ಉದ್ಯೋಗ ಖಾತ್ರಿ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡ ಕೂಲಿಕಾರರು ರೈತರ ಹೊಲಗಳಲ್ಲಿಯೂ ದುಡಿಯುವಂತೆ ಮನರೇಗಾ ಯೋಜನೆಯಲ್ಲಿ ಅವಕಾಶ ಕಲ್ಪಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹಿಸಿದೆ.
ಹುಮನಾಬಾದ್ ತಾಲೂಕು ಘಟಕದ ಅಧ್ಯಕ್ಷ ಸತೀಷ ನನ್ನೂರೆ ನೇತ್ರತ್ವದಲ್ಲಿ ಪಟ್ಟಣದ ಎಪಿಎಂಸಿ ರೈತ ಭವನದಲ್ಲಿ ರೈತರು ಸಭೆ ನಡೆಸಿದರು. ಬಳಿಕ ಸ್ಥಳಕ್ಕೆ ಆಗಮಿಸಿ ಕ್ಷೇತ್ರದ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ರೈತ ಸಂಘದ ತಾಲೂಕಾಧ್ಯಕ್ಷ ಸತೀಷ ನನ್ನೂರೆ ಮಾತನಾಡಿ, ʼರಾಜ್ಯ ತೀವ್ರ ಬರಗಾಲಕ್ಕೆ ತುತ್ತಾಗಿರೈತರ ಬದುಕು ಅತಂತ್ರವಾಗಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಕೃಷಿ ಕೆಲಸಗಳಿಗೆ ಕಾರ್ಮಿಕರ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಸಕಾಲಕ್ಕೆ ಕೂಲಿ ಆಳು ಸಿಗದಕ್ಕೆ ಅದೆಷ್ಟೋ ಹೊಲಗಳು ಬಿತ್ತನೆ ಆಗಿಲ್ಲ. ಹೀಗಾಗಿ ನರೇಗಾ ಯೋಜನೆಯಡಿ ಕೃಷಿ ಕೆಲಸಕ್ಕೂ ಅವಕಾಶ ಕಲ್ಪಿಸಿದರೆ ರೈತರಿಗೆ ಅನುಕೂಲ ಆಗುತ್ತದೆ. ದೇಶದಲ್ಲಿ ಕೃಷಿ ಕ್ಷೇತ್ರವೂ ಉಳಿಯಲು ಸಾಧ್ಯʼ ಎಂದು ಹೇಳಿದರು.
ʼಹುಮ್ನಾಬಾದ್ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ದಶಕದ ಹಿಂದೆ ನಿರ್ಮಿಸಿದ ರೈತ ಭವನ ಎಪಿಎಂಸಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಾಳು ಬಿದ್ದಿದ್ದು, ರೈತರಿಗೆ ಎಳಷ್ಟು ಉಪಯೋಗ ಇಲ್ಲ. ಇದರಿಂದ ರೈತರ ವಸತಿ ಹಾಗೂ ಸಭೆ, ಸಮಾರಂಭಗಳು ನಡೆಸಲು ತೊಂದರೆಯಾಗುತ್ತಿದೆ. ಕೂಡಲೇ ರೈತ ಭವನ ದುರಸ್ತಿಗೊಳಿಸಬೇಕುʼ ಎಂದು ಶಾಸಕರಿಗೆ ಆಗ್ರಹಿಸಿದರು.
ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ʼರೈತರು ಬದುಕು ಉತ್ತಮವಾಗಿದ್ದರೆ ಮಾತ್ರ ದೇಶದ ಜನರು ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯ. ಆದರೆ ಅತಿವೃಷ್ಟಿ-ಅನಾವೃಷ್ಟಿ, ಬರಗಾಲಕ್ಕೆ ತುತ್ತಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ರೈತ ಸಂಘದ ಬೇಡಿಕೆಗಳ ಕುರಿತು ಕೃಷಿ ಸಚಿವರೊಂದಿಗೆ ಚರ್ಚಿಸುವೆ ಹಾಗೂ ಕುರಿತು ಅ.15ರಿಂದ ನಡೆಯುವ ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಸರ್ಕಾರದ ಗಮನಕ್ಕೆ ತರುವೆʼ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ದಾಳಿ ಮಾಡಿದ ಚಿರತೆಯನ್ನೇ ಕೊಂದ ಗ್ರಾಮಸ್ಥರು
ಈ ಸಂದರ್ಭದಲ್ಲಿ ರೈತ ಸಂಘದ ಕಾರ್ಯದರ್ಶಿ ದಿಲೀಪ ಕುಲ್ಕರ್ಣಿ ಹಾಗೂ ಪ್ರಮುಖರಾದ ಸಿದ್ದಣ್ಣಾ ಭೂಶೆಟ್ಟಿ, ಗುರುಲಿಂಗಪ್ಪಾ ಮೆಲ್ದೊಡ್ಡಿ, ರಿಯಾಜ್ ಪಟೇಲ್, ರಾಮಣ್ಣಾ ಸಂಚಾಜಿ, ಶ್ರಿನಿವಾಸ ರೆಡ್ದಿ, ಚನ್ನಬಸವ ಹುಚ್ಚೆ, ಗಣಪತರಾವ ಸೇಡೋಳ, ಮಾಹಿತಿ ಹುಣಸಗೇರಾ, ಕಾಶಪ್ಪಾ ಶಿವಪ್ಪಜಿ, ಗೋವಿಂದ ಹಂದಿಕೇರಾ, ರಾಮರಾವ ಕೇರೊರೆ, ದಾದಾರಾವ ಮೆಕ್ರೆ, ದಾಮಾಜಿ ಪಾಟೀಲ್, ಶ್ರೀನಿವಾಸರಾವ ಕಾಕೆ ಸೇರಿದಂತೆ ಇತರರಿದ್ದರು.