ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ನದಾಫ್ ಬಡಾವಣೆಯಲ್ಲಿ ಮಸೀದಿ ನಿರ್ಮಾಣವಾಗಿದ್ದು, ರೋಣ ಪುರಸಭೆಯ ಉಪಾಧ್ಯಕ್ಷ ಮಿಥುನ ಜಿ ಪಾಟೀಲ್ ಅವರು ಸಂವಿಧಾನದ ಪೀಠಿಕೆ ಓದುವ ಮೂಲಕ ಮಸೀದಿ-ಏ-ಉಮರ್ ಕಟ್ಟಡವನ್ನು ಉದ್ಘಾಟಿಸಿದರು.
ಉದ್ಘಾಟನೆ ಬಳಿಕ ಮಾತನಾಡಿದ ಅವರು “ಪ್ರಾರ್ಥನೆಯ ಅತ್ಯಮೂಲ್ಯ ಮೌಲ್ಯದ ಮೇಲೆ ವಿಶೇಷ ಒತ್ತು ನೀಡುವುದು ಇಸ್ಲಾಮಿನ ಗಮನಾರ್ಹ ಲಕ್ಷಣಗಳಲ್ಲಿ ಒಂದಾಗಿದೆ” ಎಂದು ಹೇಳಿದರು.
“ಧರ್ಮದ ರಚನೆಯಲ್ಲಿ ಪ್ರಾರ್ಥನೆಯು ಮುಖ್ಯ ಸ್ತಂಭವಾಗಿದೆ. ಇದು ಮನುಷ್ಯನ ನೈತಿಕ ಉನ್ನತಿಯ ಪ್ರಬಲ ಸಾಧನವಾಗಿದೆ. ಮುಸಲ್ಮಾನ್ ಸಮುದಾಯವು ಮಸೀದಿಯನ್ನು ಸಂಪೂರ್ಣವಾಗಿ ಬಳಸಿದರೆ ಮತ್ತು ಅವರು ಪ್ರಾರ್ಥನೆ ಮತ್ತು ಧ್ಯಾನಕ್ಕಾಗಿ(ಮಸ್ಜೀದಿಯನ್ನು) ನಿರಂತರವಾಗಿ ಆಶ್ರಯಿಸಿದರೆ ಅದು ನನಗೆ ತುಂಬಾ ಸಂತೋಷವನ್ನು ನೀಡುತ್ತದೆ” ಎಂದು ಮಿಥುನ್ ಪಾಟೀಲ್ ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ವಿಜಯ ಮಹಾಂತ ಮಹಾಸ್ವಾಮಿ ಮೈಸೂರು ಸಂಸ್ಥಾನಮಠ, ಕುದರಿಮೋತಿ-ಗಜೇಂದ್ರಗಡ ಅವರು ಮಾತನಾಡಿ, “ಕೂಡಿ ಬಾಳುವುದರಲ್ಲಿ ಮನುಷ್ಯ ಬದುಕಿನ ಸಾರ್ಥಕತೆ ಅಡಗಿದೆ. ಸಾಮಾಜಿಕ ಸ್ವಾಸ್ಥ್ಯ, ಸೌಹಾರ್ದತೆ, ಭಾವೈಕ್ಯತೆ, ಸಾಮರಸ್ಯವು ಉತ್ತಮ ಸಮಾಜದ ಆಧಾರ ಸ್ಥಂಭಗಳಾಗಿವೆ. ಸಮಾಜದ ಜೀವಿಯಾದ ಮನುಷ್ಯ ಸಾಮಾಜಿಕ ಪರೋಪಕಾರ ಪ್ರಜ್ಞೆಯೊಂದಿಗೆ ಬದುಕಿದಾಗ ಮಾತ್ರ ಒಂದು ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ” ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಷ್ಟಗಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಟಿಬಿ ಡ್ಯಾಂ ಕಾಡಾ ಅಧ್ಯಕ್ಷರೂ ಆಗಿರುವ ಮುನಿರಾಬಾದ್ ಮಾತನಾಡಿ, “ಪರಸ್ಪರ ಸೌಹಾರ್ದತೆ, ಸಹಬಾಳ್ವೆ, ಸಹನೆಯಿಂದ ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಬೆಳೆಸಿಕೊಂಡರೆ ಸಮಾಜದ ಹಾಗೂ ದೇಶದ ಅಭಿವೃದ್ಧಿ ಸಾಧ್ಯ. ತಿಳಿವಳಿಕೆಯ ಕೊರತೆಯಿಂದ ಧರ್ಮ-ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಕ್ಷುಲ್ಲಕ ಕಾರಣಕ್ಕೆ ಹಿಂದೂ ಮುಸಲ್ಮಾನರ ಸೌಹಾರ್ದತೆಗೆ ಧಕ್ಕೆ ಆಗಬಾರದು” ಎಂದು ಹೇಳಿದರು.
ಮಸೀದಿ ನಿರ್ಮಾಣಕ್ಕೆ ಸ್ಥಳವನ್ನು ದಾನವಾಗಿ ಕೊಟ್ಟ ಮಹೆಬೂಬಸಾಬ, ಮಹ್ಮದಲಿ, ಹುಸೇನಪಬಾಷಾ, ಜಾವೇದ್, ಇಬ್ರಾಹೀಂ ಇವರನ್ನು ಅತಿಥಿಗಳು ಗೌರವಿಸಿ ಸನ್ಮಾನಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಪ್ರವಾಸಿತಾಣಕ್ಕೆ ಬರುವ ಪ್ರವಾಸಿಗರಿಗೆ ಆನ್‌ಲೈನ್ ನೋಂದಣಿ ಕಡ್ಡಾಯ; ಸ್ಥಳೀಯರ ಆಕ್ರೋಶ
ವೇದಿಕೆಯಲ್ಲಿ ಮೌಲಾನಾ ಝಕ್ರಿಯಾ ಸಾಹೇಬ ಖಾಜಿ, ಮೌಲಾನಾ ಶಬ್ಬೀರ ಅಹ್ಮದ ಕಲ್ಮನಿ, ಹನಮಪ್ಪ ಹೊರಪೇಟಿ, ಇಮಾಮಸಾಬ ಬಾಗವಾನ, ಮೋದಿನಸಾಬ ಮುಜಾವರ, ಮಹೆಬೂಬಸಾಬ ಮಕಾನದಾರ ಮಹ್ಮದ ಹನೀಫ ಲಿಂಗಸ್ಗೂರ, ಮುರ್ತುಜಾಸಾಬ ನಧಾಫ್, ಗುಡುಸಾಬ ಬಾಗವಾನ ಇದ್ದರು.