“ಮುಡಾದಲ್ಲಿ ನಡೆದಿರುವ ಅಕ್ರಮ ಸುಮಾರು ಹತ್ತು ಸಾವಿರ ಕೋಟಿಯಷ್ಟಿದೆ. ಇಲ್ಲಿನ ಪೊಲೀಸರಿಂದ ಈ ಪ್ರಕರಣದ ತನಿಖೆ ನಡೆಸಲು ಸಾಧ್ಯವಾಗುವುದಿಲ್ಲ. ಸಿಬಿಐ ನವರಿಂದ ಮಾತ್ರ ಮುಡಾ ಅಕ್ರಮ ತನಿಖೆ ನಡೆಸಲು ಸಾಧ್ಯ. ಹಾಗಾಗಿ ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು” ಎಂದು ಎಂಎಲ್‌ಸಿ ಎಚ್ ವಿಶ್ವನಾಥ್ ಆಗ್ರಹಿಸಿದರು.
ಮುಡಾದಲ್ಲಿ ಸಾವಿರಾರು ಕೋಟಿ ಹಗರಣ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಮೈಸೂರಿನ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
“ಮಹಾರಾಜರು ಸ್ಥಾಪಿಸಿದ ಮುಡಾದ ಮಾನವನ್ನು ಎಲ್ಲರೂ ಸೇರಿಕೊಂಡು ಹರಾಜು ಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಸೇರಿಕೊಂಡು ಮುಡಾದ ಮಾನ ಹರಾಜು ಹಾಕಿದ್ದಾರೆ. ಅಹಿಂದ ಹೆಸರಿನಲ್ಲಿ ಓಟು ತೆಗೆದುಕೊಂಡು ಅಹಿಂದ ಸಮುದಾಯಕ್ಕೆ ಟೋಪಿ ಹಾಕುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಮುಡಾ ಹಗರಣವನ್ನು ಅಷ್ಟು ಸುಲಭವಾಗಿ ಮುಚ್ಚಿ ಹಾಕಲು ಸಾಧ್ಯವಿಲ್ಲ” ಎಂದು ಹೇಳಿದರು.
“ಬದಲಿ ನಿವೇಶನ ಪಡೆದಿದ್ದೇನೆ ಎಂದು ನನ್ನ ವಿರುದ್ಧ ಆರೋಪಿಸಿದ್ದಾರೆ. ಮುಡಾದ ಅಕ್ರಮದಲ್ಲಿ ನನ್ನ ಪಾಲು ಇದೆ ಎಂದಿದ್ದಾರೆ. ನನ್ನ ಪತ್ನಿಗೆ ದೇವನೂರು 3ನೇ ಹಂತದಲ್ಲಿ ನೀಡಿದ್ದ ನಿವೇಶನದ ಬಳಿ ವರುಣ ನಾಲೆ ಹಾದು ಹೋಗಿದೆ. ಆ ಸ್ಥಳ ಮನೆ ನಿರ್ಮಿಸಲು ಯೋಗ್ಯವಾಗಿರಲಿಲ್ಲ. ಹಾಗಾಗಿ ಬೇರೆಡೆ ನಿವೇಶನ ನೀಡಿದ್ದಾರಷ್ಟೇ. ನನ್ನ ವಿರುದ್ಧ ಆರೋಪ ಮಾಡಿರುವ ಮುಡಾದ ಅಧ್ಯಕ್ಷ ಓರ್ವ ಮೂಢ” ಎಂದರು.
ಎಚ್ ವಿಶ್ವನಾಥ್ ಕೂಡ ಬದಲಿ ನಿವೇಶನ ಪಡೆದಿದ್ದಾರೆಂದು ಮುಡಾ ಅಧ್ಯಕ್ಷ ಕೆ ಮರೀಗೌಡ ಆರೋಪಿಸಿದ್ದರು. ಇದಕ್ಕೆ ಉತ್ತರಿಸಿದ ವಿಶ್ವನಾಥ್, “ಎಲ್ಲ ಕಾನೂನು ಬದ್ದವಾಗಿ ನಡೆದಿದೆ ಎಂದಿದ್ದಾರೆ. ಈ ವಿಚಾರದಲ್ಲಿ ಮುಡಾದವರು, ಸಚಿವರು ಬಾಯಿಗೆ ಬಂದಂತೆ ಮಾತನಾಡದಂತೆ ಸಿಎಂ ಸಿದ್ದರಾಮಯ್ಯ ಸೂಚಿಸಬೇಕು” ಎಂದು ತಿಳಿಸಿದರು.
“ನಮ್ಮ ಕುಟುಂಬಕ್ಕೆ ವಿಜಯನಗರ ಬಡಾವಣೆಯಲ್ಲಿ ಸೈಟ್ ಕೊಟ್ಟಿಲ್ಲ. ನನಗೂ ಸಿದ್ದರಾಮಯ್ಯಗೂ ಒಂದೇ ಅವಧಿಯಲ್ಲಿ ನಿವೇಶನ ಮಂಜೂರು ಆಗಿದೆ. ಕೆಳಗಿನ ಸೈಟ್ ಬದಲು ಮೇಲುಗಡೆ ಕೊಟ್ಟಿದ್ದಾರೆ. ನನಗೆ ಸೈಟ್ ಇದೆ ಅನ್ನೋದಾದ್ರೆ ನಿಮಗೆ ಯಾಕೆ ಸೈಟ್ ಇಲ್ಲ? ಈ ವಿಚಾರದಲ್ಲಿ ನನ್ನ ಹೆಂಡತಿಗೊಂದು ನ್ಯಾಯ, ಸಿದ್ದರಾಮಯ್ಯ ಅವರ ಹೆಂಡತಿಗೊಂದು ನ್ಯಾಯವೇ? ಇದೊಂದು ಕರ್ಮಕಾಂಡ” ಎಂದು ಆರೋಪಿಸಿದರು.