127) ರೈಲುಗಳನ್ನು ರದ್ದುಗೊಳಿಸಲಾಗಿದೆ.
ಹಳಿಗಳಲ್ಲಿ ನೀರು ಹೆಚ್ಚಿದ ಕಾರಣ ಸ್ಥಳೀಯ ರೈಲು ಸೇವೆಗಳನ್ನು ಸಹ ಸ್ವಲ್ಪ ಸಮಯದವರೆಗೆ ನಿಲ್ಲಿಸಿ ನಂತರ ಪುನರಾರಂಭಿಸಲಾಯಿತು.
“ಭಾರೀ ಮಳೆಯಿಂದಾಗಿ ಕೇಂದ್ರ ರೈಲ್ವೆ ಉಪನಗರ ಸೇವೆಗಳಿಗೆ ಅಡಚಣೆಯಾಗಿದೆ. ಸ್ಥಳೀಯ ಸಿಯಾನ್ ಮತ್ತು ಭಾಂಡೂಪ್ ಮತ್ತು ನಹೂರ್ ನಿಲ್ದಾಣಗಳ ನಡುವೆ ರೈಲು ಸೇವೆಗಳು ತೊಂದರೆಗೀಡಾಗಿವೆ. ಮಳೆ ನೀರು ಹಳಿಗಳ ಮೇಲೆ ನಿಂತ ಕಾರಣ ರೈಲುಗಳನ್ನು ಸುಮಾರು ಒಂದು ಗಂಟೆ ಸ್ಥಗಿತಗೊಳಿಸಲಾಗಿತ್ತು. ಈಗ ನೀರು ಸ್ವಲ್ಪ ಕಡಿಮೆಯಾಗಿದ್ದು, ರೈಲುಗಳನ್ನು ಪುನರಾರಂಭಿಸಲಾಗಿದೆ” ಎಂದು ಹಿರಿಯ ರೈಲ್ವೆ ಅಧಿಕಾರಿ ತಿಳಿಸಿದ್ದಾರೆ.
ಮಳೆಯ ಕಾರಣದಿಂದ ಇಂದು ಮುಂಬೈ ವಿಮಾನ ನಿಲ್ದಾಣದ ಮಾರ್ಗದಲ್ಲಿ ಭಾರೀ ದಟ್ಟಣೆ ಮತ್ತು ನಿಧಾನಗತಿಯ ವಾಹನಗಳ ಸಂಚಾರ ಉಂಟಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ತಮ್ಮ ಪ್ರಯಾಣಕ್ಕಾಗಿ ಹೆಚ್ಚಿನ ಸಮಯವನ್ನು ಮೀಸಲಿಡುವಂತೆ ವಿಮಾನಯಾನ ಸಂಸ್ಥೆಗಳು ಸೂಚನೆ ನೀಡಿವೆ.