ಬೀದಿ ನಾಯಿಯೊಂದು ಮಹಿಳೆಯನ್ನು ಪಾರು ಮಾಡಿದ ಘಟನೆ ಮುಂಬೈನಲ್ಲಿ ಇತ್ತೀಚೆಗೆ ನಡೆದಿದೆ ಎಂದು ಮಿಡ್ ಡೇ ಮುಂಬೈ ವರದಿ ಮಾಡಿದೆ. ಜೂನ್ 30ರಂದು ವಸಾಯಿಯ ತುಂಗರೇಶ್ವರ ಗಲ್ಲಿಯಲ್ಲಿ 32 ವರ್ಷದ ಅಕೌಂಟೆಂಟ್ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರ ಯತ್ನ ಮಾಡಿದಾಗ ಬೀದಿ ನಾಯಿಯು ಬೊಗಳಿ ಆತನು ಸ್ಥಳದಿಂದ ಕಾಲ್ಕೀಳುವಂತೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
35 ವರ್ಷ ಪ್ರಾಯದ ಆರೋಪಿ ಸಂದೀಪ್ ಖೋತ್ ಮಹಿಳೆಯನ್ನು ಹಿಂಬಾಲಿಸಿ ಬಂದು ಆಕೆಯನ್ನು ನೆಲಕ್ಕೆ ತಳ್ಳಿ ಆಕೆಯ ಬಾಯಿ ಮುಚ್ಚಿ ಅತ್ಯಾಚಾರದ ಬೆದರಿಕೆ ಹಾಕಿದ್ದಾನೆ. ಆದರೆ ಅಷ್ಟರಲ್ಲೆ ಸುತ್ತಮುತ್ತಲಿನ ಬೀದಿ ನಾಯಿ ಬೊಗಳಿಕೊಂಡು ಆರೋಪಿಯತ್ತ ಬಂದಿದೆ ಎಂದು ಪೊಲೀಸರು ತಿಳಿಸಿರುವುದಾಗಿ ಮಿಡ್ ಡೇ ಮುಂಬೈ ವರದಿ ಉಲ್ಲೇಖಿಸಿದೆ.
ಬೀದಿ ನಾಯಿಗಳು ತನ್ನ ಮೇಲೆ ದಾಳಿ ಮಾಡುವ ಆತಂಕದಲ್ಲಿ ಆರೋಪಿ ಮಹಿಳೆಯ ಮೇಲಿನ ಹಿಡಿತ ಸಡಿಲಗೊಳಿಸುತ್ತಿದ್ದಂತೆ ಮಹಿಳೆ ದುಷ್ಕರ್ಮಿಯನ್ನು ದೂರ ತಳ್ಳಿ ಮುಖ್ಯ ರಸ್ತೆಯತ್ತ ಓಡಿ ಹೋಗಿ ಅಪಾಯದಿಂದ ಪಾರಾಗಿದ್ದಾಳೆ. ಆದರೂ ಆರೋಪಿ ಆಕೆಯ ಐಫೋನ್ ಕದ್ದು ಪರಾರಿಯಾಗಿದ್ದಾನೆ.
ಮಹಿಳೆ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, “ನಾನು ತುಂಗರೇಶ್ವರ ಲೇನ್ ಮೂಲಕ ನಡೆದು ಝೈಗೋಟ್ ಐವಿಎಫ್ ಕೇಂದ್ರವನ್ನು ತಲುಪಿದಾಗ, 25ರಿಂದ 30ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ನನ್ನನ್ನು ಹಿಂಬಾಲಿಸಲು ಪ್ರಾರಂಭಿಸಿದರು. ಏಕಾಏಕಿ ನನ್ನ ಮುಂದೆ ಬಂದು ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ” ಎಂದು ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ರಾಯಚೂರು | ಬೀದಿ ನಾಯಿ ಕಡಿತಕ್ಕೆ ಒಳಗಾಗಿದ್ದ ಬಾಲಕಿ ಸಾವು
“ಅದಾದ ಬಳಿಕ ನಾನು ಕಿರುಚದಂತೆ ನನ್ನ ಬಾಯಿಯನ್ನು ತನ್ನ ಕೈಗಳಿಂದ ಮುಚ್ಚಲು ಪ್ರಯತ್ನ ಪಟ್ಟಿದ್ದಾನೆ. ನನ್ನನ್ನು ನೆಲಕ್ಕೆ ತಳ್ಳಿ ನನ್ನ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಅಷ್ಟರಲ್ಲೆ ಬೀದಿ ನಾಯಿಗಳು ಬೊಗಳಲು ಪ್ರಾರಂಭಿಸಿತು. ಆತನ ಹಿಡಿತ ತಪ್ಪಿತು. ನಾನು ಆಗ ಆತನಿಗೆ ಒದ್ದೆ. ಆತ ನನ್ನ ಐಫೋನ್ ಅನ್ನು ಕಸಿದುಕೊಂಡ, ನಾನು ತಪ್ಪಿಸಿಕೊಂಡು ಮುಖ್ಯ ರಸ್ತೆ ಕಡೆಗೆ ಓಡಿದೆ” ಎಂದು ಮಹಿಳೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಮಾಣಿಕಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರಾಜು ಮಾನೆ, “ತುಂಗರೇಶ್ವರ ಗಲ್ಲಿಯು ಮುಖ್ಯ ರಸ್ತೆಗೆ ಒಳ ದಾರಿಯಾಗಿದೆ. ತಡರಾತ್ರಿಯಾದ್ದರಿಂದ ಆ ಪ್ರದೇಶ ತೀರಾ ನಿರ್ಜನವಾಗಿತ್ತು. ಭಾರತ-ದಕ್ಷಿಣ ಆಫ್ರಿಕಾ ಫೈನಲ್ ದಿನ ಈ ಘಟನೆ ನಡೆದಿದೆ. ನಾವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 392, 354, 354 (ಡಿ) ಮತ್ತು 506 ರ ಅಡಿಯಲ್ಲಿ (ಬಿಎನ್‌ಎಸ್ ಜಾರಿಗೆ ಬರುವ ಮುನ್ನ ಪ್ರಕರಣ ದಾಖಲು) ಪ್ರಕರಣವನ್ನು ದಾಖಲಿಸಿದ್ದೇವೆ, ತನಿಖೆಯನ್ನು ಪ್ರಾರಂಭಿಸಿದ್ದೇವೆ” ಎಂದು ಮಾಹಿತಿ ನೀಡಿದ್ದಾರೆ.
ಐಫೋನ್ ಕದ್ದು ಸಿಕ್ಕಿಬಿದ್ದ ಕಾಮುಕ!
ಪಿಎಸ್‌ಐ ಹರೀಶ್ ಪಾಟೀಲ್ ಮತ್ತು ಇತರರ ನೇತೃತ್ವದ ತಂಡ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿದ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. “ನಾವು ಘಟನೆಯ 24 ಗಂಟೆಗಳ ಒಳಗೆ ಆರೋಪಿಯನ್ನು ಪತ್ತೆಹಚ್ಚಿದ್ದೇವೆ ಮತ್ತು ಅವನನ್ನು ಬಂಧಿಸಿದ್ದೇವೆ” ಎಂದು ಮಾನೆ ಹೇಳಿದ್ದಾರೆ. ಐಫೋನ್ ಕದ್ದ ಕಾರಣದಿಂದಾಗಿ ಐಫೋನ್ ಟ್ರೇಸ್ ಮಾಡಿ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶ| ಬೀದಿ ನಾಯಿಗಳ ದಾಳಿಗೆ 4 ವರ್ಷದ ಬಾಲಕಿ ಬಲಿ
ಆರೋಪಿ ಸಂದೀಪ್ ಖೋತ್ ಈ ಹಿಂದೆ ಪೊಲೀಸ್ ಅಧಿಕಾರಿ ಸೋಗಿನಲ್ಲಿ ಜನರನ್ನು ವಂಚಿಸಿದ ಆರೋಪವನ್ನು ಹೊಂದಿದ್ದಾನೆ. ವಂಚನೆ ಪ್ರಕರಣದಲ್ಲಿ ಮೂರು ವರ್ಷ ಶಿಕ್ಷೆ ಅನುಭವಿಸಿ ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಆತ ವಿವಾಹಿತನಾಗಿದ್ದು, ಈತನ ದುಷ್ಕೃತ್ಯಗಳನ್ನು ನೋಡಿ ಮನೆಯಿಂದ ಹೊರಹಾಕಲಾಗಿದೆ.
Illustrations/Uday Mohite
ಕೃಪೆ: ಮಿಡ್ ಡೇ ಮುಂಬೈ