ತೊಲಮಾಮಿಡಿ ಗ್ರಾಮದಲ್ಲಿ ಕಳೆದ ಮೂವತ್ತು ವರ್ಷಗಳಿಂದ ನಮ್ಮೂರಲ್ಲಿ ಸಿಸಿ ರಸ್ತೆ ನಿರ್ಮಾಣವಾಗಿಲ್ಲ. ಗ್ರಾಮದಲ್ಲಿನ ಒಳ ಚರಂಡಿಗಳಲ್ಲಿ ಮಣ್ಣು ತುಂಬಿದ ಪರಿಣಾಮ ಮಳೆ ಬಂದಾಗ ಮಳೆನೀರು, ಚರಂಡಿನೀರು ರಸ್ತೆ ಮೇಲೆ ಹರಿಯುತ್ತದೆ. ಇದರ ಪರಿಣಾಮವಾಗಿ ರಸ್ತೆಗಳು ಕೆಸರು ಗದ್ದೆಯಂತಾಗುತ್ತವೆ ಎಂಬುದು ಸ್ಥಳೀಯ ನಿವಾಸಿಗಳ ಅಳಲು.
ಬಳ್ಳಾರಿ ಗ್ರಾಮದಲ್ಲಿ ಒಂದೇ ಒಂದು ಸಿಸಿ ರಸ್ತೆ ಇಲ್ಲ, ಒಳ ಚರಂಡಿ ವ್ಯವಸ್ಥೆ ಇಲ್ಲ, ಯಾರಾದರೂ ಸತ್ತರೆ ಹೆಣ ಹೂಳುವುದಕ್ಕೆ ಸ್ಮಶಾನವೂ ಇಲ್ಲ. ಸ್ಮಶಾನಕ್ಕೆ ಹೋಗಲು ಸರಿಯಾದ ರಸ್ತೆ ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಪರಿಣಾಮ ಪರಿಣಾಮ ಮಳೆ ಬಂದರೆ ಸಾಕು ರಸ್ತೆಯ ತುಂಬಾ ನೀರು ನಿಲ್ಲುತ್ತದೆ. ಇದೇನು ರಸ್ತೆಯೋ, ಇಲ್ಲ ಕೆಸರು ಗದ್ದೆಯೋ ಎಂಬಂತಾಗುತ್ತದೆ ಹಾಗೂ ಗ್ರಾಮದಲ್ಲಿನ ಮುಖ್ಯ ರಸ್ತೆಯಲ್ಲಿ ಮೊಣಕಾಲುದ್ದ ನೀರು ನಿಲ್ಲುತ್ತದೆ. ಪರಿಣಾಮ ಬಸ್ಸು, ಬೈಕ್ ವಾಹನ ಸವಾರರು ಪ್ರಾಣ ಕೈಯಲ್ಲಿ ಇಟ್ಟುಕೊಂಡು ವಾಹನ ಚಲಾಯಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ತೊಲಮಾಮಿಡಿ ಅಲ್ಪ ಸ್ವಲ್ಪ ಸರಿಯಾಗಿದ್ದ ಸಹ ರಸ್ತೆಗಳನ್ನು ಜಲ ಜೀವನ ಮಿಷನ್ ಯೋಜನೆಯಡಿ ನಳ ಹಾಕುವುದಕ್ಕೆ ಹಾಳು ಮಾಡಲಾಗಿದ್ದು ನಳದಿಂದ ನೀರು ಬರುತ್ತಿಲ್ಲ, ರಸ್ತೆಯಲ್ಲಿನ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುತ್ತದೆ ಇದರಿಂದಾಗಿ ವಯೋವೃದ್ಧರು, ಮಕ್ಕಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಬಸ್ಸು ಲಾರಿ ಸೇರಿದಂತೆ ಬೈಕ್ ಸವಾರರು ರಸ್ತೆ ದಾಟಲು ಹರಸಾಹಸ ಪಡುತ್ತಿದ್ದಾರೆ ಎಂಬುದು ಗ್ರಾಮಸ್ಥರ ಅಳಲು
ಆರೋಗ್ಯ ಸಮಸ್ಯೆ: ಗ್ರಾಮದಲ್ಲಿ ಸರಿಯಾದ ಸಿಸಿ ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆ ಇಲ್ಲ, ರಸ್ತೆಯಲ್ಲಿನ ತಗ್ಗು ಪ್ರದೇಶಗಳಲ್ಲಿ ಮಳೆನೀರು ಮತ್ತು ಚರಂಡಿನೀರು ನಿಂತು ದುರ್ವಾಸನೆ ಬೀರುತ್ತಿವೆ ಹಾಗೂ ಸೊಳ್ಳೆಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ರಾತ್ರಿ ವೇಳೆ ಸೊಳ್ಳೆ ಕಚ್ಚುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ಬರುತ್ತಿವೆ.
ಸ್ಮಶಾನ ವ್ಯವಸ್ಥೆ : ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗುವುದಕ್ಕೆ ಸರಿಯಾದ ರಸ್ತೆ ಇಲ್ಲ. ಯಾರಾದರೂ ಮೃತಪಟ್ಟರೆ ಹೆಣ ಹೂಳುವುದಕ್ಕೂ ಕೂಡ ಸ್ಥಳವಿಲ್ಲ. ಪರಿಣಾಮ ಎಲ್ಲಿ ಬೇಕೆಂದರ ಅಲ್ಲಿ ಹೆಣ ಹೂಡುತ್ತಿದ್ದಾರೆ.
ಇಬ್ಬರು ಮಾಜಿ ಸಚಿವರಿಂದ ಭೂಮಿ ಪೂಜೆ : “ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗೂ ಮುನ್ನ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ, ಒಳಚರಂಡಿ ನಿರ್ಮಾಣಕ್ಕೆ ಬಳ್ಳಾರಿಯ ಮಾಜಿ ಸಚಿವ ಶ್ರೀರಾಮುಲು ಮತ್ತು ಮಾಜಿ ಸಚಿವ ಹಾಗೂ ಗ್ರಾಮೀಣ ಶಾಸಕ ನಾಗೇಂದ್ರ ಅವರು ಭೂಮಿ ಪೂಜೆ ಮಾಡಿ ಹೋದವರು ಮತ್ತೆ ನಮ್ಮೂರ ಕಡೆ ಬಂದೇ ಇಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಹಲವು ಬಾರಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ” ಎಂದು ಹಂಪಮ್ಮ ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಶಾಲೆಯ ಹೊಸ ಕೊಠಡಿಯ ಮೇಲ್ಛಾವಣಿ ಕುಸಿತ; ವಿದ್ಯಾರ್ಥಿಯ ತಲೆಗೆ ಗಂಭೀರ ಗಾಯ
ಸ್ಥಳೀಯ ನಿವಾಸಿ ಎರ್ರೆಮ್ಮ ಮಾತನಾಡಿ, “ಗ್ರಾಮದಲ್ಲಿನ ಮಹಿಳೆಯರು ಮತ್ತು ಮಕ್ಕಳು ಬೇರೆ ಊರಿಗೆ ಹೋಗಲು, ರೈತರು ಹೊಲ ಗದ್ದೆಗಳಿಗೆ ಹೋಗಲು, ವೃದ್ಧರು, ಮಹಿಳೆಯರು, ಮಕ್ಕಳು ರಾತ್ರಿ ವೇಳೆ ಮಲಮೂತ್ರ ವಿಸರ್ಜನೆಗೆ ಹೊರಗೆ ಹೋಗುವುದಕ್ಕೆ ಕಷ್ಟವಾಗಿದೆ ಪರಿಣಾಮ ನಮ್ಮೂರಿಗೆ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಮದುವೆ ಮಾಡಿಕೊಡುವುದಕ್ಕೂ ಹಿಂದೆಮುಂದೆ ನೋಡುತ್ತಿದ್ದಾರೆ. ಹಾಗಾಗಿ ಈ ಊರಲ್ಲಿ ಇರುವುದಕ್ಕಿಂತ ಬೇರೆ ಊರಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್