ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಸೋಮವಾರ ಉಗ್ರರು ಸೇನಾ ವಾಹನದ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಸೇನಾ ಯೋಧರು ಹುತಾತ್ಮರಾಗಿದ್ದು ಐವರು ಗಾಯಗೊಂಡಿದ್ದಾರೆ. ದಾಳಿಯ ನಂತರ, ಸೇನೆಯು ದಾಳಿಕೋರರ ಮೇಲೆ ಪ್ರತಿದಾಳಿ ಮಾಡಿದೆ ಎಂದು ವರದಿಯಾಗಿದೆ.
ಕಥುವಾ ಪಟ್ಟಣದಿಂದ 124 ಕಿ.ಮೀ ದೂರದಲ್ಲಿರುವ ಬದ್ನೋಟಾ ಗ್ರಾಮದ ಜೆಂಡಾ ನಲ್ಲಾಗೆ ಬೆಂಗಾವಲು ಪಡೆ ತಲುಪಿದಾಗ ಉಗ್ರರು ದಾಳಿ ನಡೆಸಿದ್ದಾರೆ. ಸೋಮವಾರ ಮಧ್ಯಾಹ್ನ 3.30ರ ಸುಮಾರಿಗೆ ಈ ಘಟನೆ ನಡೆದಿದೆ.
ಒಂದು ಬದಿಯಲ್ಲಿ ಬೆಟ್ಟ ಮತ್ತು ಇನ್ನೊಂದು ಕಡಿದಾದ ಇಳಿಜಾರಿನ ಸ್ಥಳದಿಂದ ಉಗ್ರಗಾಮಿಗಳು ದಾಳಿ ನಡೆಸಿದ್ದಾರೆ. ದಾಳಿಕೋರರು ಬೆಟ್ಟದ ಕಡೆಯಿಂದ ಕೆಳಗೆ ಬಂದಿದ್ದಾರೆ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ.
ದಾಳಿಯ ನಂತರ ಸೇನೆಯು ದಾಳಿಕೋರರೊಂದಿಗೆ ಗುಂಡಿನ ಚಕಮಕಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಗ್ರರು ಪಲಾಯನ ಮಾಡದಂತೆ ನೋಡಿಕೊಳ್ಳಲು ಸ್ಥಳದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಇನ್ನು ತೀವ್ರವಾಗಿ ಗಾಯಗೊಂಡ ಯೋಧರನ್ನು ಕಥುವಾ ಆಸ್ಪತ್ರೆಗೆ ರವಾನಿಸಲಾಗಿದೆ. ಕೆಲವರಿಗೆ ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
ಇದನ್ನು ಓದಿದ್ದೀರಾ? ಜಮ್ಮು ಕಾಶ್ಮೀರ| ನಾಲ್ವರು ಉಗ್ರರ ರೇಖಾಚಿತ್ರ ಬಿಡುಗಡೆ, 20 ಲಕ್ಷ ರೂ ಬಹುಮಾನ ಘೋಷಣೆ
2016ರ ಜುಲೈ 8ರಂದು ದಕ್ಷಿಣ ಕಾಶ್ಮೀರದಲ್ಲಿ ಎನ್‌ಕೌಂಟರ್‌ನಲ್ಲಿ ಹಿಜ್ಬುಲ್ ಮುಜಾಹಿದೀನ್ ‘ಕಮಾಂಡರ್’ ಬುರ್ಹಾನ್ ವಾನಿಯ ಕೊಲ್ಲಲ್ಪಟ್ಟಿದ್ದು ಅದೇ ದಿನಾಂಕದಲ್ಲಿ ಈ ದಾಳಿ ನಡೆದಿದೆ.
ಜಮ್ಮು ಕಾಶ್ಮೀರದಲ್ಲಿ ಕಳೆದ 48 ಗಂಟೆಗಳಲ್ಲಿ ಇದು ನಾಲ್ಕನೇ ಉಗ್ರಗಾಮಿ ಘಟನೆಯಾಗಿದೆ. ಜುಲೈ 6 ಮತ್ತು 7 ರಂದು ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಆರು ಉಗ್ರರು ಮತ್ತು ಇಬ್ಬರು ಸೈನಿಕರು ದಕ್ಷಿಣ ಕಾಶ್ಮೀರದಲ್ಲಿ ಹತರಾಗಿದ್ದರು. ಶನಿವಾರ ಬೆಳಗ್ಗೆ ರಾಜೌರಿಯಲ್ಲಿ ನಡೆದ ದಾಳಿಯಲ್ಲಿ ಒಬ್ಬ ಯೋಧ ಗಾಯಗೊಂಡಿದ್ದರು.
ಇದಕ್ಕೂ ಮೊದಲು ಜೂನ್ 11 ಮತ್ತು 12ರಂದು ನಡೆದ ಅವಳಿ ಎನ್‌ಕೌಂಟರ್‌ಗಳಲ್ಲಿ ಇಬ್ಬರು ಉಗ್ರರು ಮತ್ತು ಒಬ್ಬ ಸಿಆರ್‌ಪಿಎಫ್ ಯೋಧ ಸಾವನ್ನಪ್ಪಿದ್ದರು, ಆರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು.
ಜಮ್ಮು ಕಾಶ್ಮೀರ ಉಗ್ರ ದಾಳಿ ವಿಚಾರದಲ್ಲಿ ವಿಪಕ್ಷವು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. “ನಿರಂತರ ಭಯೋತ್ಪಾದಕ ದಾಳಿಗಳಿಗೆ ಉತ್ತರವು ಕಠಿಣ ಕ್ರಮವಾಗಿರಬೇಕು, ಪೊಳ್ಳು ಭಾಷಣಗಳು ಮತ್ತು ಸುಳ್ಳು ಭರವಸೆಗಳಲ್ಲ” ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಇನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, “ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ನಮ್ಮ ನಾಲ್ವರು ವೀರ ಭಾರತೀಯ ಸೇನೆಯ ಯೋಧರು ಹುತಾತ್ಮರಾಗಿದ್ದರಿಂದ ತೀವ್ರ ದುಃಖವಾಗಿದೆ. ಆರು ಯೋಧರು ಗಾಯಗೊಂಡಿದ್ದಾರೆ” ಎಂದು ತಿಳಿಸಿದ್ದಾರೆ.
“ಸೇನೆಯ ಮೇಲಿನ ಈ ಹೇಡಿತನದ ಭಯೋತ್ಪಾದಕ ದಾಳಿಯನ್ನು ನಾವು ನಿಸ್ಸಂದಿಗ್ಧವಾಗಿ ಖಂಡಿಸುತ್ತೇವೆ” ಎಂದಿದ್ದಾರೆ.
Deeply anguished at the martyrdom of our 4 brave Indian Army soldiers in a terror attack in Jammu and Kashmir’s Kathua. 6 Jawans are also injured.
We unequivocally condemn this cowardly terror attack on the Army convey in the strongest possible terms.
This is the fifth…
— Mallikarjun Kharge (@kharge) July 8, 2024