ವೆಸ್ಟ್ ಇಂಡೀಸ್ನಲ್ಲಿ 2024ನೇ ಸಾಲಿನ ಟಿ20 ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದ ರೋಹಿತ್ ಶರ್ಮಾ ಸಾರಥ್ಯದ ಭಾರತ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) 125 ಕೋಟಿ ರೂ. ಬಹುಮಾನ ಘೋಷಿಸಿದೆ.
15 ಮಂದಿ ಆಟಗಾರರು ಸೇರಿ ಒಟ್ಟು 42 ಮಂದಿಯ ತಂಡ ಟಿ20 ವಿಶ್ವಕಪ್ ಸಲುವಾಗಿ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ಗೆ ಪ್ರಯಾಣ ಬೆಳೆಸಿತ್ತು. ಆಟಗಾರರ ಹೊರತಾಗಿ ಕೋಚ್, ಸಹಾಯಕ ಸಿಬ್ಬಂದಿ ಮುಂತಾದವರು ಇದ್ದರು. ಬಿಸಿಸಿಐ ಘೋಷಿಸಿರುವ 125 ಕೋಟಿ ರೂ. ಬಹುಮಾನವು 42 ಮಂದಿಗೂ ಹಂಚಿಕೆಯಾಗುತ್ತದೆ.
ಇದರಲ್ಲಿ ಟೀಂ ಇಂಡಿಯಾದ 15 ಮಂದಿಗೆ ತಲಾ ಐದೈದು ಕೋಟಿ ರೂ. ನಿಡಲಾಗಿದೆ. ಒಂದೂ ಪಂದ್ಯವನ್ನು ಆಡದವರು ಕೂಡ ಬಹುಮಾನದ ಹಣ ಪಡೆಯಲಿದ್ದಾರೆ.ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಕೂಡ 5 ಕೋಟಿ ರೂ. ಪಡೆಯಲಿದ್ದಾರೆ.
15 ಆಟಗಾರರಲ್ಲದೆ ಮೀಸಲು ಆಟಗಾರರಾದ ಶುಭ್ಮನ್ ಗಿಲ್, ಆವೇಶ್ ಖಾನ್ ಹಾಗೂ ಖಲೀಲ್ ಅಹಮದ್ ಅವರಿಗೆ ಬಹುಮಾನದ ಮೊತ್ತದಲ್ಲಿ 1 ಕೋಟಿ ರೂ. ನೀಡಲಾಗುತ್ತದೆ.
ಈ ಸುದ್ದಿ ಓದಿದ್ದೀರಾ? ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು: ಅಭಿಷೇಕ್ ಶರ್ಮಾ ದಾಖಲೆ ಶತಕ
ಕೋಚ್ ರಾಹುಲ್ ದ್ರಾವಿಡ್ ಅವರ ಸಹಾಯಕ ಸಿಬ್ಬಂದಿಯಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಕ್ಷೇತ್ರ ರಕ್ಷಣೆ ಕೋಚ್ ಟಿ ದಿಲೀಪ್, ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ತಲಾ 2.5 ಕೋಟಿ ರೂ. ಪಡೆಯಲಿದ್ದಾರೆ. ಅಜಿತ್ ಅಗರ್ಕರ್ ಒಳಗೊಂಡು ಆಯ್ಕೆ ಸಮಿತಿಯ ಸದಸ್ಯರಿಗೆ ತಲಾ ಒಂದು ಕೋಟಿ ರೂ. ನೀಡಲಾಗುತ್ತದೆ.
ಬೆಂಬಲಿತ ಸಹಾಯಕ ಸಿಬ್ಬಂದಿಯಾದ ಮೂವರು ಫಿಜಿಯೋಥೆರಪಿಗಳು, ಮೂವರು ಥ್ರೋಡೌನ್ ಪರಿಣಿತರು, ಇಬ್ಬರು ಮಾಲೀಶುಗಾರರು ಹಾಗೂ ಸದೃಢತೆ, ನಿಯಂತ್ರಿಸುವ ಕೋಚ್ ತಲಾ 2 ಕೋಟಿ ರೂ. ಪಡೆಯಲಿದ್ದಾರೆ.
“ಆಟಗಾರರು ಹಾಗೂ ಬೆಂಬಲಿತ ಸಿಬ್ಬಂದಿ ಸೇರಿ ಪ್ರತಿಯೊಬ್ಬರಿಗೂ ಇನ್ವಾಯ್ಸ್ ನೀಡಿ ಬಹುಮಾನದ ಹಣ ಪಡೆಯುವಂತೆ ಸೂಚಿಸಲಾಗಿದೆ” ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವಕಪ್ ಗೆದ್ದ ಟೀಂ ಇಂಡಿಯಾಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಕೂಡ 11 ಕೋಟಿ ಬಹುಮಾನ ಘೋಷಿಸಿದ್ದಾರೆ.