ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ತಾಲೂಕಿನ ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸುವಂತೆ ಪಾದಯಾತ್ರೆ ಮೂಲಕ ತಹಶೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ದಸಂಸ ಹಿರಿಯ ಮುಖಂಡ ಹರಿಹರ ಆನಂದ ಸ್ವಾಮಿ, “ಹುಣಸೂರು ತಾಲೂಕು ಶೋಷಿತ ವರ್ಗಗಳ ಹರಿಕಾರ ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರ ಕರ್ಮಭೂಮಿ. ವಿವಿಧತೆಯಲ್ಲಿ ಏಕತೆ ಹೊಂದಿರುವ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ತಾಲೂಕು ದಿನಗಳೆದಂತೆ ವಾಣಿಜ್ಯ ಚಟುವಟಿಕೆಯ ಕೇಂದ್ರವಾಗಿ ಬೆಳೆಯುತ್ತಿದೆ. ಆದರೆ ಇಲ್ಲಿನ ಸಮಸ್ಯೆಗಳು ಮಾತ್ರ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ” ಎಂದು ಆಕ್ರೋಶ ಹೊರಹಾಕಿದರು.
“ನೂರಾರು ಕುಟುಂಬಗಳು ವಸತಿ, ನಿವೇಶನವಿಲ್ಲದೆ ಬವಣೆಪಡುವಂತಾಗಿದೆ. ಇದಕ್ಕೆಲ್ಲ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಸೂಕ್ತ ಉತ್ತರ ಇಲ್ಲ. ಹಿಂದೆಲ್ಲ ಹೋರಾಟಗಾರರು ಎಂದರೆ ಭಯ ಇತ್ತು. ಸಂಘಟನೆಯವರು ಬಂದರೆ ಸಾಕು ಅಧಿಕಾರಿಗಳು ಭಯಭೀತರಾಗಿ ಕೆಲಸ ಮಾಡುತ್ತಿದ್ದರು. ಆದರೆ ಪರಿಸ್ಥಿತಿ ಈಗ ಹಾಗೆ ಇಲ್ಲ. ನಮ್ಮ ಸಂಘಟನೆಗಳಲ್ಲಿ ಒಗ್ಗಟ್ಟು ಇಲ್ಲ. ನಮ್ಮ ಬಲ ಕುಗ್ಗಿದೆ. ಇದನ್ನೆಲ್ಲ ಮೆಟ್ಟಿ ನಿಲ್ಲಬೇಕಾದರೆ ಸಂಘಟನೆಗಳು ಒಂದಾಗಬೇಕು ಬಲಿಷ್ಠವಾಗಬೇಕು” ಎಂದು ಕರೆಕೊಟ್ಟರು.
ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, “ಪಟ್ಟಣದಲ್ಲಿ ಅರಸು ಭವನ, ಸರ್ಕಾರಿ ಆಸ್ಪತ್ರೆ ಹೊಸದಾಗಿ ನಿರ್ಮಿಸಿ ವರ್ಷಗಳೇ ಕಳೆದಿವೆ. ಆದರೆ ಉದ್ಘಾಟನೆ ಭಾಗ್ಯ ಇನ್ನೂ ಸಿಕ್ಕಿಲ್ಲ. ರಸ್ತೆಗಳು ಗುಂಡಿ ಬಿದ್ದಿವೆ ಯಾರು ಕೇಳುವವರಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ನೀಡಬೇಕು. ಮುಖ್ಯಮಂತ್ರಿಗಳು ತಮ್ಮ ತವರು ಜಿಲ್ಲೆಯ ಬಗ್ಗೆ ಗಮನಹರಿಸಬೇಕು” ಎಂದರು.
ಪ್ರತಿಭಟನೆಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಅತ್ತಿಕುಪ್ಪೆ ರಾಮಕೃಷ್ಣ, ನಿಂಗರಾಜು ಮಲ್ಲಾಡಿ, ರತ್ನಾಪುರಿ ಪುಟ್ಟಸ್ವಾಮಿ,ನೇತ್ರಾವತಿ, ಬೆಂಕಿಪುರ ಚಿಕ್ಕಣ್ಣ,ಸ್ವಾಮಿ ಗೌಡ, ಶಿವರಾಜು,ಮಹದೇವಮ್ಮ, ವಿ ಬಸವರಾಜು, ಕಾಂತರಾಜು, ಪ್ರಕಾಶ್, ದಶರಥ, ದೇವರಾಜ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.
ಈ ದಿನ ಇಂಪ್ಯಾಕ್ಟ್:
ಹುಣಸೂರು ತಾಲೂಕು ಸರ್ಕಾರಿ ಆಸ್ಪತ್ರೆ ಕುರಿತು ಈ ದಿನ.ಕಾಮ್ ಇತ್ತೀಚೆಗೆ ವಿಶೇಷ ಸುದ್ದಿ ಮಾಡಿತ್ತು. ಇದರ ಪರಿಣಾಮವಾಗಿ ಸರ್ಕಾರದಿಂದ 9 ಕೋಟಿ ಹಣ ಬಿಡುಗಡೆಯಾಗಿದೆ. ಪ್ರಗತಿಪರ ಸಂಘಟನೆಗಳು ಈ ದಿನ.ಕಾಮ್ ಮಾಧ್ಯಮಕ್ಕೆ ಧನ್ಯವಾದ ಸಲ್ಲಿಸಿದರು.
ಬೇಡಿಕೆಗಳು:
- ಸಾರ್ವಜನಿಕ ಆಸ್ಪತ್ರೆ ಹೊಸ ಕಟ್ಟಡವನ್ನು ಕೂಡಲೇ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು.
- ಅರಸು ಭವನ ಕೂಡಲೆ ಉದ್ಘಾಟಿಸಬೇಕು.
- ಸಕ್ರಮ ಸಮಿತಿ ರಚಿಸಿ ಸಾಗುವಳಿ ಮಾಡುತ್ತಿರುವ ಎಲ್ಲ ರೈತರಿಗೂ ಸಾಗುವಳಿ ನೀಡಬೇಕು.
- ತಾಲೂಕಿನಲ್ಲಿರುವ ವಸತಿ ನಿವೇಶನ ರಹಿತರಿಗೆ ವಸತಿ ನಿವೇಶನ ಕಲ್ಪಿಸಬೇಕು.
- ರೈತರಿಗೆ ಹಗಲಿನ ಸಮಯದಲ್ಲಿ 8 ಗಂಟೆಗೆ 3 ಫೇಸ್ ವಿದ್ಯುತ್ ನೀಡಬೇಕು.
- ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ನೀಡುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು.
- ನಗರಸಭೆ ಹಾಗೂ ಪಂಚಾಯ್ತಿಗಳಲ್ಲಿ ಮೀಸಲಿಟ್ಟ ಹಣವನ್ನು ಎಸ್ಸಿ,ಎಸ್ಟಿ ಪಂಗಡದ ಅಂಗವಿಕಲರಿಗೆ ಹಾಗೂ ಹಿಂದುಳಿದ ವರ್ಗಗಳಿಗೆ ಬಳಸಬೇಕು
- ಎಪಿಎಂಸಿ ಸ್ವಚ್ಚತೆ ಕಾಪಾಡಲು ಕ್ರಮವಹಿಸಬೇಕು.
- ದುಸ್ಥಿತಿಯಲ್ಲಿರುವ ಬಿಳಿಕೆರೆ ನಾಡ ಕಚೇರಿಗೆ ಹೊಸ ಕಟ್ಟಡ ನಿರ್ಮಿಸಲು ಕ್ರಮವಹಿಸಬೇಕು.
- ಚಿಲ್ಕುಂದವನ್ನು ಹೋಬಳಿ ಕೇಂದ್ರವನ್ನಾಗಿಸಬೇಕು.
